ಖ್ಯಾತ ಆಹಾರ ತಜ್ಞ, ಚಿಂತಕ, ಲೇಖಕ, ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಘು (60) ಅವರು ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗಿದ್ದು, ಬೆಂಗಳೂರಿನ ದಾಸರಹಳ್ಳಿಯ ಅಮೃತ ನಗರದಲ್ಲಿರುವ ಅವರ ನಿವಾಸದಲ್ಲಿ 7.30ರ ಸುಮಾರಿಗೆ ನಿಧನರಾಗಿದ್ದಾರೆ ಎಂದು ಅವರ ಪತ್ನಿ ಆಶಾ ರಘು ಅವರು ಮಾಹಿತಿ ನೀಡಿದ್ದಾರೆ.
ಆಹಾರ ಆರೋಗ್ಯದ ವಿಚಾರದಲ್ಲಿ ಸಂಪತ್ಭರಿತ ಜ್ಞಾನ ಹೊಂದಿದವರಾಗಿದ್ದರು, ಆಹಾರ ವಿಚಾರದಲ್ಲಿ ಸಾಕಷ್ಟು ನಿಖರ ವಿಚಾರ ವಿನಿಮಯ ಮಾಡುತ್ತಿದ್ದ ರಘು ಅವರ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.
ರಘು ಅವರು ಪ್ರಿಸ್ಟೀನ್ ಆರ್ಗ್ಯಾನಿಕ್ಸ್ ಎಂಬ ಸಂಸ್ಥೆ ಸ್ಥಾಪಿಸಿ ನವಜಾತ ಶಿಶುಗಳಲ್ಲಿ ಕಂಡುಬರುವ ಮಾರಕ ಕಾಯಿಲೆಗಳಿಗೆ ಪೌಷ್ಟಿಕಾಂಶದ ಪರಿಹಾರವನ್ನು ಸಂಶೋಧನೆಯಿಂದ ಕಂಡುಹಿಡಿದ್ದರು. ಈ ಕಾರ್ಯದಿಂದ ಸುಮಾರು 5 ಸಾವಿರ ನವಜಾತ ಶಿಶುಗಳನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದರು. ಭಾರತದಲ್ಲಿ ಈ ರೀತಿಯ ಪರಿಹಾರ ಒದಗಿಸುವ ಏಕೈಕ ಸಂಸ್ಥೆಯಾಗಿದೆ.
ಕೆ.ಸಿ.ರಘು ಅವರ ಇಚ್ಛೆಯಂತೆ ಅವರ ದೇಹವನ್ನು ಎಂ.ಎಸ್ ರಾಮಯ್ಯ ವೈದ್ಯಕೀಯ ಆಸ್ಪತ್ರೆಗೆ ದಾನ ಮಾಡಲಾಗುವುದು ಎಂದು ತಿಳಿದುಬಂದಿದೆ.