ವಿದ್ಯುತ್ ಸ್ಪರ್ಶದಿಂದ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಖಾಸಗಿ ಶಾಲಾ ಆವರಣದಲ್ಲಿ ನಡೆದಿದೆ.
ತಾಲೂಕಿನ ನಾಗೇನಹಳ್ಳಿ ನಿವಾಸಿ ರಾಘವೇಂದ್ರ, ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವ ವ್ಯಕ್ತಿ.
ಖಾಸಗಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳ ಪೋಷಕರಿಗಾಗಿ ಕ್ರೀಡಾಕೂಟವನ್ನ ಆಯೋಜನೆ ಮಾಡಲಾಗಿತ್ತು. ಕ್ರೀಡಾಕೂಟದ ಕಾರ್ಯಕ್ರಮಕ್ಕೆ ಹಾಕಿದ್ದ ಪೆಂಡಲ್ ದಿಢೀರ್ ಆಗಿ ಬಂದ ಬಿರುಗಾಳಿಗೆ ಹಾರಿ ಹೈಟೆನ್ಷನ್ ವಿದ್ಯುತ್ ತಂತಿಗೆ ತಗುಲಿದೆ. ಪೆಂಡಲ್ ಕೆಳಗೆ ಇದ್ದ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ವಿದ್ಯುತ್ ಸ್ಪರ್ಶವಾಗಿದೆ.
ವಿದ್ಯುತ್ ಸ್ಪರ್ಶದಿಂದ ಓರ್ವ ಪೋಷಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸುಮಾರು 17 ಮಂದಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪೋಷಕರ ಕ್ರೀಡಾಕೂಟದ ವೇಳೆ ವಿದ್ಯುತ್ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಆಸ್ಪತ್ರೆಗೆ ಶಾಸಕ ಕೆ. ಎಚ್.ಪುಟ್ಟಸ್ವಾಮಿಗೌಡ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ನಂತರ ಅಧಿಕಾರಿಗಳ ಬಳಿ ಈ ಕುರಿತು ಮಾಹಿತಿ ಪಡೆದು ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.