
ಎಲ್ಲರನ್ನು ಬೆಚ್ಚಿಬೀಳಿಸುವಂತಹ ಭೀಕರ ರಸ್ತೆ ಅಪಘಾತವೊಂದು ಚಿತ್ರದುರ್ಗದ ಬಳಿ ನಡೆದಿದ್ದು, ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ‘ಸೀ ಬರ್ಡ್’ ಖಾಸಗಿ ಬಸ್ ಲಾರಿಗೆ ಡಿಕ್ಕಿಯಾಗಿ ಹೊತ್ತಿ ಉರಿದ ಪರಿಣಾಮ 9 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ.
ಇಂದು ಮುಂಜಾನೆ ಈ ಭೀಕರ ದುರಂತ ಸಂಭವಿಸಿದೆ. ಬೆಂಗಳೂರಿನಿಂದ ರಾತ್ರಿ 8.30ಕ್ಕೆ ಹೊರಟಿದ್ದ ಕೆಎ 01-ಎಇ 5217 ನಂಬರಿನ ಸೀ ಬರ್ಡ್ ಬಸ್, ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ವಿರುದ್ಧ ದಿಕ್ಕಿನಿಂದ ಬಂದ ಲಾರಿಯೊಂದು ವೇಗವಾಗಿ ಬಂದು ಬಸ್ನ ಡೀಸೆಲ್ ಟ್ಯಾಂಕ್ಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಮೊದಲು ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬಸ್ಗೂ ಆವರಿಸಿದೆ.
ಬಸ್ನಲ್ಲಿ ಒಟ್ಟು 29 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ಡೀಸೆಲ್ ಟ್ಯಾಂಕ್ ಬಳಿಯೇ ಲಾರಿ ಗುದ್ದಿದ್ದರಿಂದ ಬೆಂಕಿ ತೀವ್ರವಾಗಿ ಹರಡಿದ್ದು, ಗಾಢ ನಿದ್ರೆಯಲ್ಲಿದ್ದ ಪ್ರಯಾಣಿಕರಿಗೆ ಹೊರಬರಲು ಸಾಧ್ಯವಾಗಿಲ್ಲ. ಈ ಪೈಕಿ 9 ಮಂದಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಬಸ್ ಒಳಗಡೆಯೇ ಸಜೀವ ದಹನವಾಗಿದ್ದಾರೆ. ಉಳಿದ 18 ಪ್ರಯಾಣಿಕರು ಕಿಟಕಿ ಹಾಗೂ ಎಮರ್ಜೆನ್ಸಿ ಡೋರ್ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಸಮೀಪದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.