ಖಾಸಗಿ ನಿವೇಶನದ ಜಾಗದಲ್ಲಿ ಜೆಸಿಬಿಯಿಂದ ಕೆಲಸ: ಪ್ರಶ್ನೆ ಮಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಕ್ಕೆ ಗ್ರಾ.ಪಂ ಸದಸ್ಯನಿಂದ ಹಲ್ಲೆ ಆರೋಪ

ಖಾಸಗಿ ನಿವೇಶನದ ಜಾಗದಲ್ಲಿ ಅನಧಿಕೃತವಾಗಿ ಜೆಸಿಬಿಯಿಂದ ಕೆಲಸ ಮಾಡುತ್ತಿರುವುದನ್ನು ಪ್ರಶ್ನೆ ಮಾಡಿ, ಆನಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪೊಲೀಸ್ ಠಾಣೆಗೆ ದೂರು ನೀಡಿದ ವ್ಯಕ್ತಿ ಮೇಲೆ ಗ್ರಾಮ ಪಂಚಾಯಿತಿ ಸದಸ್ಯ ಮತ್ತು ಆತನ ಕುಟುಂಬದವರು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಕುರಿತು ಪಂಚಾಯಿತಿ ಸದಸ್ಯನ ವಿರುದ್ಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ನಿವಾಸಿ ಉದಯಶಂಕರ್ ಮತ್ತು ಆತನ ಪತ್ನಿ ಕುಸುಮಾ ಮೇಲೆ ಗ್ರಾಮ ಪಂಚಾಯಿತಿ ಸದಸ್ಯರಾದ ಗಂಗಾಧರ್ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

ಆ.1ರ ಬೆಳಗ್ಗೆ 10 ಗಂಟೆ ಸಮಯದಲ್ಲಿ ಉದಯ ಶಂಕರ್ ರವರಿಗೆ ಸೇರಲಾಗಿದೆ ಎನ್ನಲಾಗಿರುವ ನಂಬರ್ 185/2ರ ನಿವೇಶನದ ಜಾಗದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಗಂಗಾಧರ್, ಅವರ ಮಗ ನವೀನ್, ಅಳಿಯ ನರಸಿಂಹಮೂರ್ತಿ ಜೆಸಿಬಿಯಿಂದ ಕೆಲಸ ಮಾಡುತ್ತಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಉದಯಶಂಕರ್ ನಮ್ಮ ನಿವೇಶದಲ್ಲಿ ಜೆಸಿಬಿ ಕೆಲಸ ಮಾಡುತ್ತಿರುವುದಕ್ಕೆ ಪ್ರಶ್ನೆ ಮಾಡಿದ್ದಾರೆ. ಈ ಜಾಗ ನನ್ನದು, ನಿನ್ನನ್ನು ಕೊಲೆ ಮಾಡುವ ಉದ್ದೇಶಕ್ಕೆ ಜೆಸಿಬಿ ತಂದಿರುವುದ್ದಾಗಿ ಪ್ರಾಣ ಬೆದರಿಕೆ ಹಾಕಿದ್ದಾರೆಂದು ಉದಯಶಂಕರ್ ಆರೋಪ ಮಾಡಿದ್ದಾರೆ.

ಪ್ರಾಣ ರಕ್ಷಣೆಗಾಗಿ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ವಾಪಸ್ ಬರುತ್ತಿದ್ದ ಉದಯಶಂಕರ್ ಮತ್ತು ಅವರ ಪತ್ನಿ ಕುಸುಮಾ ಅವರನ್ನು ಅಡ್ಡಗಟ್ಟಿದ ಗ್ರಾಮ ಪಂಚಾಯತ್ ಸದಸ್ಯರಾದ ಗಂಗಾಧರ್, ಮಗ ನವೀನ್, ಅಳಿಯ ನರಸಿಂಹಮೂರ್ತಿ ಅವಾಚ್ಯ ಶಬ್ಧಗಳಿಂದ ಬೈದು, ಹಲ್ಲೆ ಮಾಡಿದ್ದಾರೆ. ಇದೇ ಜಾಗದಲ್ಲಿ ಹೂತು ಹಾಕುವುದಾಗಿ ಜೀವ ಬೆದರಿಕೆ ಹಾಕಿದ್ದಾರೆಂದು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಹಲ್ಲೆಗೆ ತುತ್ತಾಗಿರುವ ಉದಯಶಂಕರ್ ರವರ ಪತ್ನಿ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಘಟನೆ ಸಂಬಂಧಿಸಿದಂತೆ ಎರಡು ಕಡೆಯವರು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಗ್ರಾಮದಲ್ಲಿ ಡೆಂಗ್ಯೂ ಪ್ರಕರಣಗಳು ಪತ್ತೆಯಾದ ಹಿನ್ನೆಲೆ, ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡು ನಿರ್ಣಯದಂತೆ ಸ್ವಚ್ಛತಾ ಕಾರ್ಯ ಪ್ರಾರಂಭಿಸಲಾಗಿತ್ತು. ಈ ವೇಳೆ ನನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಗ್ರಾಮ ಪಂಚಾಯತ್ ಸದಸ್ಯರಾದ ಗಂಗಾಧರ್ ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!