ಗ್ರಾಮದ ಸ್ಮಶಾನ ಜಾಗವನ್ನ ಖಾಸಗಿ ಕಂಪನಿ ಒತ್ತುವರಿ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಆದರೆ ಸ್ವಂತ ಊರಿನ ಗ್ರಾಮಸ್ಥರೇ ಒತ್ತುವರಿ ಆರೋಪ ತಳ್ಳಿ ಹಾಕಿದ್ದಾರೆ.. ಗ್ರಾಮಸ್ಥರ ಅನುಕೂಲಕ್ಕಾಗಿ ಸ್ಮಶಾನಕ್ಕೆ ಹೆಚ್ಚು ಭೂಮಿ ನೀಡಿದ್ದು ,ಮತ್ತು ಸ್ಮಶಾನಕ್ಕೆ ರಸ್ತೆ ಮಾಡಿಕೊಡುತ್ತಾರೆಂದು ಗ್ರಾಮಸ್ಥರು ಸಮರ್ಥನೆ ಮಾಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ವಡ್ಡರಹಳ್ಳಿ ಗ್ರಾಮದ ರೈಲ್ವೆ ಸ್ಟೇಷನ್ ಬಳಿ ಬಾಲಾಜಿ ಅರ್ಥ್ ಮೂವರ್ಸ್ ಕಂಪನಿ ಡಂಪಿಂಗ್ ಯಾರ್ಡ್ ನಿರ್ಮಾಣ ಮಾಡುತ್ತಿದೆ, ಸರ್ವೆ ನಂಬರ್ 19 ರಲ್ಲಿ ಗ್ರಾಮದ ಸ್ಮಶಾನ ಜಾಗವಿದ್ದು ಕಂಪನಿಗೆ ರಸ್ತೆ ಸಮಸ್ಯೆ ಎದುರಾಗಿತ್ತು..ಗ್ರಾಮಸ್ಥರ ಸಮ್ಮುಖದಲ್ಲಿ ತೀರ್ಮಾನ ಮಾಡಿ ಸ್ಮಶಾನಕ್ಕೆ ಯೋಗ್ಯವಲ್ಲದ ಭೂಮಿಯನ್ನು ಕಂಪನಿಯವರು 12 ಗುಂಟೆ ಜಮೀನನ್ನು ರಸ್ತೆಗೆ ಬಳಸಿಕೊಂಡು ಸುಮಾರು 1 ಕೋಟಿಗಿಂತ ಹೆಚ್ಚು ಬೆಲೆ ಬಾಳುವ ಜಾಗವನ್ನು ಸ್ಮಶಾನಕ್ಕೆ ಜಾಗ ನೀಡಿದ್ದಾರೆ.
ಅಲ್ಲದೆ ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗುವ ರಸ್ತೆ ಸಂಪರ್ಕವೇ ಕಟ್ ಆಗಿತ್ತು. ಗ್ರಾಮದಲ್ಲಿ ಸಾವು ಆದಾಗ 2 ಕಿ.ಮೀ ಸುತ್ತಬಳಸಿ ಸ್ಮಶಾನಕ್ಕೆ ಬರಬೇಕಾದ ಸ್ಥಿತಿ ಇತ್ತು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಕಂಪನಿ ಸ್ಮಶಾನಕ್ಕೆ ಸ್ವಂತ 34 ಗುಂಟೆ ಜಾಗವನ್ನ ಬಿಟ್ಟು ಕೊಟ್ಟಿದೆ, ಇದರ ಜೊತೆಗೆ ಸ್ಮಶಾನಕ್ಕೆ ಸಂಪರ್ಕಿಸುವ ರಸ್ತೆ ನಿರ್ಮಾಣ ಮಾಡುವ ಭರವಸೆಯನ್ನು ಕೊಟ್ಟಿದೆ.
ಇನ್ನು ಈ ಭಾಗದಲ್ಲಿ ಸಾಕಷ್ಟು ಬಡ ಕುಟುಂಬಗಳು ವಾಸ ಮಾಡುತ್ತಿದ್ದು ಈ ಕಂಪನಿ ಸ್ಥಾಪನೆಯಾದರೆ ಬಡವರಿಗೆ ಉದ್ಯೋಗ ಸೃಷ್ಟಿಯಾಗುತ್ತೆ..ನಿರುದ್ಯೋಗದ ಸಮಸ್ಯೆ ನಿವಾರಣೆಯಾಗುತ್ತದೆ. ಈ ಉದ್ದೇಶದಿಂದ ಈ ಜಾಗವನ್ನು ಬಿಡಲು ಗ್ರಾಮಸ್ಥರು ಒಪ್ಪಿದ್ದಾರೆ ಎಂದು ಗ್ರಾಮಸ್ಥ ಮಂಜುನಾಥ್ ತಿಳಿಸಿದರು.
ಈ ವೇಳೆ ಗ್ರಾಮಸ್ಥರಾದ ಮಂಜುನಾಥ್, ಶ್ರೀನಿವಾಸ ರೆಡ್ಡಿ, ಮನೋಹರ್, ಶ್ರೀನಿವಾಸ ಮೂರ್ತಿ, ಕೃಷ್ಣಪ್ಪ , ರವಿಕುಮಾರ್, ರಾಮಸ್ವಾಮಿ, ಅಂಬರೀಶ್, ರಮೇಶ್, ಜಗಣ್ಣ, ವಿಜಿಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.