ಇದು ಉತ್ತರಪ್ರದೇಶವಲ್ಲ, ಬಿಹಾರವೂ ಅಲ್ಲ… ಬದಲಿಗೆ ವಿಶ್ವಗುರು ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್‌ನಲ್ಲಿ ಖಾಸಗೀ ಕಂಪನಿಯ ಉದ್ಯೋಗಕ್ಕಾಗಿ ಒದ್ದಾಡುತ್ತಿರುವ ಯುವಜನತೆಯ ದೃಶ್ಯ.
ಗುಜರಾತ್‌ನ ಜಗಾಡಿಯಾದ ಭರೂಚ್‌ನಲ್ಲಿರುವ ಇಂಜಿನಿಯರಿಂಗ್ ಕಂಪನಿಯೊಂದು ಪ್ರಕಟಿಸಿದ 10 ಖಾಲಿ ಹುದ್ದೆಗಳಿಗೆ 1,800ಕ್ಕೂ ಹೆಚ್ಚು ಜನರು ಮುಕ್ತ ಸಂದರ್ಶನಕ್ಕೆ ಹಾಜರಾಗಿದ್ದರು.
ಸಂದರ್ಶನ ನಡೆಯುತ್ತಿದ್ದ ಹೊಟೇಲ್‌ನ ಪ್ರವೇಶದ್ವಾರಕ್ಕೆ ಎರಡೂ ಕಡೆಯಿಂದ ಎರಡು ಮೆಟ್ಟಿಲುಗಳ ಮೂಲಕ ನೂರಾರು ಮಂದಿ ಸರತಿ ಸಾಲಿನಲ್ಲಿ ಸಾಗುತ್ತಿರುವುದು ಕಂಡುಬಂದಿದೆ.
ನೇರ ಸಂದರ್ಶನಕ್ಕೆ ಅವಕಾಶ ಇದ್ದುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಯುವಕರು ಸಂದರ್ಶನ ನೀಡಲು ನಾ ಮುಂದು ತಾ ಮುಂದು ಎಂದು ನುಗ್ಗಿದ್ದಾರೆ ಈ ವೇಳೆ ನೂಕು ನುಗ್ಗಲು ಉಂಟಾಗಿ ಹೋಟೆಲ್ ಕಟ್ಟಡ ರೇಲಿಂಗ್ಸ್ ಮುರಿದು ಹೋಗಿದೆ.
ದೇಶದಲ್ಲಿ ನಿರುದ್ಯೋಗ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದಕ್ಕೆ ಇದು ಉದಾಹರಣೆಯಾಗಿದೆ. ವರ್ಷಕ್ಕೆ ಲೆಕ್ಕಕ್ಕೆ ಇಲ್ಲದಷ್ಟು ಯುವಕ, ಯುವತಿಯರು ವಿದ್ಯಾಭ್ಯಾಸ ಮುಗಿಸಿ ಕೆಲಸ ಹುಡುಕಲು ಆರಂಭಿಸುತ್ತಾರೆ. ಆದರೆ, ಕೆಲವರಿಗೆ ವಿದ್ಯಾಭ್ಯಾಸ ಮುಗಿಯುವ ಹೊತ್ತಿಗೆ ಕೆಲಸ ಸಿಕ್ಕರೆ ಇನ್ನು ಕೆಲವರು ಉದ್ಯೋಗದಿಂದ ವಂಚಿತರಾಗುತ್ತಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಯುವಕರ ನೂಕು ನುಗ್ಗಲಿನ ವಿಡಿಯೋ ವೈರಲ್ ಆಗಿದ್ದು ದೇಶದಲ್ಲಿ ನಿರುದ್ಯೋಗ ಯಾವ ಮಟ್ಟಿಗೆ ಇದೆ ಎಂಬುದನ್ನು ತೋರಿಸುವಂತಿದೆ.