ತಾಲೂಕಿನ ಕಾಡನೂರು ಗ್ರಾಮದಲ್ಲಿ ದಲಿತರಿಗೆ ಕ್ಷೌರ ನಿರಾಕರಣೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಸದಸ್ಯ ಓಬದೇನಹಳ್ಳಿ ಮುನಿಯಪ್ಪ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ಷೌರ ನಿರಾಕರಣೆ ಆರೋಪವನ್ನು ಇತ್ಯರ್ಥಗೊಳಸಿದರು.
ಈ ವೇಳೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಸದಸ್ಯ ಓಬದೇನಹಳ್ಳಿ ಮುನಿಯಪ್ಪ ಮಾತನಾಡಿ, 21ನೇ ಶತಮಾನದಲ್ಲೂ ಇಂತಹ ಆರೋಪ ಕೇಳಿ ಬರುವುದು ಹಾಗೂ ಅಸ್ಪೃಶ್ಯತೆ ಆಚರಣೆ ಮಾಡುವುದು ವಿಷಾದನೀಯ ವಿಚಾರವಾಗಿದೆ. ಗ್ರಾಮಕ್ಕೆ ಭೇಟಿ ಮಾಡಿ ಪರಿಶೀಲನೆ ನಡೆಸಿದಾಗ, ಗ್ರಾಮದಲ್ಲಿ ಕ್ಷೌರಿಕ ವೃತ್ತಿ ಮಾಡುತ್ತಿರುವ ಸೋಮು ಎಂಬುವವರು ಯಾವುದೇ ಅಸ್ಪೃಶ್ಯತೆ ಆಚರಣೆ ಮಾಡುತ್ತಿಲ್ಲ. ಆದರೆ ಆರೋಪ ಕೇಳಿ ಬಂದ ದಿನವೇ ಅದೇ ಸಮುದಾಯದ ವ್ಯಕ್ತಿಗೆ ಕ್ಷೌರಿಕೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ ಎಂದರು.
ಈ ಬಗ್ಗೆ ಸವಿತ ಸಮಾಜದ ತಾಲೂಕು ಕಾರ್ಯದರ್ಶಿ ನರಸಿಂಹ ರಾಜು ಮಾತನಾಡಿ, ತಾಲೂಕು ಮಟ್ಟದಲ್ಲಿ ಸವಿತ ಸಮಾಜದ ಜಾಗೃತಿ ಸಭೆಯನ್ನು ಮುಂದಿನ ದಿನಗಳಲ್ಲಿ ಆಯೋಜಿಸಿ ಯಾವುದೇ ತಾರತಮ್ಯ ಮಾಡಬಾರದೆಂಬ ಜಾಗೃತಿ ಸಭೆಯನ್ನು ಏರ್ಪಡಿಸಲಾಗುವುದು ಹಾಗೂ ತಾಲೂಕಿನಲ್ಲಿ ಇದುವರೆಗೂ ಯಾವುದೇ ಈ ತರಹದ ಪ್ರಕರಣಗಳು ಕಂಡುಬಂದಿಲ್ಲ ಇನ್ನು ಮುಂದೆ ಯಾವುದೇ ತಾರತಮ್ಯವಾಗದಂತೆ ಬುದ್ಧಿವಾದ ಹೇಳಿದ್ದೇವೆ ಎಂದು ತಿಳಿಸಿದರು.
ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಓಬಳೇಶ್, ಪೋಲಿಸ್ ಸಿಬ್ಬಂದಿ ಸುರೇಶ್, ಪಿಡಿಒ ಸೂರ್ಯನಾರಾಯಣ್, ಸವಿತಾ ಸಮಾಜದ ಮುಖಂಡರಾದ ರಾಮಂಜಿನೇಯ ಶ್ರೀನಾಥ್ ಉಪಸ್ಥಿತರಿದ್ದರು.