ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಹೆಚ್ಚು ಬಹುಮತ ಬರುವಂತೆ ಶ್ರಮವಹಿಸಿ- ಕಾರ್ಯಕರ್ತರಿಗೆ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಸೂಚನೆ

2024ರ ಸಾರ್ವತ್ರಿಕ‌‌ ಲೋಕಸಭೆ ಚುನಾವಣೆ ಹಿನ್ನೆಲೆ ಮತದಾರರ ಮನವೊಲಿಸಿ ಮತ ಪಡೆಯಲು ತಂತ್ರಗಾರಿಕೆಗಳನ್ನ ಹೆಣೆಯುವಲ್ಲಿ ಅಭ್ಯರ್ಥಿಗಳು ನಿರತರಾಗಿದ್ದಾರೆ.

ಅದೇರೀತಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ರಕ್ಷಾ ರಾಮಯ್ಯ ಟಿಕೆಟ್ ಪಡೆದು ಈಗಾಗಲೇ ಪ್ರಚಾರ ಕಾರ್ಯ ಪ್ರಾರಂಭಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪರವಾಗಿ ದೇನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ನವರು ತೂಬಗೆರೆ ಹೋಬಳಿಯ ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ತರುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು ಎಂದು ಕಾರ್ಯಕರ್ತರಿಗೆ ಸೂಚಿಸಿದರು.

ಪ್ರತಿಯೊಂದು ಬೂತ್ ಮಟ್ಟದಲ್ಲಿ 5 ಮಂದಿ ಮಹಿಳೆಯರು 15 ಮಂದಿ ಪುರುಷರು ಸೇರಿ 25 ಸದಸ್ಯರನ್ನೊಳಗೊಂಡ ಒಂದು ಕಮಿಟಿಯನ್ನ ಮಾಡಬೇಕು. ಕಮಿಟಿಯಲ್ಲಿರುವ ಸದಸ್ಯರು ತಮ್ಮ ವ್ಯಾಪ್ತಿಯ ಮತದಾರರ ಬಳಿ ತೆರಳಿ ಕಾಂಗ್ರೆಸ್ ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳ ಬಗ್ಗೆ ಮನವರಿಕೆ ಮಾಡಬೇಕು. ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ವೋಟ್ ಮಾಡುವಂತೆ ಮನವೊಲಿಸಬೇಕು ಎಂದು‌ ಸೂಚಿಸಿದರು.

ಕಾಂಗ್ರೆಸ್ ಗೆಲುವಿಗೆ ಪ್ರತಿಯೊಬ್ಬ ಕಾರ್ಯಕರ್ತ ಜವಾಬ್ದಾರಿ ತೆಗೆದುಕೊಂಡು ಈ ನಿಟ್ಟಿನಲ್ಲಿ ಶ್ರಮಿಸಬೇಕು. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಬಹುಮತ ದೊರಕಿಸಿ ಕೊಟ್ಟರೆ ಸರ್ಕಾರದಿಂದ 100 ಕೋಟಿ ಅನುದಾನ ಪಡೆದು ಕ್ಷೇತ್ರವನ್ನ ಇನ್ನಷ್ಟು ಅಭಿವೃದ್ಧಿ ಮಾಡುವಲ್ಲಿ ಶ್ರಮಿಸುತ್ತೇನೆ ಎಂದರು.

ಕ್ಷೇತ್ರದಲ್ಲಿ ಶಾಲಾ ಕಟ್ಟಡ ನವೀಕರಣ, ಕೆರೆ ಕಟ್ಟೆ ದುರಸ್ತಿ ಸೇರಿದಂತೆ ಎಸ್ ಎಸ್ ಘಾಟಿ‌ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ 5 ಸಾವಿರ ಮಂದಿ ಕುಳಿತುಕೊಂಡು ಊಟ ಮಾಡುವ ಕಲ್ಯಾಣ ಮಂಟಪ, ವಸತಿ ಕಟ್ಟಡ ನಿರ್ಮಾಣ ಮಾಡಲು ಚಿಂತಿಸಲಾಗಿದೆ ಎಂದರು.

ಈ ವೇಳೆ ಕೆಪಿಸಿಸಿ ಸದಸ್ಯ ಎಸ್. ಆರ್. ಮುನಿರಾಜ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎನ್.ಅರವಿಂದ್, ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಪ್ಪ, ಕಾರ್ಯದರ್ಶಿ ರವಿಸಿದ್ದಪ್ಪ, ಜಿಲ್ಲಾ ಮೀನುಗಾರಿಕಾ ಸಂಘದ ಅಧ್ಯಕ್ಷ ಆರ್. ವಿ. ಮಹೇಶ್, ಘಾಟಿ ಪಂಚಾಯ್ತಿ ಅಧ್ಯಕ್ಷೆ ಉಮಾ ಬಾಯಿ, ಸದಸ್ಯ ಪುರುಷೋತ್ತಮ್, ಮಾಜಿ ಸದಸ್ಯ ಪ್ರಸಾದ್, ತೂಬಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ನಂಜಮ್ಮ ನರಸಿಂಹಮೂರ್ತಿ, ಮಾಜಿ ಅಧ್ಯಕ್ಷ ಟಿ.ವಿ. ವೆಂಕಟೇಶ್ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *