ಕ್ರಿಕೆಟ್ ಟೂರ್ನಮೆಂಟ್ ನಡೆಯುವ ವೇಳೆ ನಡೆದ ಜಗಳ ಇಬ್ಬರು ಯುವಕರ ಸಾವಿಗೆ ಕಾರಣವಾಗಿದೆ, ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳದಲ್ಲಿ ಇಬ್ಬರು ಯುವಕರ ಗುಪ್ತಾಂಗಗಳಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಗ್ರಾಮದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿಯನ್ನ ಆಯೋಜಿಸಲಾಗಿತ್ತು, ಕ್ರಿಕೆಟ್ ಪಂದ್ಯದ ವೇಳೆ ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ, ಚಾಕುವಿನಿಂದ ಇಬ್ಬರು ಯುವಕರು ಗುಪ್ತಾಂಗಗಳಿಗೆ ಇರಿಯಲಾಗಿದ್ದು, ಚಾಕು ಇರಿತಕ್ಕೆ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಮೃತ ಯುವಕರನ್ನ ದೊಡ್ಡಬೆಳವಂಗಲದ ಭರತ್ (23), ಪ್ರತೀಕ್ (17) ಎಂದು ಗುರುತಿಸಲಾಗಿದೆ.
ಇಂದು ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಘಟನೆ ನಡೆದಿದ್ದು, ಮೊದಲಿಗೆ ಮೈದಾನದಲ್ಲಿ ವಾಹನ ಪಾರ್ಕಿಂಗ್ ಮಾಡುವ ವಿಚಾರಕ್ಕೆ ಸಂಬಂಧಿಸಿ ದೊಡ್ಡಬೆಳವಂಗಲ ಹಾಗೂ ಹುಲಿಕುಂಟೆ ಗ್ರಾಮದ ಯುವಕರ ನಡುವೆ ಗಲಾಟೆ ನಡೆದಿದೆ. ಅಷ್ಟಕ್ಕೆ ಸುಮ್ಮನಾಗದ ಯುವಕರು ಬಸ್ ನಿಲ್ದಾಣಕ್ಕೆ ಬಂದು ಹೊಡೆದಾಟಕ್ಕೆ ಇಳಿದಿದ್ದಾರೆ. ಈ ವೇಳೆ ಭರತ್ ಹಾಗೂ ಪ್ರತೀಕ್ ಅವರಿಗೆ ಎದುರಾಳಿ ಗುಂಪಿನ ಯುವಕರ ಗುಪ್ತಾಂಗ ಹಾಗೂ ಹೊಟ್ಟೆಯ ಭಾಗಕ್ಕೆ ಬಲವಾಗಿ ಇರಿದಿದ್ದಾರೆ. ಚಾಕು ಇರಿತಕ್ಕೆ ಒಳಗಾಗಿ ರಕ್ತದ ಮಡುವಿನಲ್ಲಿ ಹೊದ್ದಾಡುತ್ತಿದ್ದ ಯುವಕರನ್ನ ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಯುವಕರು ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ಇದ್ದು, ಸ್ಥಳಕ್ಕೆ ಬಂದ ಪೊಲೀಸರು ಉದ್ರಿಕ್ತ ಯುವಕರ ಗುಂಪಿನತ್ತ ಲಾಠಿ ಪ್ರಹಾರ ನಡೆಸಿ ಚೆದುರಿಸಿದರು. ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ನಂತರ ಆರೋಪಿಗಳು ಪರಾರಿಯಾಗಿದ್ದಾರೆ.