ಕ್ರಿ.ಶ. 8-9ನೇ ಶತಮಾನದ ಮಾಡೇಶ್ವರದ ಮುಕ್ಕಣ್ಣೇಶ್ವರ ದೇವಾಲಯವನ್ನು ಭೂಗಳ್ಳರಿಂದ ರಕ್ಷಿಸುವಂತೆ ಡಿಸಿಗೆ ಮನವಿ

ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿ, ಮಾಡೇಶ್ವರ ಗ್ರಾಮಕ್ಕೆ ಸೇರಿದ ಮುಕ್ಕಣ್ಣೇಶ್ವರ ದೇವಾಲಯವನ್ನು ಭೂಗಳ್ಳರಿಂದ ಸಂರಕ್ಷಿಸುವಂತೆ ಒತ್ತಾಯಿಸಿ‌ ಮಾಡೇಶ್ವರ ಗ್ರಾಮಸ್ಥರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಡಾ.ಶಿವಶಂಕರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ತಾಲ್ಲೂಕಿನಲ್ಲಿ ಈವರೆಗೆ ಲಭ್ಯವಾಗಿರುವ ದೇವಾಲಯಗಳಲ್ಲೇ ಅತ್ಯಂತ ಪುರಾತನ ದೇವಾಲಯ ಇದಾಗಿದೆ. ಇದು ಕ್ರಿ.ಶ. 8-9ನೇ ಶತಮಾನಕ್ಕೆ ಅಂದರೆ ಗಂಗರ ಕಾಲಕ್ಕೆ ಸೇರಿದ ದೇವಾಲಯವಾಗಿದ್ದು, ಗಂಗರ ಶೈಲಿಯಲ್ಲೇ ಉಳಿದುಕೊಂಡು ಬಂದಿದೆ. ಅಲ್ಲದೆ, ಹೊಯ್ಸಳರ ದೊರೆ ವಿಷ್ಣುವರ್ಧನನ ಕಾಲಕ್ಕೆ ಸೇರಿದ ತಮಿಳು ಶಾಸನವೂ ಸಹ ಇಲ್ಲಿದೆ.

ಇಂತಹ ಐತಿಹಾಸಿಕ ಮಹತ್ವವುಳ್ಳ, ಹುಲುಕುಡಿ ಬೆಟ್ಟಕ್ಕೆ ಹೊಂದಿಕೊಂಡಿರುವ, ಈ ಪುರಾತನ ದೇವಾಲಯದ ಬಳಿ ಇಂದು ಆಧುನಿಕ ಕಟ್ಟಡ ಕಾಮಗಾರಿಗಳು ನಡೆಯುತ್ತಿರುವುದಲ್ಲದೆ, ದೇವಾಲಯದ ಅವಶೇಷಗಳನ್ನು ಧ್ವಂಸ ಮಾಡಿ, ದೇವಾಲಯಕ್ಕೆ ಸೇರಿದ ಸ್ಥಳದಲ್ಲಿ ಕಾಂಪೌಂಡ್ ಕಟ್ಟಲು ಮುಂದಾಗಿರುವುದು ಕಂಡು ಬಂದಿರುತ್ತದೆ. ಇದು ನಿಜಕ್ಕೂ ಅನಧಿಕೃತ ಕಾರ್ಯವಾಗಿದ್ದು, ಐತಿಹಾಸಿಕ ಅವಶೇಷಗಳ ಸಂರಕ್ಷಣಾ ಕಾಯ್ದೆಯ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಅಲ್ಲದೆ ಪುರಾತನ ದೇವಾಲಯದಿಂದ ನೂರು ಮೀಟರ್ ಒಳಗೆ ಯಾವುದೇ ಆಧುನಿಕ ಕಟ್ಟಡ ಕಾಮಗಾರಿಗಳನ್ನು ಪುರಾತತ್ವ ಇಲಾಖೆಯ ಅನುಮತಿಯಿಲ್ಲದೆ ನಡೆಸುವಂತಿಲ್ಲ.

ಈಗ ನಮಗೆ ಈ ಪುರಾತನ ದೇವಾಲಯದ ಉಳಿಯುವಿಕೆ ಮುಖ್ಯವಾಗಿದ್ದು, ಒಮ್ಮೆ ಸ್ಥಳ ಪರಿಶೀಲನೆ ನಡೆಸಿ, ಪುರಾತನ ದೇವಾಲಯವನ್ನು ಮತ್ತು ಅದಕ್ಕೆ ಸೇರಿದ ಸ್ಥಳವನ್ನು ಉಳಿಸಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *