ಕ್ಯಾಲೆಂಡರಿನ ಮೊದಲನೇ ದಿನಕ್ಕೆ ಏನೇನು ಅವತಾರಗಳೋ…….

ಏನೇನು ಅವತಾರಗಳೋ, ಅಬ್ಬಬ್ಬಾ………

ಹೊಸ ವರ್ಷವೆಂಬ ಸಂಭ್ರಮ ಮತ್ತು ಉನ್ಮಾದ………..

ಸಾವಿರಾರು ಪೋಲೀಸರ ಬಿಗಿ ಬಂದೋ ಬಸ್ತ್, ದ್ರೋಣ್ ಕ್ಯಾಮರಾದ ಕಣ್ಗಾವಲು, ಕೆಲವು ರಸ್ತೆಗಳ ಬಂದ್, ಕುಡುಕ ಚಾಲಕರ ಮೇಲೆ ಕಠಿಣ ಕ್ರಮ, ಪೋಲೀಸ್ ಮುಖ್ಯಸ್ಥರಿಂದ ಎಲ್ಲಾ ಠಾಣೆಗಳಿಗೂ ಕಟ್ಟೆಚ್ಚರದ ಸೂಚನೆ, ಆಸ್ಪತ್ರೆಗಳಿಗೆ ಸಕಲ ಸಿದ್ದತೆಯ ಬಗ್ಗೆ ಮನವಿ……….

ಛೆ…ಛೆ…ಛೆ……
ಡಿಸೆಂಬರ್ ೩೧ ಎಂಬುದು ಪ್ರತಿಭಟನೆಯೇ ? ಚಳವಳಿಯೇ ?
ಹರತಾಳವೇ ?
ಗಲಭೆಯೇ ?
ಭಯಂಕರ ವಿದ್ಯುಮಾನವೇ ?…….

ನಾಚಿಕೆಯಾಗಬೇಕು ನಾಗರಿಕ ಸಮಾಜಕ್ಕೆ……

ಹೌದು, ಡಿಸೆಂಬರ್ ೩೧ ರ ರಾತ್ರಿ ೧೨ ಗಂಟೆ ಸಾಮಾನ್ಯವಾಗಿ ನಾವೆಲ್ಲರೂ ಅನುಸರಿಸುವ ಇಂಗ್ಲೀಷ್ ಕ್ಯಾಲೆಂಡರಿನ ಹೊಸ ವರ್ಷದ ಮೊದಲ ದಿನ. ಹಿಂದಿನ ವರ್ಷಕ್ಕೆ ಬೀಳ್ಕೊಟ್ಟು ಹೊಸ ವರ್ಷವನ್ನು ಸಂಭ್ರಮಿಸುವುದು ಸ್ವಾಗತಾರ್ಹ…..

ಏಕೆಂದರೆ ಯಾವುದೋ ಒಂದು ನೆಪದಲ್ಲಿ ಒಂದು ಹಬ್ಬವೋ ಸಂಭ್ರಮವನ್ನೋ ಮನುಷ್ಯ ಅನುಭವಿಸಿದರೆ ಅದು ಸಂಕೀರ್ಣ ಬದುಕಿನ ಸಂಧರ್ಭದಲ್ಲಿ ಅತ್ಯಂತ ಉತ್ತಮ ಸಂಪ್ರದಾಯ ಎನ್ನಬಹುದು.

ಆದರೆ,…..

ಸಂಭ್ರಮ ಸಡಗರದ ರೀತಿ ನೀತಿ ಉನ್ಮಾದವಾಗಿ ಕಾನೂನು ಸುವ್ಯವಸ್ಥೆಗೇ ಸವಾಲಾದರೆ ಅದು ಹುಚ್ಚುತನವೆನಿಸಿಕೊಳ್ಳುತ್ತದೆ.

ಕ್ರಿಸ್ಮಸ್, ಹೊಸ ವರ್ಷ, ಯುಗಾದಿ, ಓಣಂ, ಪೊಂಗಲ್, ರಂಜಾನ್ ಹುಟ್ಟುಹಬ್ಬ , ವಾರ್ಷಿಕೋತ್ಸವ, ಏನೇ ಇರಲಿ, ಕುಟುಂಬದವರು, ಸ್ನೇಹಿತರು, ಜೊತೆಗಾರರು, ಪ್ರೇಮಿಗಳು ಯಾರೇ ಆಗಿರಲಿ,…….

ಒಟ್ಟಿಗೆ ಸೇರಿ ಸಂಭ್ರಮದಿಂದ ಆಚರಿಸುವುದು ಎಲ್ಲರೂ ‌ಸಂತೋಷಪಡಬೇಕಾದ ವಿಷಯವೇ. ಅದನ್ನು ಹೇಗೆ ಬೇಕಾದರೂ ಆಚರಿಸಿಕೊಳ್ಳಿ. ಅದು ನಿಮ್ಮ ಸ್ವಾತಂತ್ರ್ಯ .

ಆದರೆ ನೆನಪಿಡಿ. ಅದಕ್ಕೆ ಮೊದಲು ಸ್ವಾತಂತ್ರ್ಯ ಎಂದರೇನು ಎಂಬುದರ ಅರ್ಥ, ವ್ಯಾಪ್ತಿ, ವ್ಯಾಖ್ಯಾನ, ಮಿತಿ, ಪ್ರಾಯೋಗಿಕತೆ, ನೈತಿಕತೆ ಮತ್ತು ಕಾನೂನಿನ ಮಾನ್ಯತೆಯ ಬಗ್ಗೆ ಸಂಪೂರ್ಣ ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ಸಂಭ್ರಮದ ಆಚರಣೆ ಅಪರಾಧ ಮತ್ತು ಅನೈತಿಕವಾಗುವ ಸಾಧ್ಯತೆಯೇ ಹೆಚ್ಚು…….

ಈ ವಿಷಯದಲ್ಲಿ ಸ್ವಾತಂತ್ರ್ಯ ಎಂದರೆ………

ಇನ್ನೊಬ್ಬರಿಗೆ ತೊಂದರೆಯಾಗದ ಹಾಗೆ, ಕಾನೂನಿನ ನೀತಿ ನಿಯಮಗಳನ್ನು ಮೀರದ ಹಾಗೆ, ಸಮಾಜದ ಮತ್ತು ವೈಯಕ್ತಿಕ ನಡವಳಿಕೆಗಳನ್ನು ಆ ಸಂಧರ್ಭದಲ್ಲಿ ನೆನಪಿಟ್ಟುಕೊಂಡು ಸಾಮಾನ್ಯ ಜ್ಞಾನ ಉಪಯೋಗಿಸಿ ನಾವು ನಮಗಿಷ್ಟವಾದಂತೆ ಸಂಭ್ರಮಿಸುವುದೇ ಸ್ವಾತಂತ್ರ್ಯ.

ಇಲ್ಲಿ ಸ್ವಾತಂತ್ರ್ಯದ ಅರ್ಥವನ್ನು ಚರ್ಚೆಗಾಗಿ ಏನೇನೋ ಕಲ್ಪಿಸಿಕೊಂಡು ಸ್ವೇಚ್ಛೆ ಮತ್ತು ತಲೆ ಹರಟೆ ಮಾಡಿ ಎಲ್ಲವನ್ನೂ ಒಂದೇ ವ್ಯಾಪ್ತಿಗೆ ತಂದರೆ ಖಂಡಿತ ಅದು ಆತ್ಮವಂಚನೆಯಾಗುತ್ತದೆ ಮತ್ತು ಸಮಾಜ ದ್ರೋಹವಾಗುತ್ತದೆ.

ಆದ್ದರಿಂದ ಇದನ್ನು ಗಮನದಲ್ಲಿಟ್ಟುಕೊಂಡು ನಾವೆಲ್ಲರೂ ಹೊಸ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸೋಣ. ಕುಡಿತ ಕುಚೇಷ್ಟಗಳ, ಪೋಲೀಸ್ ಕಾವಲಿನ ಅನಾಗರಿಕ ವರ್ತನೆಯ ಅತಿರೇಕದ ಅತಿರಂಜಿತ
” UN HAPPY NEW YEAR ” ಆಗದಂತೆ ಎಚ್ಚರಿಕೆ ವಹಿಸೋಣ. ಅದನ್ನು ಮುಂದೆ ನಮ್ಮ ಮಕ್ಕಳು ಪಾಲಿಸುವಂತೆ ಅವರಿಗೆ ಆದರ್ಶಪ್ರಾಯರಾಗೋಣ.

ಭಾರತದಲ್ಲಿ ಹೊಸ ವರ್ಷದ ಆಚರಣೆಯಲ್ಲೂ ಇರುವ ವರ್ಗ ಸಂಘರ್ಷದ ಅಸಮಾನತೆ ಈ ರೀತಿ ಇದೆಯಲ್ಲಾ…….

Scotland Scotch Whisky………..

ಮುಂಬಯಿ ಕೊಲಾಬಾದ ಪ್ರತಿಷ್ಠಿತ
” ತಾಜ್ ಮಹಲ್ ಪ್ಯಾಲೇಸ್ ಹೋಟೆಲ್” ನ ತುತ್ತತುದಿಯ ಓಪನ್ ಗಾರ್ಡನ್ ರೆಸ್ಟೋರೆಂಟ್ ನಲ್ಲಿ, ಅರಬ್ಬೀ ಸಮುದ್ರದ ಅಲೆಗಳ ವಿಹಂಗಮ ನೋಟದ ಆನಂದದಲ್ಲಿ, ತಣ್ಣನೆ ಬೀಸುತ್ತಿದ್ದ ತಂಗಾಳಿಯ
ಮೈ ಸ್ಪರ್ಶದ ಪುಳಕದಲ್ಲಿ, ಆಕಾಶದ ಚೆಂದಿರನ ಬೆಳಕಿನಲ್ಲಿ,….

ರೌಂಡ್ ಟೇಬಲ್ಲಿನ ಸುತ್ತ, ನಾಲ್ಕು ಹುಡುಗಿಯರು ಕುಳಿತು ಲೇಡಿ ಸಹಾಯಕರು ಕೇಳಿ ಬೆರೆಸುತ್ತಿದ್ದ ನೀರು, ಸೋಡಾ, ಹಣ್ಣಿನ ರಸದ ಜೊತೆ ಸ್ಕಾಟಿಷ್ ವಿಸ್ಕಿ ಹೀರುತ್ತಾ ಆ ಲಕ್ಷುರಿ ಸೋಫಾದ ಉದ್ದಕ್ಕೂ ಕಾಲುಚಾಚುತ್ತಾ ಮೋಹಕವಾಗಿ ನಗುತ್ತಾ ಹೊಸ ವರ್ಷವನ್ನು ಎಂಜಾಯ್ ಮಾಡುತ್ತಿದ್ದರು……..

ವಿಶ್ವವನ್ನೇ ಗೆದ್ದ ಸಂತಸ ಅವರ ಮುಖಗಳಲ್ಲಿ ಕಾಣುತ್ತಿತ್ತು. ಎಲ್ಲವನ್ನೂ ಎದುರಿಸಬಲ್ಲೆ ಎಂಬ ಆತ್ಮವಿಶ್ವಾಸ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು. ಅವರು ತುಟಿಗೆ ತಾಗಿಸುತ್ತಿದ್ದ ವಿಸ್ಕಿಯ ಗ್ಲಾಸಿನ ಪ್ರತಿ ಗುಟುಕಿನಲ್ಲೂ ಇಡೀ ಬದುಕಿನ ಸ್ವಾದವನ್ನೇ ಹೀರುತ್ತಿರುವಂತೆ ಅನುಭವಿಸುತ್ತಿದ್ದರು……..

ಸುಮಾರು 23/25 ವಯಸ್ಸಿನ ಆ ಹುಡುಗಿಯರ ಹಿನ್ನೆಲೆ ಗೊತ್ತಿಲ್ಲ. ಆದರೆ ಅತ್ಯಂತ ಶ್ರೀಮಂತ ಮನೆತನದವರು ಎಂಬುದಕ್ಕೆ ಸಾಕ್ಷಿ ಬೇಕಿರಲಿಲ್ಲ…….

ಜೋರಾಗಿ ಮಾತನಾಡುತ್ತಿದ್ದ ಅವರು…………..

ವಿಶ್ವದ ಅತ್ಯಂತ ಶ್ರೀಮಂತ ಸ್ಥಳಗಳು, ವಿಹಾರ ಧಾಮಗಳು, ಲೇಟೆಸ್ಟ್ ಫ್ಯಾಷನ್ ಡಿಸೈನರುಗಳು, ಮೇಕಪ್ ಮತ್ತು ಪರ್ಪ್ಯೂಮ್ ಗಳ ಹೆಸರುಗಳು, ಆಗೊಮ್ಮೆ ಹೀಗೊಮ್ಮೆ ತಮ್ಮ ಪೋಷಕರ ಬಿಸಿನೆಸ್ ಮತ್ತು ಹೊಸ ಹೊಸ ಮಾರ್ಕೆಟಿಂಗ್ ತಂತ್ರಗಳ ಸುತ್ತಲೇ ತಿರುಗುತ್ತಿತ್ತು…….

KINGFISHER BEER…….

ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಪುರುಷರ ಹಾಸ್ಟೆಲ್…….

ರಾತ್ರಿ 9 ಗಂಟೆ, ಸುಮಾರು 13/15 ಜನ ಹುಡುಗರು ಹೊಸ ವರ್ಷದ ಸಂಭ್ರಮ ಆಚರಿಸಲು ಹಾಲ್ ನಲ್ಲಿ ಕುಳಿತಿದ್ದಾರೆ. ಸುತ್ತಲೂ ಕಿಂಗ್ ಫಿಶರ್ ಬಾಟಲುಗಳಿರುವ ಕ್ರೇಟುಗಳು ಇವೆ.

ಒಂದಿಬ್ಬರು ಹುಡುಗರು ಚಿಪ್ಸ್, ಮಸಾಲೆ ಕಡಲೆಬೀಜ, ಚಿಕನ್ ಕಬಾಬ್ ಅನ್ನು ಪೇಪರ್ ಪ್ಲೇಟುಗಳಲ್ಲಿ ಜೋಡಿಸುತ್ತಿದ್ದರೆ, ಇನ್ನೊಂದಿಬ್ಬರು ಗ್ಲಾಸುಗಳಿಗೆ ಬಿಯರ್ ಹಾಕುತ್ತಿದ್ದಾರೆ.

ಎಲ್ಲವೂ ಸೆಟ್ಲ್ ಆದ ಮೇಲೆ ಮಾತುಗಳು ಜೋರಾಗುತ್ತವೆ. ಅವರ ಸಹಪಾಠಿ ಹುಡುಗಿಯರ ವಿಷಯಗಳು, ಪ್ರೊಫೆಸರ್ ಗಳ ಜಾತಿ ರಾಜಕೀಯ, ಕ್ಯಾಂಪಸ್‌ನ ರೌಡಿಗಳ ಗುಣಗಾನ, ತಂದೆ ತಾಯಿಗಳ ಸಂಕಷ್ಟ, ಭವಿಷ್ಯದ ಕನಸುಗಳೇ ಅವರ ಮಾತಿನ ಮುಖ್ಯ ವಿಷಗಳಾಗಿದ್ದವು………

KHODAY’S XXX RUM…………

ಊರಿನ ಪಾಳು ಬಿದ್ದ ಕಟ್ಟಡದಲ್ಲಿ ಒಂದಷ್ಟು ಜನ ಸೇರಿದ್ದಾರೆ. ಕಲ್ಲು, ಮಣ್ಣುಗಳು ಜಾಗದ ಮಧ್ಯೆ ಒಂದು ಚಾಪೆ ಹಾಸಿ ಇಸ್ಪೀಟೆಲೆಗಳನ್ನು ಇಟ್ಟಿದ್ದಾರೆ. ಯಾರದೋ ಮನೆಯಿಂದ ದೊಡ್ಡ ತಪ್ಪಲೆಯಲ್ಲಿ ಮಸಾಲೆ ಹಾಕಿ ಬೇಯಿಸಿದ ಕೋಳಿ ಮಾಂಸದ ಅಡುಗೆ ಇಟ್ಟಿದ್ದಾರೆ. ಪಕ್ಕದಲ್ಲಿ ಒಂದು ರಾಶಿ ಬೇಯಿಸಿದ ಮೊಟ್ಟ ಇದೆ. ಒಂದಷ್ಟು ಈರುಳ್ಳಿ ಮತ್ತು ಸೌತೆಕಾಯಿ ಹೋಳುಗಳನ್ನು ಪೇಪರಿನಲ್ಲಿ ಸುತ್ತಿಟ್ಟಿದ್ದಾರೆ. ಕತ್ತಲೆಯನ್ನು ಹೋಗಲಾಡಿಸಲು ಎಲ್ಲರೂ ಮೊಬೈಲ್‌ ಟಾರ್ಚ್ ಆನ್ ಮಾಡಿದ್ದಾರೆ. ಆ ಬೆಳಕಿನಲ್ಲಿ ದಟ್ಟನೆಯ ಸಿಗರೇಟ್ ಹೊಗೆ ಸುತ್ತಲೂ ಆವರಿಸಿದೆ.

ಯಾರೋ ಒಬ್ಬ ಚಿಕ್ಕ ಹುಡುಗ ಎಲ್ಲರಿಗೂ ಪ್ಲಾಸ್ಟಿಕ್ ಲೋಟಗಳಲ್ಲಿ ಆ ರಮ್ ಅನ್ನು ಅಳತೆಯಲ್ಲಿ ಸುರಿದು ಸುರಿದು ಕೊಡುತ್ತಿದ್ದಾನೆ. ಕುಡಿಯುತ್ತಾ ತಿನ್ನುತ್ತಾ ಇಸ್ಪೀಟು ಆಟ ಶುರುವಾಗುತ್ತದೆ……

ಮೌನವೇ ಹೆಚ್ಚಾಗಿದ್ದರೂ ಆಗಾಗ ಸೋತವರು ಕೆಟ್ಟ ಕೊಳಕ ಭಾಷೆಯಲ್ಲಿ ಅವರ ಅದೃಷ್ಟವನ್ನು ಹಳಿಯುತ್ತಾರೆ. ಕಳೆದುಹೋದ ‌ವರ್ಷದ ಘಟನೆಗಳನ್ನು ನೆನಪಿಸಿಕೊಂಡು ಯಾರಿಗೋ ಶಾಪ ಹಾಕುತ್ತಾರೆ. ಒಬ್ಬ ಕುಡಿತ ಹೆಚ್ಚಾಗಿ ವಾಂತಿ ಮಾಡಿದರೆ ಇನ್ನೊಬ್ಬ ಅಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಾನೆ. ಉಳಿದವರು ತಮಗೆ ಇದು ಸಂಬಂಧವೇ ಇಲ್ಲದಂತೆ ಆಟದಲ್ಲಿ ಮಗ್ನರಾಗಿದ್ದಾರೆ…….

CAKES AND JUICE…….

ಒಂದು ಮನೆಯ ಮಹಡಿಯ ಮೇಲೆ ಸುತ್ತಮುತ್ತಲಿನ ಕೆಲವು ಕುಟುಂಬಗಳು ಮತ್ತು ಅವರ ಸಂಬಂಧಿಗಳು ಒಂದಷ್ಟು ಹಣವನ್ನು ಎಲ್ಲರೂ ಸಮನಾಗಿ ಒಟ್ಟುಗೂಡಿಸಿ ಕೇಕ್, ಮಿಕ್ಸ್ಚರ್, ಜ್ಯೂಸ್ ತಂದು, ಕೆಳಗೆ ಕುಳಿತುಕೊಳ್ಳಲು ಚಾಪೆಗಳನ್ನು ಹಾಕಿ, ಯಾರದೋ ಮನೆಯಿಂದ ಆಡಿಯೋ ಸಿಸ್ಟಮ್ ತಂದು ಜೋರಾಗಿ ಸಿನಿಮಾ ಹಾಡುಗಳನ್ನು ಹಾಕಿ ಮನಸ್ಸಿಗೆ ಬಂದಂತೆ ಕುಣಿಯುತ್ತಿದ್ದಾರೆ. ಚಿಕ್ಕ ಮಕ್ಕಳಲ್ಲಿ ಕೆಲವರು ಜ್ಯೂಸ್ ಕುಡಿಯುತ್ತಾ ತಾವು ಕುಣಿಯುತ್ತಿದ್ದರೆ ಇನ್ನೊಂದಿಷ್ಟು ಮಕ್ಕಳು ಆ ಜೋರು ಗಲಾಟೆಯಲ್ಲೂ ನಿದ್ದಿಗೆ ಜಾರಿದ್ದಾರೆ. ಒಂದೆರಡು ಸಂಸಾರಗಳಲ್ಲಿ ಗಂಡ ಹೆಂಡತಿಯ ಮುನಿಸು ಕಾಣಿಸುತ್ತಿದೆ. ಅವರು ಸುಮ್ಮನೆ ಕಾಟಾಚಾರಕ್ಕೆ ಕುಳಿತಿದ್ದಾರೆ.

ಹೀಗೆ ಭಾರತದ ಕೆಲವು ವರ್ಗಗಳ ಹೊಸ ವರ್ಷದ ಸಂಭ್ರಮ ನಡೆಯುತ್ತದೆ. ಇದಲ್ಲದೆ ಇನ್ನೂ ಹೇಗೇಗೋ……

ಅರ್ಥಪೂರ್ಣ ಆಚರಣೆಯೂ ಉಂಟು.
ಸಹಜ ಸರಳ ಸ್ವಾಗತವೂ ಕೋರಲಾಗುತ್ತದೆ.
ಹಾಗೇ ಕೆಲವರು ನಿರ್ಲಕ್ಷ್ಯವನ್ನು ತೋರುತ್ತಾರೆ……

ಕ್ಯಾಲೆಂಡರಿನ ಮೊದಲನೇ ದಿನಕ್ಕೆ ಏನೇನು ಅವತಾರಗಳೋ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Leave a Reply

Your email address will not be published. Required fields are marked *

error: Content is protected !!