ಕೌಟುಂಬಿಕ ಕಲಹ: ಬೇಸತ್ತ ವ್ಯಕ್ತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನ: ವಿಷಯ ತಿಳಿದ 20 ನಿಮಿಷದಲ್ಲಿ ವ್ಯಕ್ತಿಯ ಜೀವ ರಕ್ಷಣೆ ಮಾಡಿದ ಪೊಲೀಸರು: ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ

ಕೌಟುಂಬಿಕ ಕಲಹದಿಂದ ಬೇಸತ್ತ ವ್ಯಕ್ತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸುದ್ದಿ ತಿಳಿದ 20 ನಿಮಿಷದಲ್ಲಿ ವ್ಯಕ್ತಿಯನ್ನ ಪತ್ತೆ ಮಾಡಿದ ಪೊಲೀಸರು ಆತನ ಜೀವ ಕಾಪಾಡಿರುವ ಘಟನೆ ಯಲಹಂಕ ತಾಲೂಕು ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಯಲಹಂಕ ತಾಲೂಕು ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಲ್ (27) ಎಂಬುವರು ಆತ್ಮಹತ್ಯೆಗೆ ಯತ್ನಿಸಿದ್ದು, ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ASI ನಾಗೇಶ್ ಮತ್ತು APC ಸಂಜೀವ್ ಕುಮಾರ್ ರವರು ಆತ್ಮಹತ್ಯೆಗೆ ಮುಂದಾಗಿದ್ದ ವ್ಯಕ್ತಿಯ ಜೀವ ರಕ್ಷಣೆ ಮಾಡಿದ್ದಾರೆ.

ವ್ಯಕ್ತಿಯ ಜೀವ ರಕ್ಷಣೆ ಮಾಡುವ ವೇಳೆ ಪೊಲೀಸ್ ಸಿಬ್ಬಂದಿಗೆ ಗಾಯವಾಗಿದ್ದು, ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಅದ್ದಿಗಾನಹಳ್ಳಿಯ ನಿವಾಸಿ ಗೋಪಾಲ್ ನಿನ್ನೆ ರಾತ್ರಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದ. ಸಾಯುವ ಮುನ್ನ ಆತ ತನ್ನ ತಂಗಿ ಲತಾಗೆ ಫೋನ್ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾನೆ. ತಕ್ಷಣವೇ ಆಕೆ 112 ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಗೋಪಾಲ್ ಪತ್ತೆಗೆ ಮುಂದಾದ ರಾಜಾನುಕುಂಟೆ ಪೊಲೀಸರು ಆತನ ಮೊಬೈಲ್ ಲೋಕೇಷನ್ ಪತ್ತೆ ಮಾಡಿ ಸ್ಥಳಕ್ಕೆ ಹೋಗಿದ್ದಾರೆ. ಪೊಲೀಸರನ್ನ ಕಂಡ ಆತ ರೈಲ್ವೆ ಟ್ರ್ಯಾಕ್‌ ಮೇಲೆ ಓಡಲು ಪ್ರಾರಂಭಿಸಿದ್ದಾನೆ. ಆತನ ಬೆನ್ನತ್ತಿದ ಪೊಲೀಸರು ಆತ್ಮಹತ್ಯೆ ಯತ್ನ ತಡೆದಿದ್ದಾರೆ.

ರಾಜಾನುಕುಂಟೆ ಪೊಲೀಸ್ ಠಾಣೆಗೆ ಕರೆತಂದು ಆರೈಕೆ ಮಾಡಿ ನಂತರ ಅವರಿಗೆ ಧೈರ್ಯ ತುಂಬಿ ಕುಟುಂಬದವರಿಗೆ ಒಪ್ಪಿಸಿ ಸಮಯ ಪ್ರಜ್ಞೆ ಮೆರೆದಿರುತ್ತಾರೆ.

ಪೊಲೀಸರು ಸಕಾಲಕ್ಕೆ ಧಾವಿಸಿ ವ್ಯಕ್ತಿಯ ಜೀವ ರಕ್ಷಣೆ ಮಾಡಿದ್ದು, ಎರಡು ನಿಮಿಷ ತಡವಾಗಿದ್ದಲ್ಲಿ, ಇದೇ ಮಾರ್ಗದಲ್ಲಿ ಹಾದು ಹೋದ ರೈಲಿಗೆ ಆತ ಬಲಿಯಾಗುತ್ತಿದ್ದ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!