ಕೋವಿಡ್ ಜೆಎನ್-1 ರೂಪಾಂತರಿ ತಳಿ ದುರ್ಬಲವಾದದ್ದು, ಯಾರೂ ಆತಂಕಪಡಬೇಕಾಗಿಲ್ಲ ಎಂದು ಡಾ. ಟಿ.ಹೆಚ್.ಅಂಜನಪ್ಪ ಹೇಳಿದ್ದಾರೆ
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಳಿಗಾಲದಲ್ಲಿ ವೈರಾಣುಗಳು ದ್ವಿಗುಣಗೊಳ್ಳುವುದು ಸಾಮಾನ್ಯ, ಪ್ರಸ್ತುತ ಕೇರಳ, ಜಪಾನ್ ನಲ್ಲಿ ಕಂಡುಬಂದಿರುವ ರೂಪಾಂತರಿ ತಳಿ ಜೆಎನ್-1 ಸಂಕ್ರಾಂತಿವರೆಗೂ ಇರಲಿದೆ ಚಳಿಗಾಲ ಮುಕ್ತಾಯವಾದ ಮೇಲೆ ಮಾಯವಾಗಲಿದೆ. ಯಾರೂ ಅನಗತ್ಯವಾಗಿ ಭಯಪಡಬೇಕಾಗಿಲ್ಲ ಎಂದರು.
60 ವರ್ಷ ಮೇಲ್ಪಟ್ಟವರು ಮತ್ತು 3 ರಿಂದ 13 ವರ್ಷದ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಹಿಂದಿನ ಅನುಭವದ ಪ್ರಕಾರ ಜನರು ಗುಂಪು ಗುಂಪಾಗಿ ಸೇರಬಾರದು, ಸರ್ಕಾರದ ಗೈಡ್ ಲೈನ್ ಪ್ರಕಾರ 60 ವರ್ಷ ಮೇಲ್ಪಟ್ಟವರು ಮಾಸ್ಕ್ ಧರಿಸಬೇಕು ಎಂದರು.
ಚಳಿಗಾಲದಲ್ಲಿ ಕೆಮ್ಮು, ನೆಗಡಿ, ಜ್ವರ ಸಾಮಾನ್ಯ, ಮೂರು ದಿನಗಳವರೆಗೆ ಜ್ವರ ಇದ್ದರೆ ನಿರ್ಲಕ್ಷ್ಯ ಮಾಡದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಲಹೆ ನೀಡಿದರು. ಸದ್ಯ ಕರ್ನಾಟಕದಲ್ಲಿ 53 ಜನರಲ್ಲಿ 6 ಜನ ಐಸಿಯುನಲ್ಲಿದ್ದಾರೆ 8 ಜನರು ಜನರಲ್ ವಾರ್ಡ್ ನಲ್ಲಿದ್ದಾರೆ ಎಂದರು.
ನಿನ್ನೆ ಕೇರಳದಲ್ಲಿ 292 ಸಕ್ರಿಯ ಪ್ರಕರಣಗಳು ಕಂಡುಬಂದಿದ್ದು, ಮೂರು ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2041 ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.