ಕೋಲಾರ ಬಂದ್ ಆಚರಣೆ ಹೆಸರಿನಲ್ಲಿ ಶ್ರೀಕೃಷ್ಣನ ಸಂದೇಶ ಹರಿದವರ ವಿರುದ್ದ ಕ್ರಮಕ್ಕೆ ಒತ್ತಾಯ

ಕೋಲಾರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಮೂಲ ಆಶಯಗಳನ್ನು ಬದಿಗೊತ್ತಿ ಅವರ ಹೆಸರಿನಲ್ಲಿ ಕೋಲಾರ ಬಂದ್ ಆಚರಣೆ ನೆಪದಲ್ಲಿ ದೌರ್ಜನ್ಯ ಮತ್ತು ದಬ್ಬಾಳಿಕೆಯ ಮೂಲಕ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಲಾಗಿದ್ದ ಶ್ರೀಕೃಷ್ಣನ ಗೀತೆಯ ಸಂದೇಶಗಳನ್ನು ಹರಿದು ಹಾಕಿ ಕಾಲಿನಿಂದ ಒದ್ದಿರುವ ಕೆಲವು ದಲಿತ ಸಂಘಟನೆಯ ಮುಖಂಡರ ನಡೆಯನ್ನು ಜೆಡಿಎಸ್‌- ಬಿಜೆಪಿ ಮೈತ್ರಿ ಪಕ್ಷದ ಮುಖಂಡರಾದ ಯಲುವಗುಳಿ ನಾಗರಾಜ್, ಜಯನಗರ ಮುನಿಯಪ್ಪ, ಹಾರೋಹಳ್ಳಿ ನಾಗರಾಜ್ ತೀವ್ರವಾಗಿ ಖಂಡಿಸಿದ್ದಾರೆ.

ಶುಕ್ರವಾರ ದಲಿತ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳು ಕೋಲಾರ ಬಂದ್ ಆಚರಣೆಯ ನೆಪದಲ್ಲಿ ಕೋಲಾರ ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿಗೆ ನುಗ್ಗಿದ ದಲಿತ ಪರ ಸಂಘಟನೆಗಳ ಮುಖಂಡರು ಶ್ರೀಕೃಷ್ಣನ ಸಂದೇಶದ ಬ್ಯಾನರ್ ಹರಿದು ಹಾಕುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದು, ಅಂಬೇಡ್ಕರ್ ಹೆಸರಿನಲ್ಲಿಯೇ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

ಅಂಬೇಡ್ಕರ್ ಅವರು ಸಂವಿಧಾನದ ಮೂಲ ಆಶಯಗಳಿಗೆ ತಕ್ಕಂತೆ ನಡೆದುಕೊಂಡಿದ್ದಾರೆ. ಆದರೆ, ಅವರ ಹೆಸರು ಹೇಳಿಕೊಂಡು ಕೆಲವು ಮುಖಂಡರು ದೌರ್ಜನ್ಯ ದಬ್ಬಾಳಿಕೆಯ ಮೂಲಕ ಅಂಬೇಡ್ಕರ್ ಹೆಸರಿಗೆ ಕಳಂಕ ತರುತ್ತಿರುವುದು ನಾಚಿಕೆಗೇಡಿನ ಸಂಗತಿ‌ಯಾಗಿದೆ. ಸಮಾಜದಲ್ಲಿ ಯಾವುದೇ ಧರ್ಮದ ಬಗ್ಗೆ ಅವಹೇಳನವಾಗಲಿ ಅವರ ಭಾವನೆಗಳಿಗೆ ಧಕ್ಕೆ ತರಬಾರದು ಎಂಬುದು ಇದ್ದರು ಅದರ ವಿರುದ್ದವಾಗಿ ನಡೆದುಕೊಂಡಿದ್ದಾರೆ. ದೇವಸ್ಥಾನಕ್ಕೆ ದಲಿತ ಪ್ರವೇಶವಾಗಬೇಕು ಎಂದು ಒತ್ತಾಯ ಮಾಡುವ ದಲಿತ ಮುಖಂಡರು ಶ್ರೀಕೃಷ್ಣನ ಪೋಟೋ ಹರಿದು ಕಾಲಿನಿಂದ ತುಳಿಯುತ್ತಾರೆ ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಕೆಲವು ದಲಿತಪರ ಸಂಘಟನೆಗಳು ಕಾಂಗ್ರೆಸ್ ಪಕ್ಷದ ಮುಖವಾಡ ಧರಿಸಿಕೊಂಡು ದೌರ್ಜನ್ಯ ದಬ್ಬಾಳಿಕೆಯ ಮೂಲಕ ಪ್ರತಿಭಟನೆ ಮಾಡುವುದು ಸರಿಯಲ್ಲ. ಅಂಬೇಡ್ಕರ್ ಅವರ ರಾಜಕೀಯ ಜೀವನದಲ್ಲಿ ಇದೇ ಕಾಂಗ್ರೆಸ್ ಪಕ್ಷವು ತೊಂದರೆ ಕೊಟ್ಟಿದೆ ಎಂಬುದನ್ನು ದೇಶದ ಜನತೆ ಮರೆತಿಲ್ಲ ಅಂಬೇಡ್ಕರ್ ಅವರ ಸಿದ್ದಾಂತಗಳಿಗೆ ವಿರುದ್ದವಾಗಿ ನಡೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಕೆಲವರು ಬೆಂಬಲ ಕೊಟ್ಟು ಬಂದ್ ನೆಪದಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವವರ ವಿರುದ್ದ ಕೂಡಲೇ ಜಿಲ್ಲಾಡಳಿತವು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *