ಕೋಲಾರ ಅಭಿವೃದ್ಧಿಗೆ ಚುನಾವಣೆ ಪೂರ್ವದಲ್ಲಿ ಕೊಟ್ಟ ಭರವಸೆಗಳ ಜಾರಿಗೆ ಸಿಎಂಗೆ ಮನವಿ

ಕೋಲಾರ: ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜಿಲ್ಲೆಗೆ ಭೇಟಿ ನೀಡಿ ಪ್ರಚಾರದಲ್ಲಿ ನೀಡಿರುವ ಆಶ್ವಾಸನೆ ಮತ್ತು ಭರವಸೆಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಘೋಷಣೆ ಮಾಡುವಂತೆ ಶಾಸಕ ಕೊತ್ತೂರು ಮಂಜುನಾಥ್ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿ ಒತ್ತಾಯಿಸಿದರು,

ಕಳೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ದೆ ಮಾಡುವಂತೆ ಪಕ್ಷದಿಂದ, ಕೋಲಾರ ಜನತೆ ಹಾಗೂ ಮುಖಂಡರಿಂದ ಒತ್ತಾಯ ಬಂದಾಗ ತಾವುಗಳು ಕ್ಷೇತ್ರದಲ್ಲಿ ನಡೆದ ಪೂರ್ವಬಾವಿ ಸಭೆಗಳಲ್ಲಿ ಮತ್ತು ಬಹಿರಂಗ ಪ್ರಚಾರದ ಸಮಯದಲ್ಲಿ ಸಾರ್ವಜನಿಕವಾಗಿ ಕೆಲವು ಭರವಸೆಗಳನ್ನು ಮಂಜೂರು ಮಾಡಿಯೇ ಸಿದ್ದವೆಂದು ಆಶ್ವಾಸನೆ ನೀಡಿದ್ದು ಅ ನಂಬಿಕೆಯಿಂದಲೇ ಕಾರ್ಯಕರ್ತರು ಹಾಗೂ ಮತದಾರರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಾರೆ ಕಳೆದ ಎರಡು ವರ್ಷಗಳಿಂದ ಸದರಿ ಭರವಸೆಗಳನ್ನು ಈಡೇರಿಸುವಂತೆ ಸಾರ್ವಜನಿಕರು ಸದಾ ನನ್ನ ಮೇಲೆ ಒತ್ತಡ ತರುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿದರು.

ಕೋಲಾರ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಕುಡಿಯುವ ನೀರಿಗಾಗಿ ಜಾರಿಯಾಗಿರುವ ಎತ್ತಿಹೊಳೆ ಯೋಜನೆಯನ್ನು ಪೂರ್ಣಗೊಳಿಸಬೇಕು, ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೇಷಾಲಟಿ ಆಸ್ಪತ್ರೆ, ಇಂಜಿನಿಯರಿಂಗ್ ಕಾಲೇಜು, ಕೋಲಾರ ನಗರಕ್ಕೆ ಹೊರ ವರ್ತುಲ ರಸ್ತೆ ನಿರ್ಮಾಣ, ಎಪಿಎಂಸಿ ಮಾರುಕಟ್ಟಿಗೆ 100 ಎಕರೆ ಜಮೀನು ಮಂಜೂರು ಸೇರಿದಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾದರಿಯಲ್ಲಿ ಕೋಲಾರ ವೇಮಗಲ್ ನಗರಗಳನ್ನು ಸೇರಿಸಿ ಮಹಾನಗರ ಪಾಲಿಕೆಯಾಗಿ ಮಂಜೂರು ಮಾಡಿ ಈ ಬಜೆಟ್‌ನಲ್ಲಿ ಘೋಷಣೆ ಮಾಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಮಾತನಾಡಿ ಜನರಿಗೆ ಕೊಟ್ಟ ಭರವಸೆಯನ್ನು ಜಾರಿ ಮಾಡಲು ಕಾಂಗ್ರೆಸ್ ಸರ್ಕಾರವು ಬದ್ದವಾಗಿದೆ ಈ ಬಾರಿಯ ಬಜೆಟ್‌ನಲ್ಲಿ ಮೆಡಿಕಲ್ ಕಾಲೇಜು ಸೇರಿದಂತೆ ಅತ್ಯವಶ್ಯಕ ಇರುವ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಹನೀಫ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೈಲಾಂಡಹಳ್ಳಿ ಮುರಳಿ ಇದ್ದರು.

Leave a Reply

Your email address will not be published. Required fields are marked *