ಕೋಲಾರ: ಜಿಲ್ಲೆಯಲ್ಲಿ ಅಬಕಾರಿ ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ದ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಮದ್ಯ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಕೋಲಾರ ಜಿಲ್ಲೆಯ ಅಬಕಾರಿ ಅಕ್ರಮಗಳ ಕುರಿತು ವಿಧಾನಪರಿಷತ್ ನಲ್ಲಿ ಗುರುವಾರ ಪ್ರಸ್ತಾಪಿಸಿದ ಎಂಎಲ್ಸಿ ಅನಿಲ್ ಕುಮಾರ್ ಅವರ ನಡೆಯನ್ನು ಸಂಘವು ಬೆಂಬಲಿಸಿದೆ. ಈ ಬಗ್ಗೆ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಗಿರೀಶ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ತಮ್ಮದೇ ಮೂಲಗಳನ್ನು ಆಧರಿಸಿ ಎಂಎಲ್ ಸಿ ಅನಿಲ್ ಕುಮಾರ್ ಅವರು ಸದನದಲ್ಲಿ ಕೋಲಾರ ಜಿಲ್ಲೆಯ ಅಬಕಾರಿ ಇಲಾಖೆಯ ಅಧಿಕಾರಿಗಳ ಅಕ್ರಮಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈಗ ನಡೆಯುತ್ತಿರುವ ಅಧಿಕಾರಿಗಳ ಅಕ್ರಮಗಳನ್ನು ಕೊನೆಗಾಣಿಸಬೇಕಾಗಿದೆ. ಅಬಕಾರಿ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಹಲವು ಶಾಸಕರು ಈ ಹಿಂದೆಯೇ ಆರೋಪಿಸಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ, ಸದಸ್ಯರಿಗೆ ಬೆಲೆಯಿಲ್ಲದಂತಾಗಿದೆ ಎಂದೂ ಎನ್.ಗಿರೀಶ್ ದೂರಿದ್ದಾರೆ.
ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ, ಕೋಲಾರ ಶಾಸಕ ಕೊತ್ತೂರು ಮಂಜುನಾಥ ಅವರು, ಖುದ್ದು ಜಿಲ್ಲಾ ಉಸ್ತುವಾರಿ ಸಚಿವರೇ ಕೋಲಾರದ ಅಬಕಾರಿ ಅಧಿಕಾರಿಗಳಿಗೆ ಸಭೆಗಳಲ್ಲಿ ಎಚ್ಚರಿಕೆ ಕೊಟ್ಟಿದ್ದರೂ ಪ್ರಯೋಜನವಾಗಿಲ್ಲ. ಭ್ರಷ್ಟ ಅಧಿಕಾರಿಗಳು ರುಚಿ ಪಳಗಿಬಿಟ್ಟಿದ್ದಾರೆ ಎಂದೂ ಎನ್.ಗಿರೀಶ್ ಆರೋಪಿಸಿದ್ದಾರೆ.
ಈಗಲಾದರೂ ಇಲ್ಲಿನ ಅಬಕಾರಿ ಅಧಿಕಾರಿಗಳ ಅಕ್ರಮಗಳನ್ನು ಅಂತ್ಯ ಮಾಡಲು ರಾಜ್ಯ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯ ಮಾಡಿದ್ದಾರೆ.