ಕೋಮು ಸೌಹಾರ್ದತೆ ಮೆರೆದ ಸ್ಪೀಕರ್ ಯು.ಟಿ. ಖಾದರ್‌: ನಾಗಾರಾಧನೆಗೆ ಸ್ಥಳದಾನ ಮಾಡಿದ ಸ್ಪೀಕರ್

ವಿಟ್ಲ ಸಮೀಪದ ಪುಣಚ ಪರಿಯಾಲ್ತಡ್ಕದಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಸೇರಿದ ಪಿತ್ರಾರ್ಜಿತ ಜಮೀನು ಇದೆ. ಅದರಲ್ಲಿ ಅಡಕೆ, ತೆಂಗು ಕೃಷಿ ಫಲವತ್ತಾಗಿದೆ. ಆ ಜಮೀನಿನ ಒಂದು ಭಾಗದಲ್ಲಿ ಇಂದಿಗೂ ನಾಗರ ಪಂಚಮಿ ಅದ್ಧೂರಿಯಾಗಿಯೇ ನಡೆಯುತ್ತಿದೆ. ಯು.ಟಿ.ಖಾದರ್ ಮತ್ತು ನಾಗಾರಾಧನೆಗೆ ಎತ್ತಣಂದೆತ್ತ ಸಂಬಂಧ? ಹೌದು, ಈ ಪ್ರಶ್ನೆ ಸಾಮಾನ್ಯ.

ಹಿಂದಿನ ಹಿರಿಯರ ಕಾಲದಲ್ಲಿ ಖಾದರ್ ಅವರ ಸೊತ್ತು ದಳವಾಯಿ ಕುಟುಂಬದ ಅಧೀನದಲ್ಲಿತ್ತು. ಭೂಮಸೂದೆ ಕಾನೂನಿನಲ್ಲಿ ಖಾದರ್ ಕುಟುಂಬದ ಹಿರಿಯರಿಗೆ ಆ ಜಮೀನು ಸಿಕ್ಕಿತ್ತು. ಪಾಲು ಮಾಡುವಾಗ ಪಿತ್ರಾರ್ಜಿತ ಸೊತ್ತಾಗಿ ಖಾದರ್ ಪಾಲಾಯಿತು. ದಳವಾಯಿ ಕುಟುಂಬದ ನಾಗನ ಕಟ್ಟೆ ಅದೇ ಜಮೀನಲ್ಲಿತ್ತು.

ದಳವಾಯಿ ಕುಟುಂಬದ ನಾಗಸಾನಿಧ್ಯ ಮುಸ್ಲಿಂ ಧರ್ಮದವರ ಸ್ಥಳದಲ್ಲಿರುವುದರಿಂದ ಅವರು ಬೇರೆ ಕಡೆ ಆರಾಧನೆ ಮಾಡುತ್ತಿದ್ದರು. ಮೂಲಸ್ಥಾನದ ನಾಗಕಟ್ಟೆಯಲ್ಲಿ ಪೂಜೆಯಾಗದೇ ಇರುವುದರಿಂದ ದಳವಾಯಿ ಕುಟುಂಬಕ್ಕೆ ಸಮಸ್ಯೆ ತಲೆದೋರಿತ್ತು.

ಅಷ್ಟಮಂಗಳ ಪ್ರಶ್ನೆ ಇಟ್ಟಾಗ ಮೂಲ ಜಾಗದಲ್ಲಿ ಪೂಜೆ ನಡೆಯಬೇಕೆಂದು ಕಂಡು ಬಂತಾದರೂ ಅವರಿಗೆ ಆರಾಧನೆಗೆ ತೊಡಕಾಗಿತ್ತು. ಕೊನೆಗೂ ಬೇರೆ ದಾರಿ ಕಾಣದೆ ದಳವಾಯಿ ಕುಟುಂಬ ನಾಗನಕಟ್ಟೆಯ ಆ ಜಾಗದ 10 ಸೆಂಟ್ಸ್ ಸ್ಥಳ ಖರೀದಿಗೆ ಯು.ಟಿ.ಖಾದರ್ ಅವರಿಗೆ ಬೇಡಿಕೆ ಇಟ್ಟಿತು. ವಿಷಯ ತಿಳಿದ ಖಾದರ್ ಆ ಪರಿಸರದ 10ಕ್ಕೆ 10 ಸೆಂಟ್ಸ್ ಸೇರಿಸಿ ಒಟ್ಟು 20 ಸೆಂಟ್ಸ್ ಸ್ಥಳವನ್ನು ದಳವಾಯಿ ಕುಟುಂಬಕ್ಕೆ ಉಚಿತವಾಗಿ ಬಿಟ್ಟುಕೊಟ್ಟು ಉದಾರತೆ, ಮಾನವೀಯತೆ ಮೆರೆದರು.

ಇದೀಗ ಹಲವು ವರ್ಷಗಳಿಂದ ಅಲ್ಲಿ ವಿಜೃಂಭಣೆಯ ನಾಗಾರಾಧನೆ ನಡೆಯುತ್ತಿದೆ. ನಾಗರ ಪಂಚಮಿಯ ದಿನ ದಳವಾಯಿ ಕುಟುಂಬಿಕರೆಲ್ಲಾ ಅಲ್ಲಿ ಬಂದು ಸೇರುತ್ತಾರೆ. ಪೂಜೆ ಪುನಸ್ಕಾರಗಳು ಸಾಂಗವಾಗಿ ನಡೆಯುತ್ತದೆ. ಸ್ಪೀಕರ್ ಯು.ಟಿ.ಖಾದರ್ ಅವರು ಸಹೋದರ ಧರ್ಮಗಳ ಜೊತೆಗಿನ ಬಾಂಧವ್ಯಕ್ಕೂ ಎಷ್ಟು ಗೌರವ ಕೊಡುತ್ತಾರೆ ಎನ್ನುವುದಕ್ಕೆ ಈವೊಂದು ಉದಾಹರಣೆ ಸಾಕ್ಷಿ.

Leave a Reply

Your email address will not be published. Required fields are marked *