ಕೊಹ್ಲಿ ದಾಖಲೆಯ ಶತಕ! ಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ಗುವಾಹಟಿ: ವಿರಾಟ್ ಕೊಹ್ಲಿ ಅವರ ಭರ್ಜರಿ ಶತಕ ಹಾಗೂ ನಾಯಕ ರೋಹಿತ್ ಶರ್ಮಾ ಹಾಗೂ ಆರಂಭಿಕ ಆಟಗಾರ ಶುಭ್ ಮನ್ ಗಿಲ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ಭಾರತ ತಂಡ 67 ರನ್‌ಗಳ ಬೃಹತ್ ಗೆಲುವು ಸಾಧಿಸುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1 – 0 ಮುನ್ನಡೆ ಸಾಧಿಸಿತು.

2023 ರ ಸೆಪ್ಟೆಂಬರ್ – ನವೆಂಬರ್ ತಿಂಗಳಲ್ಲಿ ನಡೆಯುವ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ನಡೆಯುತ್ತಿರುವ ವರ್ಷದ ಮೊದಲ ಏಕದಿನ ಸರಣಿಯಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧ 7 ವಿಕೆಟ್‌ ಕಳೆದುಕೊಂಡು 373 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು.

ಟಾಸ್ ಗೆದ್ದು ಬೌಲಿಂಗ್ ಪ್ರಾರಂಭಿಸಿದ ಶ್ರೀಲಂಕಾ ತಂಡದ ನಾಯಕ ದಸುನ್ ಶನಕಾ ಅವರ ನಿರ್ಧಾರ ಕೈಗೂಡಲಿಲ್ಲ, ಬ್ಯಾಟಿಂಗ್ ಆರಂಭಿಸಿದ ಭಾರತೀಯ ಆರಂಭಿಕ ಜೋಡಿ ಮೊದಲ ವಿಕೆಟ್ ಗೆ 143 ರನ್‌ಗಳ ಉತ್ತಮ ಆರಂಭವನ್ನೇ ಪಡೆಯಿತು, ನಾಯಕ ರೋಹಿತ್ ಶರ್ಮಾ 9 ಬೌಂಡರಿ ಹಾಗೂ 3 ಸಿಕ್ಸ್ ಸೇರಿದಂತೆ (83) ರನ್ ಹಾಗೂ ಶುಭ್ ಮನ್ ಗಿಲ್ 11 ಬೌಂಡರಿ ಸೇರಿದಂತೆ (70) ರನ್ ಗಳಿಸಿ ಭದ್ರ ಬುನಾದಿ ಹಾಕಿದರು.

ಶುಭ್ ಮನ್ ಗಿಲ್ ಔಟಾದ ನಂತರ ಕ್ರಿಸ್ ಗೆ ಬಂದ ಹಿರಿಯ ಆಟಗಾರ ವಿರಾಟ್ ಕೊಹ್ಲಿ ದಾಖಲೆಯ ಶತಕ (113) ರನ್ ಗಳಿಸಿದರೆ, ಮದ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಗಳಾದ ಶ್ರೇಯಸ್ ಅಯ್ಯರ್ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆ. ಎಲ್. ರಾಹುಲ್ ಉಪಯುಕ್ತ ಕಾಣಿಕೆ ನೀಡುವ ಮೂಲಕ 373 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿದರು.

ಬೃಹತ್ ಮೊತ್ತ ಬೆನ್ನಟ್ಟಿದ ಪ್ರವಾಸಿ ಲಂಕಾ ತಂಡದ ಆರಂಭ ಉತ್ತಮವಾಗಿರಲಿಲ್ಲ, ಆರಂಭಿಕ ಬ್ಯಾಟ್ಸ್‌ಮನ್ ಅವಿಶ್ಕೋ ಫರ್ನಾಂಡೊ ತಂಡದ ಮೊತ್ತ 19 ರನ್ ಕಲೆಹಾಕಿದಾಗ ವೇಗದ ಬೌಲರ್ ಸಿರಾಜ್ ಅವರಿಗೆ ವಿಕೆಟ್ ಒಪ್ಪಿಸಿದರು, ನಂತರ ಬಂದ ಕುಶಾಲ್ ಮೆಂಡಿಸ್ ಸೊನ್ನೆ ಸುತ್ತಿದರು. ಆರಂಭಿಕ ಬ್ಯಾಟ್ಸ್‌ಮನ್ ನಿಸಾಂಕ (72) ರನ್ ಹಾಗೂ ಧನಂಜಯ ಡಿ ಸಿಲ್ವಾ (47) ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು.

ನಾಯಕ ಶನಕಾ ಹೋರಾಟ ವ್ಯರ್ಥ : ಒಂದು ಕಡೆ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಕೆಚ್ಚದೆಯ ಪ್ರದರ್ಶನ ತೋರುವಲ್ಲಿ ಯಶಸ್ವಿಯಾದ ಪ್ರವಾಸಿ ತಂಡದ ನಾಯಕ ದಸುನ್ ಶನಕಾ ಅವರ ಮನಮೋಹಕ ಬ್ಯಾಟಿಂಗ್ ಪ್ರದರ್ಶಿಸಿದರು, 12 ಬೌಂಡರಿ ಹಾಗೂ 3 ಸಿಕ್ಸ್ ಸೇರಿದಂತೆ 88 ಎಸೆತಗಳಲ್ಲಿ (108) ರನ್ ಗಳಿಸಿ ತಂಡವನ್ನು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಿಂದ ಪಾರು ಮಾಡುವ ಮೂಲಕ 300 ರನ್ ಗಡಿ ದಾಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಭಾರತದ ಪರವಾಗಿ ಬೌಲರ್ ಉಮ್ರಾನ್ ಮಲ್ಲಿಕ್ (3), ಮಹಮ್ಮದ್ ಸಿರಾಜ್ (2), ಚಹಲ್, ಶಮಿ ಹಾಗೂ ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದುಕೊಂಡರು.

ಭಾರತದ ಪರವಾಗಿ ಎಲ್ಲಾ ಮಾದರಿಗಳಲ್ಲಿ ದಾಖಲೆಯ 73 ನೇ ಶತಕ ಗಳಿಸಿದ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

Leave a Reply

Your email address will not be published. Required fields are marked *