ರಾಜ್ ಕೋಟ್ ನ ಅಂಗಳದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ರನ್ ಹೊಳೆ ಹರಿಸಿದ ಆಸ್ಟ್ರೇಲಿಯಾದ ಬ್ಯಾಟಿಂಗ್ ಪಡೆಯ ಮುಂದೆ ಭಾರತೀಯ ಬೌಲಿಂಗ್ ಪಡೆ ಮಂಕಾಗಿತ್ತು ಇದರ ಪರಿಣಾಮವಾಗಿ ಆಸ್ಟ್ರೇಲಿಯಾ 66 ರನ್ ಗಳ ಜಯಗಳಿಸಿದರೂ ಭಾರತ ಮುಡಿಗೆ ಸರಣಿ ಒಲಿಯಿತು.
ಎರಡೂ ತಂಡಗಳು ಹಲವಾರು ಬದಲಾವಣೆಗಳನ್ನು ಮಾಡಿ ಮೈದಾನಕ್ಕೆ ಇಳಿದರು. ಭಾರತ ತಂಡದಲ್ಲಿ ನಾಯಕ ರೋಹಿತ್ ಶರ್ಮಾ, ಹಿರಿಯ ಆಟಗಾರ ವಿರಾಟ್ ಕೋಹ್ಲಿ ಹಾಗೂ ಕುಲದೀಪ್ ಯಾದವ್ ಮರಳಿದರು.
ಆಸ್ಟ್ರೇಲಿಯಾ ಪರವಾಗಿ ಸ್ಪೋಟಕ ಬ್ಯಾಟ್ಸ್ಮನ್ ಹಾಗೂ ಆಲ್ ರೌಂಡರ್ ಗ್ಲೇನ್ ಮ್ಯಾಕ್ಸ್ ವೆಲ್, ನಾಯಕ ಪ್ಯಾಟ್ ಕಮ್ಮಿನ್ಸ್ ಹಾಗೂ ವೇಗದ ಬೌಲರ್ ಮಿಚೆಲ್ ಸ್ಟ್ರಾಕ್ ಕಂಬ್ಯಾಕ್ ಮಾಡಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಆಯ್ಕೆ ಉತ್ತಮವಾಗಿತ್ತು, ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ (56) ಹಾಗೂ ಮಿಚೆಲ್ ಮಾಷ್೯ (96), ಮಧ್ಯಮ ಕ್ರಮಾಂಕದ ಆಟಗಾರರಾದ ಸ್ಟೀವನ್ ಸ್ಮಿತ್ (74) ಹಾಗೂ ಲಬುಶನಗೆ (72) ಅವರ ಬ್ಯಾಟಿಂಗ್ ಬಲದಿಂದ 350 ರ ಗಡಿ ದಾಟಿಸಿದರು.
ಭಾರತದ ಪರವಾಗಿ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಮೂರು ವಿಕೆಟ್, ಸ್ಪಿನ್ನರ್ ಕುಲದೀಪ್ ಯಾದವ್ ಎರಡು ವಿಕೆಟ್, ಸಿರಾಜ್ ಹಾಗೂ ಪ್ರಸಿದ್ಧ ಕೃಷ್ಣ ತಲಾ ಒಂದು ವಿಕೆಟ್ ಪಡೆದರು.
ಬೃಹತ್ ಮೊತ್ತ ಬೆನ್ನತ್ತಿದ್ದ ಭಾರತ ತಂಡದ ಆರಂಭಿಕ ಆಟಗಾರರಾದ ನಾಯಕ ರೋಹಿತ್ ಶರ್ಮಾ ಬಿರುಸಿನ ಆಕರ್ಷಕ ಅರ್ಧಶತಕ ಗಳಿಸಿದರು, ನಾಲ್ಕು ಬೌಂಡರಿ ಹಾಗೂ ಆರು ಸಿಕ್ಸರ್ ಸಿಡಿಸಿ (81) ರನ್ ಗಳಿಸುವ ಮೂಲಕ ಉತ್ತಮ ಅಡಿಪಾಯ ಹಾಕಿದರು.
ಬ್ಯಾಟಿಂಗ್ ನಲ್ಲಿ ಬಡ್ತಿ ಪಡೆದು ಬಂದ ಆಲ್ ರೌಂಡರ್ ವಾಶಿಂಗ್ಟನ್ ಸುಂದರ್ (18) ರನ್ ಗಳಿಸಿ ನಿರಾಸೆ ಮೂಡಿಸಿದರು. ನಂತರ ಬಂದ ಅನುಭವಿ ಆಟಗಾರ ವಿರಾಟ್ ಕೋಹ್ಲಿ (56), ಶ್ರೇಯಸ್ ಅಯ್ಯರ್ (48) , ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೆ.ಎಲ್. ರಾಹುಲ್ (26) ಹಾಗೂ ಅಲ್ ರೌಂಡರ್ ರವೀಂದ್ರ ಜಡೇಜಾ (35) ಪ್ರದರ್ಶನ ಫಲ ನೀಡದೇ 286 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು.
ಆಸ್ಟ್ರೇಲಿಯಾದ ಪರವಾಗಿ ಆಲ್ ರೌಂಡರ್ ಗ್ಲೇನ್ ಮ್ಯಾಕ್ಸ್ ವೆಲ್ ನಾಲ್ಕು ವಿಕೆಟ್, ವೇಗಿ ಜೋಶ್ ಹೆಜಲ್ವುಡ್ ಎರಡು ವಿಕೆಟ್, ವೇಗಿಗಳಾದ ಮಿಚೆಲ್ ಸ್ಟ್ರಾಕ್, ಕೆಮರೂನ್ ಗ್ರೀನ್, ಪ್ಯಾಟ್ ಕಮ್ಮಿನ್ಸ್ ಹಾಗೂ ತನ್ವೀರ್ ಸಂಗ ತಲಾ ಒಂದು ವಿಕೆಟ್ ಪಡೆದರು.
ಪಂದ್ಯದಲ್ಲಿ ಉತ್ತಮ ಬೌಲಿಂಗ್ ಹಾಗೂ ಫೀಲ್ಡಿಂಗ್ ಮಾಡಿದ ಆಲ್ ರೌಂಡರ್ ಗ್ಲೇನ್ ಮ್ಯಾಕ್ಸ್ ವೆಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು, ಮೊದಲೆರಡು ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಶುಭ್ಮನ್ ಗಿಲ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.