ಕೊನಘಟ್ಟ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರೇ ಇಲ್ಲ: ಮಕ್ಕಳ ಪರದಾಟ: ಗ್ರಾಮಸ್ಥರ ಆಕ್ರೋಶ

ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ 2017ರಲ್ಲಿ ಪ್ರೌಢಶಾಲೆ ಕಟ್ಟಡ ಉದ್ಘಾಟನೆಗೊಂಡಿದೆ. ಇದೀಗ ನೆಲ ಹಾಗೂ ಗೋಡೆಗಳಿಗೆ ಹಾಕಲಾಗಿದ್ದ ಸಿಮೆಂಟ್ ಕಿತ್ತು ಬರುತ್ತಿದೆ. ಇದರಿಂದ ಮಕ್ಕಳು ಯಾವುದೇ ತೊಂದರೆ ಇಲ್ಲದೇ ಕುಳಿತುಕೊಂಡು ಪಾಠ ಕೇಳೋದಕ್ಕೆ  ಅಗದ ಪರಿಸ್ಥಿತಿಗೆ ಬಂದು ತಲುಪಿದೆ. ಜೊತೆಗೆ ಕೆಲ ಮೂಲಭೂತ ಸೌಕರ್ಯ‌ ಸೇರಿದಂತೆ ಕಳೆದ ಕೆಲ ತಿಂಗಳುಗಳಿಂದ ಇಂಗ್ಲಿಷ್ ಶಿಕ್ಷಕರು ಇಲ್ಲದೇ ವಿದ್ಯಾರ್ಥಿಗಳು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ತರಗತಿಗಳ ಒಳಭಾಗದಲ್ಲಿ ರಸ್ತೆಗಳಲ್ಲಿ‌ ಗುಂಡಿ ಬಿದ್ದಂತೆ ಗುಂಡಿಗಳು ಬಿದ್ದಿದ್ದು, ಅದರಲ್ಲೇ ಮಕ್ಕಳಿಗೆ ಪಾಠ ಪ್ರವಚನ ನಡೆಯುತ್ತವೆ. ಕಳೆದ ಆರೇಳು ತಿಂಗಳುಗಳಿಂದ ಇಂಗ್ಲಿಷ್ ಶಿಕ್ಷಕರು ಇಲ್ಲ. ಮಕ್ಕಳಿಗೆ ವಿಷಯವಾರು ಬೋಧನೆ ಸಿಗದಿದ್ದರೆ ಶಾಲೆಗೆ ಹಾಗೂ ಮಕ್ಕಳಿಗೆ ಉತ್ತಮ ಫಲಿತಾಂಶ ಬರುವುದಾದರೂ ಹೇಗೆ? ದಯಮಾಡಿ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಿ‌ ಕೂಡಲೇ ಹಾಳಾಗಿರುವ ನೆಲ ಹಾಗೂ ಗೋಡೆಗಳನ್ನು ದುರಸ್ತಿಗೊಳಿಸಿ, ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಕೂಡಲೇ ಇಂಗ್ಲಿಷ್ ಶಿಕ್ಷಕರನ್ನು ನೇಮಿಸಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು ಎಂದು ಊರಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕೊನಘಟ್ಟ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರು ಇಲ್ಲದೆ 71 ವಿದ್ಯಾರ್ಥಿಗಳ ಶಿಕ್ಷಣ ಡೋಲಾಯಮಾನವಾಗಿದೆ. ಇನ್ನು ಉತ್ತಮ ಫಲಿತಾಂಶ ನಿರೀಕ್ಷಿಸಲು ಹೇಗೆ ಸಾಧ್ಯ. ಎಸ್ ಡಿಎಂಸಿ ಏಕೋ ಇದರ ಬಗ್ಗೆ ಎಚ್ಚರ ವಹಿಸುತ್ತಿಲ್ಲ. ಇನ್ನಾದರೂ ಸಂಬಂಧಪಟ್ಟವರು ನಿಗಾ ವಹಿಸಬೇಕು ಎಂದು ಹೇಳಿದ್ದಾರೆ.

ಸರ್ಕಾರಿ ಶಾಲೆಗಳನ್ನು ಬೆಳೆಸಬೇಕು. ಮಕ್ಕಳನ್ನ ಸರ್ಕಾರಿ ಶಾಲೆಯಲ್ಲೇ ಓದಿಸಿ ಎಂದು ಹೇಳುವ ರಾಜಕಾರಣಿಗಳು ಸರ್ಕಾರಿ ಶಾಲೆಗಳಿಗೊಮ್ಮೆ ಭೇಟಿ ನೀಡಬೇಕು. ಅಲ್ಲಿನ ಅವ್ಯವಸ್ಥೆ ಪರಿಶೀಲಿಸಿ ಸರಿಪಡಿಸುವ ಕೆಲಸ ಮಾಡಬೇಕು. ಸರ್ಕಾರಿ ಶಾಲೆಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿದರೆ,  ಖಾಸಗಿ ಶಾಲೆಗಳತ್ತ ಯಾರು ಮುಖ‌ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಶಾಲೆಯಲ್ಲಿ ಇಂಗ್ಲಿಷ್ ಪಾಠ ಮಾಡುವುದಕ್ಕೆ ಅತಿಥಿ ಶಿಕ್ಷಕರನ್ನು ನೇಮಿಸಲಾಗಿತ್ತು, ಅವರು ಕಾರಣಾಂತರಗಳಿಂದ ಬಿಟ್ಟು ಹೋಗಿದ್ದಾರೆ. ಕೂಡಲೇ ಇನ್ನೆರಡು ದಿನಗಳಲ್ಲಿ ಹೊಸ ಅತಿಥಿ ಶಿಕ್ಷಕರನ್ನು ನಿಯೋಜನೆ ಮಾಡಲಾಗುವುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ನೋಡಿಕೊಳ್ಳಲಾಗುವುದು ಎಂದು ಪಬ್ಲಿಕ್ ಮಿರ್ಚಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *