ಕೊನಘಟ್ಟದಲ್ಲಿ ನೂತನ ಕೆನರಾ ಬ್ಯಾಂಕ್ ಶಾಖೆ ಉದ್ಘಾಟನೆ: ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ಹೊಂದುವುದು ಅಗತ್ಯ-ಜಿಲ್ಲೆಯ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮಧುಕರ್ ಶೆಟ್ಟಿ

ಪ್ರತಿ ಐದು ಸಾವಿರ ಜನಸಂಖ್ಯೆಗೆ ಒಂದು ಬ್ಯಾಂಕ್ ಶಾಖೆ ತೆರೆದು, ಹೆಚ್ಚಿನ ವಾಣಿಜ್ಯ ವ್ಯವಹಾರಗಳನ್ನು ಮಾಡುವ ಮೂಲಕ ಆ ಭಾಗವನ್ನು ಅಭಿವೃದ್ಧಿಪಡಿಸಿ ಬಲಿಷ್ಠ ಭಾರತವನ್ನು ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಜನರ ಅನುಕೂಲಕ್ಕಾಗಿ ಬ್ಯಾಂಕ್ ಶಾಖೆಗಳನ್ನು ತೆರೆಯಲಾಗುತ್ತಿದೆ ಎಂದರು.

ತಾಲ್ಲೂಕಿನ ಕೊನಘಟ್ಟ ಗ್ರಾಮದಲ್ಲಿ ಕೆನರಾ ಬ್ಯಾಂಕ್ ನ ನೂತನ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ನಗದು ರಹಿತ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಪ್ರತಿಯೊಬ್ಬರೂ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ ನಗದು ರಹಿತ ವ್ಯವಹಾರ ಮಾಡಬಹುದಾಗಿದೆ. ಇದರಿಂದ ಸಮಯದ ಉಳಿತಾಯ ಹಾಗೂ ಸುರಕ್ಷಿತ ವ್ಯವಹಾರ ಮಾಡಬಹುದಾಗಿದೆ ಎಂದರು.

ಗೃಹ ಸಾಲ, ವಾಣಿಜ್ಯ ಸಾಲ, ಕೃಷಿ ಸಾಲ, ಹೈನುಗಾರಿಕೆ ಸಾಲ ಹಾಗೂ ಇತರೆ ಸಾಲದ ಸೌಲಭ್ಯವಿದ್ದು, ಕೂಲಿ ಕಾರ್ಮಿಕರಿಗೆ ಶೂನ್ಯ ಮೊತ್ತದ ಖಾತೆಗಳನ್ನು ತೆರೆಯಲು ಅವಕಾಶವಿದೆ. ಈ ಮೂಲಕ ಸರ್ಕಾರದ ಅನುದಾನಗಳನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾಯಿಸಬಹುದಾಗಿದೆ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 45ನೇ ಕೆನರಾ ಬ್ಯಾಂಕ್ ಶಾಖೆ ಇದಾಗಿದೆ, ಕೊನಘಟ್ಟ ಭಾಗದ ಸುತ್ತಮುತ್ತ ಕೈಗಾರಿಕೆ ಚಟುವಟಿಕೆಗಳು ಪ್ರಾರಂಭವಾಗಿದ್ದು, ಜನಸಾಮನ್ಯರಿಗೆ ಬ್ಯಾಂಕ್ ಸೇವೆ ಒದಗಿಸುವ ನಿಟ್ಟಿನಲ್ಲಿ ಈ ಶಾಖೆಯನ್ನು ತೆರೆಯಲಾಗಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬ ನಾಗರಿಕರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಈ ವೇಳೆ ಕಾರ್ಯಕ್ರಮದಲ್ಲಿ ಬೆಂಗಳೂರು ವೃತ್ತ ಕಚೇರಿಯ  ಪ್ರಬಂಧಕ ವ್ಯವಸ್ಥಾಪಕ ಮಹೇಶ್ ಪೈ, ದೇವನಹಳ್ಳಿ ವಲಯ ಕಚೇರಿಯ ವ್ಯವಸ್ಥಾಪಕ ವೆಂಕಟ ರಾಮುಲು, ಕೊನಘಟ್ಟ ಶಾಖೆಯ ವ್ಯವಸ್ಥಾಪಕ ಉದಯ್ ಕಿರಣ್, ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *