ತಾಲ್ಲೂಕಿನ ಕಸಬಾ ಹೋಬಳಿಯ ಕೊಡಿಗೇಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯ ದೇವರಾಜು ಕೆ.ಸಿ ಬುಧವಾರ ಅವಿರೋಧವಾಗಿ ಆಯ್ಕೆಯಾದರು.
ಅರಸೇಗೌಡ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸಂಘದ ಆವರಣದಲ್ಲಿ ಚುನಾವಣೆ ನಡೆಯಿತು. ದೇವರಾಜು ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಜಗನ್ನಾಥ ಮುಂದುವರೆದಿದ್ದಾರೆ.
ನೂತನ ಅಧ್ಯಕ್ಷ ದೇವರಾಜು ಮಾತನಾಡಿ, ತಮ್ಮ ಮುಂದಿನ ಎರಡು ವರ್ಷದ ಅಧಿಕಾರದ ಅವಧಿಯಲ್ಲಿ ಯಾವುದೇ ರೀತಿ ಲೋಪದೋಷಗಳು ಆಗದಂತೆ ಎಚ್ಚರ ವಹಿಸಿ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದರು. ಗ್ರಾಮೀಣ ಹಾಲು ಉತ್ಪಾದಕರು ಅನೇಕ ತೊಂದರೆಗಳುನ್ನು ಅನುಭವಿಸುತ್ತಿದ್ದು, ಅವುಗಳ ನಿವಾರಣೆಯತ್ತ ಗಮನ ಹರಿಸಿ ರೈತರ ಹಿತ ಕಾಯುವುದಾಗಿ ಭರವಸೆ ನೀಡಿದರು. ಎಲ್ಲಾ ಸದಸ್ಯರಿಗೆ ಯಶಸ್ವಿನಿ ಯೋಜನೆಯನ್ನು ಮಾಡಿಸಿ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚಿನ ಅರಿವು ಮೂಡಿಸಲಾಗುವುದು.
ಗ್ರಾಮದಲ್ಲಿನ ಬಡವರ ಅನುಕೂಲಕ್ಕೆ ಈ ಯೋಜನೆಯನ್ನು ರೂಪಿಸಲಾಗಿದೆ. ಪ್ರತಿ ರೈತರು ಗುಣಮಟ್ಟದ ಹಾಲು ಪೂರೈಸಿ ಸಂಘದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಶಾಸಕ ಧೀರಜ್ ಮುನಿರಾಜು ಮಾತನಾಡಿ ಸ್ಥಳೀಯ ರೈತರ ಜೀವನ ಮಟ್ಟ ಮತ್ತು ಅವರ ಆರ್ಥಿಕ ಸುಧಾರಣೆಗೆ ಹೈನುಗಾರಿಕೆ ಸಂಜೀವಿನಿಯಾಗಿದೆ. ರೈತರು ಉತ್ತಮ ತಳಿಯ ಹಸುಗಳನ್ನು ಸಾಕುವುದರ ಜೊತೆಗೆ ಹೈನುಗಾರಿಕೆಯಲ್ಲಿ ಆಧುನಿಕ ತಾಂತ್ರಿಕತೆ ಅಳವಡಿಸಿಕೊಂಡು ಹೆಚ್ಚಿನ ಲಾಭ ಪಡೆಯಬಹುದು.
ಕೆಎಂಎಫ್ ಮತ್ತು ಬಮೂಲ್ ಗೆ ರೈತರಿಂದ ಖರೀದಿಸುವ ಹಾಲಿಗೆ ಶೀಘ್ರವಾಗಿ ಪ್ರೋತ್ಸಾಹ ಧನವನ್ನು ಹೆಚ್ಚಿಸುವಂತೆ ಮನವಿ ಮಾಡಲಾಗುವುದು ಎಂದರು.
ದೊಡ್ಡಬಳ್ಳಾಪುರದ ಕೊಡಿಗೆಹಳ್ಳಿ ಎಂಪಿಸಿಎಸ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ದೇವರಾಜುರನ್ನು ಶಾಸಕ ಧೀರಜ್ ಮುನಿರಾಜು, ಕೆಎಂಎಫ್ ನಿರ್ದೇಶಕ ಬಿಸಿ ಆನಂದ್ ಕುಮಾರ್, ಬಮೂಲ್ ಮಾಜಿ ನಿರ್ದೇಶಕ ಮುನಿರಾಮೇಗೌಡ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಎಪಿಎಂಸಿ ಮಾಜಿ ಅಧ್ಯಕ್ಷ ತಿ.ರಂಗರಾಜು, ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೆ.ನಾಗೇಶ್, ಅಶ್ವಥ್ ನಾರಾಯಣ ಮತ್ತಿತರರು ಅಭಿನಂದಿಸಿದರು.