ಕೊಟ್ಟಿಗೆಮಾಚೇನಹಳ್ಳಿಯಲ್ಲಿ ಮುಂದುವರಿದ ಚಿರತೆ ಅಟ್ಟಹಾಸ: ಇಂದು ಸಂಜೆ ಮತ್ತೊಂದು ಕುರಿ ಮೇಲೆ ದಾಳಿ ನಡೆಸಿದ ಚಿರತೆ

ದೊಡ್ಡಬಳ್ಳಾಪುರ ತಾಲೂಕಿನ ಕೊಟ್ಟಿಗೆಮಾಚೇನಹಳ್ಳಿಯಲ್ಲಿ ಚಿರತೆ ಅಟ್ಟಹಾಸ ಮುಂದುವರಿದಿದೆ. ನಿನ್ನೆ ರಾತ್ರಿಯಷ್ಟೇ ಚಿರತೆ ಊರಿಗೆ ಲಗ್ಗೆ ಇಟ್ಟು ಕೊಟ್ಟಿಗೆಯಲ್ಲಿದ್ದ ಸುಮಾರು 9 ಕುರಿಗಳ ಮೇಲೆ ದಾಳಿ ನಡೆಸಿ 4 ಕುರಿಗಳನ್ನು ಬಲಿ ಪಡೆದಿತ್ತು. ಇದೀಗ ಇಂದು ಸಂಜೆ ಮತ್ತೊಂದು ಕುರಿ ಮೇಲೆ ದಾಳಿ ನಡೆಸಿ ಗಾಯಪಡಿಸಿದೆ.

ರೈತ ಮಹಿಳೆ ರಾಧಮ್ಮ ಎನ್ನುವವರು ತಮ್ಮ ಹೊಲದ ಬಳಿ ಕುರಿಗಳನ್ನು ಮೇಯಲು ಬಿಟ್ಟು ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಮಧ್ಯಾಹ್ನ ಸುಮಾರು 3:30ರಲ್ಲಿ ಕುರಿಗಳ ಮೇಲೆ ಚಿರತೆ ಎರಗಿ ಒಂದು ಕುರಿಯನ್ನು ಎಳೆದೊಯ್ಯುತ್ತಿದ್ದ ದೃಶ್ಯ ರಾಧಮ್ಮ ಕಣ್ಣಿಗೆ ಬಿದ್ದಿದೆ. ಕೂಡಲೇ ತನ್ನ ಕುರಿಯನ್ನು ರಕ್ಷಿಸಲು ಹೋದಾಗ ರಾಧಮ್ಮ ಮೇಲೆಯೂ ದಾಳಿ ನಡೆಸಲು ಚಿರತೆ ಮುಂದಾಗಿದೆ. ರಾಧಮ್ಮ ಜೋರಾಗಿ ಚೀರಾಡಿದಾಗ ಚಿರತೆ ಕುರಿಯನ್ನು ಗಾಯಪಡಿಸಿ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದೆ.

ಚಿರತೆ ಅಟ್ಟಹಾಸವನ್ನು ಕಣ್ಣಾರೆ ಕಂಡ ರಾಧಮ್ಮ, ಭಯಭೀತರಾಗಿ, ಜ್ವರ ಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಮನೆಗೆ ಮರಳಿದ್ದಾರೆ.

ಈ ವೇಳೆ ರಾಧಮ್ಮ ಗಂಡ ಯಲ್ಲಪ್ಪ ಮಾತಾಡಿ, ನಮ್ಮೂರಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ನನ್ನ ಮಡದಿ ಚಿರತೆಯನ್ನು ನೋಡಿದ ಕಾರಣ ಜ್ವರ ಬಂದು ಮಲಗಿದ್ದಾರೆ. ನಮ್ಮ ಕುರಿಯ ಕುತ್ತಿಗೆ, ಕಾಲುಗಳಿಗೆ ಕಚ್ಚಿ ಗಾಯಪಡಿಸಿದೆ. ತೀವ್ರವಾಗಿ ಗಾಯಗೊಂಡಿರುವ ಕುರಿ ಬದುಕುಳಿಯುವುದು ತುಂಬಾ ಕಷ್ಟ. ನಮಗಾಗಿರುವ ನಷ್ಟವನ್ನು ಯಾರು ಭರಿಸುತ್ತಾರೆ ಎಂದು ಹೇಳಿದ್ದಾರೆ.

ನಂತರ ಗ್ರಾಮದ ಯುವಕ ರವಿಕುಮಾರ್ ಮಾತನಾಡಿ, ಕೊಟ್ಟಿಗೆಮಾಚೇನಹಳ್ಳಿ ಗ್ರಾಮ ಚಿರತೆ ಹಾವಳಿಯಿಂದ ನಲಗುತ್ತಿದೆ. ನಿನ್ನೆ ರಾತ್ರಿ ಚಿರತೆ ದಾಳಿಗೆ ನಾಲ್ಕು ಕುರಿಗಳು ಬಲಿಯಾಗಿವೆ. ಐದು ಕುರಿಗಳಿಗೆ ಗಾಯಗಳಾಗಿವೆ. ಐದು ಕುರಿಗಳಲ್ಲಿ ಮೂರು ಕುರಿಗಳು ಬದುಕುಳಿಯುವುದು ಕಷ್ಟ. ಇದೀಗ ಇಂದು ಮಧ್ಯಾಹ್ನ ಹಾಡಹಗಲೇ ಮತ್ತೊಂದು ಕುರಿಯ ಮೇಲೆ ದಾಳಿ ನಡೆಸಿದೆ. ಚಿರತೆಯಿಂದ ಮನುಷ್ಯರಿಗೆ ಅನಾಹುತ ಆಗುವ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ನಮ್ಮ ಊರಿನಲ್ಲಿ ಬೋನ್ ಇಟ್ಟು ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ…..

ನಂತರ ಯುವಕ ಲಕ್ಷ್ಮೀಪತಿ ಮಾತನಾಡಿ, ಚಿರತೆ ಸೆರೆಹಿಡಿಯುವಂತೆ ಸಾಕಷ್ಟು ಬಾರಿ ಅರಣ್ಯ ಇಲಾಖೆಯಲ್ಲಿ ಮನವಿ ಮಾಡಿದರೂ ಯಾವ ಉಪಯೋಗವಾಗಿಲ್ಲ. ಬೋನ್ ಇರಿಸಲು ಅರಣ್ಯ ಇಲಾಖೆಗೆ ರೈತರು ಅರ್ಜಿ ಕೊಡಬೇಕಂತೆ‌. ಅರ್ಜಿ‌ ಕೊಟ್ಟು ಬೋನ್ ತರಲು ವಾಹನವನ್ನು ರೈತರೇ ಒದಗಿಸಬೇಕಂತೆ. ಅರಣ್ಯ ಇಲಾಖೆ ಅಧಿಕಾರಿಗಳು ಇನ್ನೂ ಏನೇನೋ ರೂಲ್ಸ್ ರೆಗ್ಯುಲೇಷನ್ ಹೇಳಿ ಕೈತೊಳೆದುಕೊಳ್ಳುತ್ತಾರೆ ಎಂದು ಆರೋಪಿಸಿದರು.

Leave a Reply

Your email address will not be published. Required fields are marked *

error: Content is protected !!