ಕೊಟ್ಟಿಗೆಮಾಚೇನಹಳ್ಳಿಯಲ್ಲಿ ಕರಡಿ ಹೆಜ್ಜೆ ಗುರುತು ಪತ್ತೆ:‌ ಭಯಭೀತರಾದ ಗ್ರಾಮಸ್ಥರು

ಮಳೆ ಬಂತೆಂದರೆ ಸಾಕು ದೊಡ್ಡಬಳ್ಳಾಪುರ ತಾಲೂಕಿನ ಕಾಡಿನಂಚಿನಲ್ಲಿರುವ ಊರುಗಳಲ್ಲಿ ಚಿರತೆ, ಕರಡಿ ಸೇರಿದಂತೆ ಇತರೆ ಕಾಡು ಪ್ರಾಣಿಗಳ ಹೆಜ್ಜೆ ಗುರುತುಗಳು ಪತ್ತೆಯಾಗುತ್ತಿವೆ.

ಅದರಲ್ಲೂ ಅತಿಹೆಚ್ಚಾಗಿ ಚಿರತೆ ಕಾಡಿನಿಂದ ನಾಡಿಗೆ ಬಂದು ಸಾಕು ಪ್ರಾಣಿಗಳಾದ ನಾಯಿ, ಮೇಕೆ, ಕುರಿ, ಹಸು‌ ಸೇರಿದಂತೆ ಇನ್ನಿತರೆ ಪ್ರಾಣಿಗಳನ್ನು ಬೇಟೆಯಾಡುತ್ತಿರುತ್ತದೆ.‌  ಇದರ ಜೊತೆಗೆ ಇತ್ತೀಚೆಗೆ ಕರಡಿಯು ಸಹ ಕಾಡಿನಂಚಿನಲ್ಲಿರುವ ಊರುಗಳಲ್ಲಿ ಓಡಾಡುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ….

ನಿನ್ನೆ ರಾತ್ರಿ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಸಮೀಪದ ಕೊಟ್ಟಿಗೆಮಾಚೇನಹಳ್ಳಿ ಗ್ರಾಮದಲ್ಲಿ ಕರಡಿ ಓಡಾಡಿರುವ ಹೆಜ್ಜೆ ಗುರುತುಗಳು ಗ್ರಾಮಸ್ಥರ ಕಣ್ಣಿಗೆ ಬಿದ್ದಿವೆ. ಕೆಲ ದಿನಗಳಿಂದಷ್ಟೇ ಕುಕ್ಕಲಹಳ್ಳಿ ಗ್ರಾಮದಲ್ಲಿ ಹಾಡಹಗಲೇ ಕರಡಿ ರೈತನ ಮೇಲೆ ಎರಗಿ ಮೈಯಲ್ಲಿ ಪರಚಿ ಗಾಯಪಡಿಸಿತ್ತು. ಅಂದು ಅದೃಷ್ಟವಶಾತ್ ರೈತ ಕರಡಿ ದಾಳಿಯಿಂದ ಪಾರಾಗಿ ಪ್ರಾಣ ಉಳಿಸಿಕೊಂಡಿದ್ದ. ಇದೀಗ ಕೊಟ್ಟಿಗೆಮಾಚೇನಹಳ್ಳಿಯ ಕರಡಿಗಳ ಹಾವಳಿ ಕಂಡುಬಂದಿದೆ. ಇದರಿಂದ ಗ್ರಾಮಸ್ಥರು ಇನ್ನಷ್ಟು ಭಯಭೀತರಾಗಿದ್ದಾರೆ.

ಈ ಕುರಿತು “ಪಬ್ಲಿಕ್ ಮಿರ್ಚಿ” ಗೆ ಮಾಹಿತಿ ನೀಡಿದ ಕೊಟ್ಟಿಗೆಮಾಚೇನಹಳ್ಳಿ ಗ್ರಾಮಸ್ಥ ನವೀನ್ ಕುಮಾರ್ ಕೆ.ಡಿ, ಇಂದು ಬೆಳಗ್ಗೆ ಹೊಲದ‌ ಕಡೆ ಬಂದಾಗ ಕರಡಿ ಹೆಜ್ಜೆ ಗುರುತುಗಳು ಕಂಡುಬಂದಿವೆ. ನಿನ್ನೆ ರಾತ್ರಿ ನಮ್ಮ ಊರಿನಲ್ಲಿ ಮಳೆ ಬಿದ್ದಿದೆ. ತೇವದಲ್ಲಿ ಕರಡಿ ಚಲನವಲನದ ಕುರುಕು ಪತ್ತೆಯಾಗಿದೆ. ಹುತ್ತದಲ್ಲಿ ಹುಳ-ಉಪ್ಪಟೆ ಸಿಗಬಹುದು ಎಂದು ಹುತ್ತವನ್ನು ಸಹ ಕೆರೆದಿದೆ ಎಂದು ತಿಳಿಸಿದ್ದಾರೆ.

ಕಾಡಿನಂಚಿನಲ್ಲಿರುವ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದೆ. ಪದೇ ಪದೇ ಜಾನುವಾರುಗಳ ಮೇಲೆ ದಾಳಿ ನಡೆಸಿ ಬಲಿಪಡೆಯುತ್ತಿವೆ. ಜನರ ಮೇಲೂ ದಾಳಿ ನಡೆಸುವ ಸಾಧ್ಯತೆ ಇದೆ. ಆದ್ದರಿಂದ ಇಲ್ಲಿನ ಗ್ರಾಮಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು ಎಂದು ಅರಣ್ಯ ಇಲಾಖೆಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದು ಉಪಯೋಗವಾಗಿಲ್ಲ. ಇನ್ನು ಮುಂದೆಯಾದರೂ ಘೋರ ಅನಾಹುತ ಸಂಭವಿಸುವುದಕ್ಕಿಂತ ಮುನ್ನ ಎಚ್ಚರ ವಹಿಸಿ‌ ಜನ ಜಾನುವಾರುಗಳ ಪ್ರಾಣ ರಕ್ಷಣೆ ಮಾಡಬೇಕು ಎಂದು ಕೊಟ್ಟಿಗೆಮಾಚೇನಹಳ್ಳಿ ಗ್ರಾಮಸ್ಥ ರವಿಕುಮಾರ್ ಕೆ.ಎನ್ ಆಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!