ಕೊಂಗಾಡಿಯಪ್ಪನವರ ನಿಸ್ವಾರ್ಥ ಸೇವಾ ಮನೋಭಾವದಿಂದ ದೊಡ್ಡಬಳ್ಳಾಪುರ ಅಭಿವೃದ್ಧಿ-ಜಿ.ಸುರೇಶ್

ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಡಿ.ಕೊಂಗಾಡಿಯಪ್ಪ ಅವರು ನಿಸ್ವಾರ್ಥ ಸೇವಾಮನೋಭಾವದಿಂದ ದೊಡ್ಡಬಳ್ಳಾಪುರ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಯಿತು ಎಂದು ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಹೋಬಳಿ ಘಟಕದ ಕೋಶಾಧ್ಯಕ್ಷ ಜಿ.ಸುರೇಶ್ ತಿಳಿಸಿದರು.

ದೊಡ್ಡಬಳ್ಳಾಪುರ ನಗರದ ಎಂ.ಎ.ಬಿ.ಎಲ್ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ಅವರ 163ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕೊಂಗಾಡಿಯಪ್ಪ ಅವರು ತಮ್ಮ ಸರಳತೆ, ಸಜ್ಜನಿಕೆ, ಸೇವಾ ಮನೋಭಾವ, ಪರಿಸರ ಪ್ರೇಮ, ಜನಪರ ಕಾಳಜಿಯಿಂದಾಗಿ ಮೈಸೂರು ಮಹಾರಾಜರು ಮತ್ತು ದಿವಾನರ ವಿಶ್ವಾಸ ಗಳಿಸಿದ್ದರು.

ಮಹಾರಾಜರು ಮತ್ತು ದಿವಾನರ ಗಮನವನ್ನು ದೊಡ್ಡಬಳ್ಳಾಪುರ ಅಭಿವೃದ್ಧಿಯ ಕಡೆಗೆ ಸೆಳೆದ ಕೊಂಗಾಡಿಯಪ್ಪನವರು, ದೊಡ್ಡಬಳ್ಳಾಪುರದಲ್ಲಿ ಪ್ರೌಢಶಾಲೆ, ಸಾರ್ವಜನಿಕ ಆಸ್ಪತ್ರೆ, ಪಶುವೈದ್ಯಶಾಲೆ, ಗೃಹಕೈಗಾರಿಕಾ ತರಬೇತಿ ಶಾಲೆ, ಮಹಿಳಾ ಸಮಾಜ ಕಟ್ಟಡದ ನಿಮಾರ್ಣವಾಗಲು ಸಾಧ್ಯವಾಯಿತು.

ದೊಡ್ಡಬಳ್ಳಾಪುರಕ್ಕೆ ವಿದ್ಯುಚ್ಛಕ್ತಿ ಬರಲು ಕಾರಣರಾದ ಇವರು, ಕೈಮಗ್ಗಗಳು ವಿದ್ಯುತ್ ಮಗ್ಗಗಳಾಗಲು ಸಾಧ್ಯವಾಯಿತು. ದೊಡ್ಡಬಳ್ಳಾಪುರ ಜನತೆ ಇಂದಿಗೂ ನಮ್ಮ ಊರಿನ ಪುಣ್ಯ ಪುರುಷ ಲೋಕಸೇವಾನಿರತ ಕೊಂಗಾಡಿಯಪ್ಪ ಎಂದು ಇಂದಿಗೂ ಸ್ಮರಿಸುತ್ತಿರುವುದು ಅವರ ಸಾಧನೆಗೆ ಸಾಕ್ಷಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂ.ಎ.ಬಿ.ಎಲ್ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸಿ. ನಿರ್ಮಲ ಕೊಂಗಾಡಿಯಪ್ಪನವರು ಇಂದಿನ ಯುವ ಪೀಳಿಗೆಗೆ ಪ್ರೇರಕ ಶಕ್ತಿಯಾಗಿದ್ದು, ಅವರ ಹಾದಿಯಲ್ಲಿ ಸಾಗುವ ಮೂಲಕ ನಮ್ಮ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದರು.

ಬಡ ವಿದ್ಯಾರ್ಥಿಗಳಿಗೆ ತಮ್ಮ ಮನೆಯಲ್ಲಿ ಆಶ್ರಯ ನೀಡಿ ವಿದ್ಯಾಭ್ಯಾಸ ಸಹಕಾರ ನೀಡಿದವರು. ಸಾಲು ಮರಗಳನ್ನು ನೆಟ್ಟು ಬೆಳೆಸಿದವರು. ಊರಿಗೆ ಉಪಕಾರಿಯಾಗಿ ಬದುಕಿದವರು ಕೊಂಗಾಡಿಯಪ್ಪ ಅವರು ಎಂದರು. ಇದೇ ಸಂದರ್ಭದಲ್ಲಿ ಕೊಂಗಾಡಿಯಪ್ಪನವರನ್ನು ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಎಂ.ಎ.ಬಿ.ಎಲ್ ಪ್ರೌಢಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *