‘ಕೈ’-ದಳ ಮೈತ್ರಿ ತೆಕ್ಕೆಗೆ ಕೊಡಿಗೇಹಳ್ಳಿ ಗ್ರಾ.ಪಂ.: ಅಧ್ಯಕ್ಷರಾಗಿ ಆಶಾರಾಣಿ, ಉಪಾಧ್ಯಕ್ಷೆಯಾಗಿ ಸೌಭಾಗ್ಯ ಆಯ್ಕೆ

ತಾಲ್ಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯತಿ ಖ್ಯಾತಿಯ ಕೊಡಿಗೇಹಳ್ಳಿ ಗ್ರಾಮ ಪಂಚಾಯತಿಯ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿವೆ.

ಒಟ್ಟು 34 ಸದಸ್ಯರನ್ನು ಒಳಗೊಂಡಿರುವ ಕೊಡಿಗೇಹಳ್ಳಿ ಗ್ರಾ.ಪಂ ಅಧ್ಯಕ್ಷೆ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಪಾಲನಜೋಗಿಹಳ್ಳಿ ಗ್ರಾಮದ ಸದಸ್ಯೆ ಆಶಾರಾಣಿ ನಾಗರಾಜು ಮತ್ತು ಅನುರಾಧ ನಾಮಪತ್ರ ಸಲ್ಲಿಸಿದ್ದರು. 21 ಮತಗಳನ್ನು ಪಡೆದ ಆಶಾರಾಣಿ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಕುರುಬರಹಳ್ಳಿ ವಾರ್ಡ್‌ನ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಸೌಭಾಗ್ಯ ಮಂಜುನಾಥ 20 ಮತಗಳನ್ನು ಪಡೆದು ಗೆಲುವು ಸಾಧಿಸಿದರು.

ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಜೆಡಿಎಸ್ ಮುಖಂಡ ಬಿ.ಮುನೇಗೌಡ, ಕಾಂಗ್ರೆಸ್ ನ ಹಸನಘಟ್ಟ ರವಿ ಸೇರಿ ಮುಖಂಡರು ಅಭಿನಂದಿಸಿದರು.

ಬಳಿಕ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹಸನಘಟ್ಟ ರವಿ ಮಾತನಾಡಿ, ಅಭಿವೃದ್ಧಿಯ ದೃಷ್ಟಿಯಿಂದ ನಾವು ಜೆಡಿಎಸ್ ಜೊತೆ ಕೈ ಜೋಡಿಸಿದ್ದೇವೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಪಕ್ಷಾತೀತವಾಗಿ ಕೆಲಸ ಮಾಡುವ ಒಡಂಬಡಿಕೆಯೊಂದಿಗೆ ಪರಸ್ಪರ ಒಂದಾಗಿದ್ದೇವೆ. ಸದಸ್ಯರು ಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಚರಂಡಿ, ರಸ್ತೆ ಇತ್ಯಾದಿ‌ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು, ಎಲ್ಲರೂ ಒಗ್ಗಟ್ಟಿನಿಂದ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡಿದ್ದೇವೆ‌ ಎಂದು ಹೇಳಿದರು.

ಈ ವೇಳೆ ಮಾಜಿ ಉಪಾಧ್ಯಕ್ಷೆ ಗೌರಮ್ಮ, ಅರಸೇಗೌಡ, ಕಿಟ್ಟಿ, ವೆಂಕಟರಮಣ, ಪ್ರೇಮದಾಸ್, ಶ್ರೀನಿವಾಸ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *