‘ಕೈ’ ಅಭ್ಯರ್ಥಿ ಬದಲಿಸಿ, ಜ.20 ಹೈಕಮಾಂಡ್‌ಗೆ ಡೆಡ್‌ಲೈನ್; KPCC ಮಾನದಂಡದಂತೆ ಅಭ್ಯರ್ಥಿ ಆಯ್ಕೆ ಮಾಡಲು ಆಗ್ರಹ

2023ರ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಗುರುವಾರ ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಭಿನ್ನಮತ ಬೀದಿಗೆ ಬಂದಿದೆ. ಹಾಲಿ ಶಾಸಕ ಟಿ.ವೆಂಕಟರಮಣಯ್ಯ ಹಾಗೂ ಕೆಪಿಸಿಸಿ, ಜಿಲ್ಲಾ ಕಾಂಗ್ರೆಸ್, ಅಭ್ಯರ್ಥಿ ಆಯ್ಕೆಯ ವೀಕ್ಷಕರ ವಿರುದ್ಧ ಪ್ರಬಲ ಟಿಕೆಟ್ ಆಕಾಂಕ್ಷಿ ಬಿ.ಸಿ.ಆನಂದಕುಮಾರ್ ಹಾಗೂ ಸ್ವಾಭಿಮಾನ ಕಾಂಗ್ರೆಸ್ ಕಾರ್ಯಕರ್ತರ ಗುಂಪು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಜನವರಿ 20 ರೊಳಗೆ ಪಕ್ಷದ ವರಿಷ್ಠರು ಸೂಕ್ತ ಅಭ್ಯರ್ಥಿಯನ್ನು ಘೋಷಿಸದಿದ್ದರೆ ಕಾಂಗ್ರೆಸ್ ಪರ ಕೆಲಸ ಮಾಡುವುದಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸಿದ್ದಾರೆ.

ಕೆಪಿಸಿಸಿ ಸದಸ್ಯ ಎಂ.ಜಿ. ಶ್ರೀನಿವಾಸ್ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರು, ಮುಖಂಡರ ಪಡೆಯಿದೆ. 35 ವರ್ಷದಿಂದ ಪಕ್ಷ ಸಂಘಟನೆಗೆ ಶ್ರಮಿಸಿದ್ದಾರೆ. ಆದರೆ, ಹಾಲಿ ಶಾಸಕರು ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಕನಿಷ್ಠ ಗೌರವ ನೀಡುತ್ತಿಲ್ಲ ಎಂದು ಆರೋಪಿಸಿದರು.

ಹಾಲಿ ಶಾಸಕರ ಜೊತೆ ನಮ್ಮ ಸಂಬಂಧ ಸುಮಾರು ವರ್ಷಗಳಿಂದಲೇ ಹಳಸಿದೆ. ನಿಷ್ಠೆ, ತತ್ವ ಸಿದ್ಧಾಂತ, ನಮ್ಮವರು , ನಮ್ಮ ಪಕ್ಷ ಎಂಬ ಭಾವನೆ ಶಾಸಕರಿಗೆ ಇಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ನಾವು ಕವಲುದಾರಿಯಲ್ಲಿದ್ದೇವೆ. ಇದಕ್ಕೆ ಶಾಸಕರು ಹಾಗೂ ಅವರಿಗೆ ಬೆನ್ನುಲುಬಾಗಿ ನಿಂತ ವರಿಷ್ಠರೇ ನೇರ ಕಾರಣ ಎಂದು ದೂರಿದರು.

ಪಕ್ಷದಲ್ಲಿನ ಭಿನ್ನಮತ ಕುರಿತು ಕಾಲಕಾಲಕ್ಕೆ ವರಿಷ್ಠರ ಗಮನಕ್ಕೆ ತಂದರೂ ಕಣ್ಣೊರೆಸುವ ತಂತ್ರಗಾರಿಕೆ ಮಾಡಿದ್ದಾರೆ. ಯಾವುದೇ ಸೂಕ್ತ ಕ್ರಮ ಜರುಗಿಸಿಲ್ಲ ಎಂದು ದೂರಿದರು.

ರಾಮಲಿಂಗಾರೆಡ್ಡಿಯಿಂದ ಕಾಂಗ್ರೆಸ್ ಇಬ್ಭಾಗ:ಸ್ವಾಭಿಮಾನಿ ಕಾಂಗ್ರೆಸ್ ಆರೋಪ

ಕ್ಷೇತ್ರದ ಶಾಸಕರ ವೈಫಲ್ಯ ನೋಡಿಯೇ ಆನಂದ್ ಅವರಿಂದ ಅರ್ಜಿ ಹಾಕಿಸಲಾಯಿತು. ಆದರೆ, ಇತ್ತೀಚೆಗೆ ನಡೆದ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹದ ವೇಳೆ ವರಿಷ್ಠರು ಏಕಪಕ್ಷೀಯವಾಗಿ ಅಭಿಪ್ರಾಯ ಸಂಗ್ರಹಿಸಿ, ಶಾಸಕರ ಪರ ವಕಾಲತ್ತು ವಹಿಸಿದ್ದಾರೆ.

ಇದೇ ಕಾರಣಕ್ಕೆ ಅಸಮಾಧಾನದ ಸನ್ನಿವೇಶ ಸೃಷ್ಟಿಯಾಗಿದೆ. ಅಭ್ಯರ್ಥಿ ಬದಲಾವಣೆ ಮಾಡದಿದ್ದರೆ ಕೆಲಸ ಮಾಡಲು ತಯಾರಿಲ್ಲ. ಇದು ಕಡೆಯ ಎಚ್ಚರಿಕೆ ಗಂಟೆ ರವಾನೆ. ಜ.20ರೊಳಗೆ ಅಭ್ಯರ್ಥಿ ಬದಲಾವಣೆ ಬಿ.ಸಿ.ಆನಂದ್ ಪರವಾಗಿರಬೇಕು. ಇಲ್ಲವಾದರೆ ಎಲ್ಲರೂ ಒಪ್ಪುವಂತಹ ಅಭ್ಯರ್ಥಿ ಆದಾಗ ಮಾತ್ರ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದರು.

ಕೆಪಿಸಿಸಿ ಮಾನದಂಡದಂತೆ ಟಿಕೆಟ್ ನೀಡಿ:

ಈ ಬಾರಿ 150 ಕ್ಷೇತ್ರ ಗೆಲ್ಲುವ ಗುರಿ ಹೊಂದಿರುವ ಕೆಪಿಸಿಸಿ ಟಿಕೆಟ್ ಹಂಚಿಕೆಯಲ್ಲಿ ಅಳವಡಿಸಿಕೊಂಡಿರುವ ಮಾನದಂಡದ ಆಧಾರದ ಮೇಲೆ ತೀರ್ಮಾನ ಪ್ರಕಟಿಸಲಿ. ವರ್ಚಸ್ಸು, ತಾಲೂಕಿನಲ್ಲಿ ಅಭ್ಯರ್ಥಿಯ ಬಲ, ಗೆಲುವೋಂದೆ ಮಾನದಂಡ ಆಧಾರದ ಮೇಲೆ ಟಿಕೆಟ್ ನೀಡಲಿ. ಎಲ್ಲ ಅರ್ಹತೆ ಆನಂದ್ ಅವರಿಗಿದೆ. ಪ್ರತಿಯೊಂದರಲ್ಲೂ ಅರ್ಹತೆ ಪಟ್ಟಿಯಲ್ಲಿ ಶಾಸಕರು ಪಾಸಾಗಲ್ಲ.

ಕಾಂಗ್ರೆಸ್ ಹಿರಿಯ ಮುಖಂಡ ತಿ.ರಂಗರಾಜು ಮಾತನಾಡಿ, ನೊಂದವರ ದನಿಯನ್ನು ಕೆಪಿಸಿಸಿಗೆ ಮುಟ್ಟಿಸುವ ಸಲುವಾಗಿ ಈ ಪತ್ರಿಕಾಗೊಷ್ಠಿ. ಇದು ಅನಿವಾರ್ಯವಾಗಿ ಸೃಷ್ಟಿಯಾದ ಸನ್ನಿವೇಶ. ನಾವು ಕಾರ್ಯಕರ್ತರಾಗಿ ದುಡಿದವರು. ಕಸ ಗುಡಿಸುವ ಕೆಲಸದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇವೆ.

ಎರಡು ಬಾರಿ ಗೆದ್ದ ನರಸಿಂಹಸ್ವಾಮಿ ಬಿಜೆಪಿಗೆ ಹೋದಾಗ ಕಾಂಗ್ರೆಸ್ ನೆಲಕಚ್ಚಿತ್ತು. ಆಗ ಕೆಲವರೇ ಸೇರಿ ಆರ್.ಜಿ ವೆಂಕಟಾಚಲಯ್ಯ ನೇತೃತ್ವದಲ್ಲಿ ಸಂಘಟನೆ ಮಾಡಿದ್ದೇವೆ. ಕೆಪಿಸಿಸಿ ಸಭೆಯಲ್ಲಿ ರಾಮಲಿಂಗಾರೆಡ್ಡಿ ಅವರು ದೊಡ್ಡಬಳಾಪುರ ಕಾಂಗ್ರೆಸ್ ಪಕ್ಷವನ್ನು ಇಬ್ಭಾಗ ಮಾಡಿದರು. ಶಾಸಕ ವೆಂಕಟರಮಣಯ್ಯ ಛಾಡಿ ಮಾತು ಕೇಳುವುದು ಹೆಚ್ಚು.

ನಮಗೆ ವೆಂಕಟರಮಣಯ್ಯ ಮುಖ್ಯವಲ್ಲ. ಪಕ್ಷ ಮುಖ್ಯ ನಮಗೆ. ಆರ್.ಜಿ ವೆಂಕಟಾಚಲಯ್ಯ ಅವರನ್ನು ವಿಶ್ವಾಸಕ್ಕೆ ಪಡೆದಿಲ್ಲ. ಎರಡು ಹಾಗೂ ಮುರನೇ ಸಾಲಿನ ನಾಯಕರನ್ನು ಗುರುತಿಸಿಲ್ಲ. ನಾವ್ಯಾರು ಪಕ್ಷ ವಿರೋಧಿ ಕೆಲಸ ಮಾಡಿಲ್ಲ. ನಾಯಕರಾದವರು ಜೊತೆಯಲ್ಲಿ ಎಲ್ಲರನ್ನೂ ಕರೆದೊಯ್ಯಬೇಕು. ಮುಂದೆ ವರಿಷ್ಠರ ನಡೆ ಆಧರಿಸಿ ತೀರ್ಮಾನಿಸುತ್ತೇವೆ. ಆನಂದ ಅವರಿಗೆ ಟಿಕೆಟ್ ಕೊಡದಿದ್ದರು ಪರವಾಗಿಲ್ಲ, ಗೆಲ್ಲುವವರಿಗೆ ಕೊಡಬೇಕು. ಆಭಿಪ್ರಾಯ ಸಂಗ್ರಹಿಸಬೇಕು. ಕಾರ್ಯಕರ್ತನ್ನು ಸಾಯಿಸಬೇಡಿ. ಜೀವಂತವಾಗಿರಲು ಸಹಕರಿಸಿ ಎಂದರು.

ಕೆಎಂಎಫ್ ನಿರ್ದೆಶಕ ಬಿ.ಸಿ ಆನಂದ್ ಕುಮಾರ್ ಮಾತನಾಡಿ ತಾಲೂಕಿನಲ್ಲಿ ಜ.20ರ ನಂತರ ಸ್ವಾಭಿಮಾನದ ಹೋರಾಟ ಮಾಡುತ್ತೇವೆ. ಅದಕ್ಕೂ ಮುಂಚೆ ಕಾಂಗ್ರೆಸ್‌ಗೆ ತಾಲೂಕಿನಿಂದ ಒಂದು ಸ್ಥಾನ ಗೆಲ್ಲಬೇಕಾದರೆ ಹಿರಿಯರು ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು. ಶಾಸಕರ ಹಿಂದಿರುವ ಫೋಟೊದಲ್ಲಿ ಶೇ.60 ರಷ್ಟು ಜನರು ಬೆನ್ನಿಗೆ ಚೂರಿಹಾಕುವವರೇ ಇದ್ದಾರೆ. ದುಡ್ಡು ಎಲ್ಲಾ ಕಾಲಕ್ಕೂ ಕೈ ಹಿಡಿಯುವುದಿಲ್ಲ.

ದೊಡ್ಡಬಳ್ಳಾಪುರ ಯಾರ ಸ್ವತ್ತಲ್ಲ. ಇಲ್ಲಿ ರಾಮೇಗೌಡ, ಜಾಲಪ್ಪ, ಆರ್.ಜಿ.ವೆಂಕಟಾಚಲಯ್ಯ ಸೇರಿ ಸಾಕಷ್ಟು ಮಹನೀಯರು ರಾಜಕಾರಣ ಮಾಡಿದ್ದಾರೆ. ದುಡ್ಡಿದ್ದರಷ್ಟೇ ರಾಜಕಾರಣ ಎಂಬ ಮಾತಿಗೆ ತಾಲೂಕು ಅಪವಾದವಾಗಿದೆ.

ನನ್ನ ಬಳಿ ದುಡ್ಡಿದೆಯೋ ಇಲ್ಲವೊ ಬೇಕಿಲ್ಲ. ಅವಕಾಶ ಕೊಡಿ ಗೆದ್ದು ತೋರಿಸುತ್ತೇವೆ. ಹತ್ತು ವರ್ಷದಿಂದ ಜನಸೇವಕನಾಗಿ ಕೆಲಸ ಮಾಡಿದ್ದೇನೆ. ಅಧಿಕಾರಕ್ಕಾಗಿ ದುಂಬಾಲು ಬಿದ್ದಿಲ್ಲ. ಸೋಲೊದಕ್ಕು ಸಿದ್ಧ, ಗೆಲ್ಲಲೂ ಸಿದ್ಧ. ಡಿಸಿಸಿ, ಕೆಪಿಸಿಸಿಗೆ ಮನವಿ. ಜ.20ರೊಳಗೆ ಬದಲಾವಣೆ ಮಾಡದಿದ್ದರೆ ನಮ್ಮ ತೀರ್ಮಾನ ಬೇರೆ ಇರುತ್ತದೆ. ಸ್ವಾಭಿಮಾನ ಕಾರ್ಯಕರ್ತರ ತೀರ್ಮಾನವೆ ಅಂತಿಮ ಎಂದು ಕೆಪಿಸಿಸಿಗೆ ನೇರ ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಬಿ.ಎಚ್.ಕೆಂಪಣ್ಣ, ಮಧುರೆ ಪ್ರಕಾಶ್, ಪಿಎಲ್ಡಿ ಬ್ಯಾಂಕ್ ಮಾಜಿ ಆಂಜಿನಪ್ಪ, ವೆಂಕಟರಾಮು, ಮಜರಾ ಹೊಸಹಳ್ಳಿ ಗ್ರಾ.ಪಂ ಅದ್ಯಕ್ಷ ಆನಂದ್, ಭೈರೇಗೌಡ, ಮನ್ಸೂರ್, ಹರೀಶ್, ಸಿದ್ದಬೈರೇಗೌಡ, ನಟರಾಜು ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *