ದೊಡ್ಡಬಳ್ಳಾಪುರ ತಾಲೂಕಿನ ಚಿಗರೇನಹಳ್ಳಿಯಲ್ಲಿನ ಎಂಎಸ್ ಜಿಪಿ ಕಸ ವಿಲೇವಾರಿ ಘಟಕಕ್ಕೆ ಬಿಬಿಎಂಪಿ ವ್ಯಾಪ್ತಿಯಿಂದ ಬರುವ ಕಸವನ್ನು ನಿಲ್ಲಿಸುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕಾಲಿಗೆ ಶಾಸಕ ಧೀರಜ್ ಮುನಿರಾಜ್ ಅವರು “ಕಾಲಿಗೆ ಬಿದ್ದು” ನಮಸ್ಕರಿಸುತ್ತಾ ಮನವಿ ಮಾಡುವ ಬದಲು ಉಗ್ರ ಹೋರಾಟ ಮಾಡಿ ಹೊಸ ಕಸ ಬರುವುದನ್ನು ತಡೆಹಿಡಿಯಬೇಕು ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಹುಸ್ಕೂರ್ ಆನಂದ್ ಹೇಳಿದರು.
ಜೂನ್.21ರಂದು ಡಿಸಿಎಂ ಡಿಕೆಶಿ ಅವರು ತಾಲೂಕಿನ ಲಕ್ಕೇನಹಳ್ಳಿಯಲ್ಲಿ ಉದ್ದೇಶಿತ ಜಲಾಶಯ ನಿರ್ಮಾಣ ಕಾಮಗಾರಿಗಳ ಸ್ಥಳವನ್ನು ಪರಿಶೀಲನೆ ನಡೆಸಿ, ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸುವ ವೇಳೆ ಶಾಸಕ ಧೀರಜ್ ಮುನಿರಾಜ್ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕಾಲಿಗೆ ಬಿದ್ದು ಬಿಬಿಎಂಪಿಯಿಂದ ತಾಲೂಕಿಗೆ ಬರುವ ಹೊಸ ಕಸವನ್ನು ನಿಲ್ಲಿಸುವಂತೆ ಕಾಲಿಗೆ ಬಿದ್ದು ಮನವಿ ಮಾಡಿದ್ದರು. ಈ ಕುರಿತು ಹುಸ್ಕೂರ್ ಆನಂದ್ ಅವರು ಪ್ರತಿಕ್ರಿಯೆ ನೀಡಿದರು.
ಇವರು ಕಾಲಿಗೆ ಬೀಳುತ್ತಿರುವುದನ್ನು ನೋಡುತ್ತಿದ್ದರೆ ಮುಂದೆ ಒಂದು ವೇಳೆ ಎನ್ ಡಿಎನಲ್ಲಿ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್ ನಲ್ಲಿ ಟಿಕೆಟ್ ಪಡೆಯಬಹುದು ಎಂಬ ಆಸೆಯಲ್ಲಿ ಬಿದ್ದಿರಬಹುದು ಎಂದು ನನಗೆ ವೈಯಕ್ತಿಕವಾಗಿ ಅನಿಸಿದೆ ಎಂದರು.
ಕೈಮುಗಿತೀನಿ, ಕಾಲಿಗೆ ಬೀಳ್ತೀನಿ ಕಸ ನಿಲ್ಲಿಸಿ ಅನ್ನೋದ್ರಲ್ಲೇ ಇದ್ರೆ ಕಸ ಬರೋದನ್ನು ನಿಲ್ಲಿಸೋದಕ್ಕೆ ಆಗಲ್ಲ. ಉಗ್ರ ಹೋರಾಟ ಮಾಡಿ ಕಸ ಬರೋದನ್ನ ತಡೆಹಿಡಿಬೇಕು. ಮಂತ್ರಕ್ಕೆ ಮಾವಿನಕಾಯಿ ಉದುರುವಾಗಿದ್ದರೆ ಹೋರಾಟಗಳು ಏನಕ್ಕೆ ಬೇಕಿತ್ತು. ಕಸ ನಿಲ್ಲಿಸಲು ಶಾಸಕ ಧೀರಜ್ ಮುನಿರಾಜ್ ಅವರು ಹೋರಾಟ ಪ್ರಾರಂಭ ಮಾಡಿದರೆ ನಾವು ಪಕ್ಷಾತೀತವಾಗಿ ಸಹಕಾರ ನೀಡುತ್ತೇವೆ ಎಂದರು.
ಈ ಹಿಂದೆ ಹೊಸಕೋಟೆ ತಾಲೂಕಿನ ಮಂಡೂರು ಹಾಗೂ ಯಲಹಂಕದಲ್ಲಿ ಕಸ ಹಾಕುವುದಕ್ಕೆ ಹೋರಾಟ ಮಾಡಿ ನಿಲ್ಲಿಸಲಾಗಿದೆ. ಅದೇರೀತಿ ನಮ್ಮಲ್ಲೂ ನಿಲ್ಲಿಸಲು ಹೋರಾಟದ ಹಾದಿ ಹಿಡಿಯಬೇಕು. ವೋಟ್ ಬ್ಯಾಂಕ್ ಗಾಗಿ ಜನರ ಕಣ್ಣೋರಿಸಲು ಡಿಕೆಶಿ ಕಾಲಿಗೆ ಬಿದ್ದು ನಾಟಕ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಧೀರಜ್ ಮುನಿರಾಜ್ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕಾಲಿಗೆ ಬಿದ್ದಿರುವುದು ತಾಲೂಕಿನ ಜನತೆಗೆ ಅವಮಾನ ಮಾಡಿದಂತೆಯಾಗಿದೆ. ಕಾಲಿಗೆ ಬಿದ್ದಿರುವುದು ಒಂದು ರೀತಿ ನೆಪವಷ್ಟೆ, ಕಾಲಿಗೆ ಬಿದ್ರೆ ಕಸ ಬರೋದು ನಿಲ್ಲಲ್ಲ. ಹೋರಾಟ ಮಾಡೇ ಕಸ ನಿಲ್ಲಿಸಬೇಕು ಎಂದು ಹೇಳಿದರು.
2014ನೇ ಸಾಲಿನಲ್ಲಿ ನನ್ನ ಕಂಪನಿಗೆ ದಿನಕ್ಕೆ 100 ಟನ್ ಕಸ ಕೊಟ್ಟಿದ್ದರು. ಆದರೆ, ನಾನು ದೊಡ್ಡಬಳ್ಳಾಪುರ ಜನತೆಯ ಹಿತದೃಷ್ಟಿಯಿಂದ ಕಸ ತೆಗೆದುಕೊಂಡಿಲ್ಲ. ಅದೇರೀತಿ ಎಂಎಸ್ ಜಿಪಿ ಘಟಕಕ್ಕೆ ದಿನಕ್ಕೆ 500 ಟನ್ ಕಸ ಹಾಕಿಸಿಕೊಳ್ಳಲು ಅನುಮತಿ ಇದೆ. ಆದರೆ, ಅವರು ಹೆಚ್ಚುವರಿಯಾಗಿ ಕಸ ಹಾಕಿಸಿಕೊಳ್ಳುತ್ತಿದ್ದಾರೆ. ಅದರ ಬಗ್ಗೆ ಯಾರು ಮಾತನಾಡುತ್ತಿಲ್ಲ. ಪ್ರತಿ ದಿನ ನೂರಾರು ಲಾರಿಗಳು ಬಂದು ಕಸ ಸುರಿದು ಹೋಗುತ್ತಿವೆ.
ದೊಡ್ಡಬಳ್ಳಾಪುರದ ಜನತೆ ಮೂರ್ಖರು ಎಂದು ತಿಳಿದು, ವೋಟ್ ಹಾಕಿಸಿಕೊಳ್ಳಲು ಜನರ ಮುಂದೆ ಈ ರೀತಿ ನಾಟಕ ಮಾಡುತ್ತಿದ್ದಾರೆ. ಜನರಿಗೆ ಒಳ್ಳೆದನ್ನು ಮಾಡಲು ಮುಂದಾಗುತ್ತಿಲ್ಲ ಎಂದರು.
ಬೆಂಗಳೂರಿನಲ್ಲಿ ಕಸ ವಿಲೇವಾರಿ ಮಾಡಲು ಕೇವಲ 600 ಕೋಟಿ ಖರ್ಚು ಮಾಡಿದರೆ ಸಾಕು. ಆದರೆ, 1600 ಕೋಟಿ ಖರ್ಚು ಮಾಡಲಾಗುತ್ತಿದೆ. ನಾವು ದೊಡ್ಡಬಳ್ಳಾಪುರಕ್ಕೆ ಬರುವ ಕಸವನ್ನು ನಿಲ್ಲಿಸಿದರೆ ಸರ್ಕಾರ ಎಚ್ಚೆತ್ತುಕೊಂಡು ಆಧುನಿಕವಾಗಿ ಕಸದಿಂದ ವಿದ್ಯುತ್, ಗ್ಯಾಸ್ ತಯಾರು ಮಾಡುವುದಕ್ಕೆ ಪ್ರಯತ್ನ ಪಡುತ್ತೆ. ಇಲ್ಲದಿದ್ದಲ್ಲಿ ಇಲ್ಲ ಎಂದರು.
ಒಂದು ನಮ್ಮ ಮನವಿಗೆ ಸ್ಪಂದಿಸದೇ ಕಸ ಹಾಕೋದನ್ನು ಮುಂದುವರಿಸಿದರೆ ಹೋರಾಟ ಮಾಡಬೇಕು, ಹೋರಾಟಕ್ಕೂ ಬಗ್ಗಲಿಲ್ಲ ಅಂದರೆ ಕೋರ್ಟ್ ಮೊರೆ ಹೋಗಿ ನಿಲ್ಲಸಬೇಕು. ಅದನ್ನು ಬಿಟ್ಟು ಕೈಮುಗಿ, ಕಾಲಿಗೆ ಬೀಳು ಅಂದ್ರೆ ಆಗಲ್ಲ ಎಂದು ಹೇಳಿದರು.
ಬಾಶೆಟ್ಟಿಹಳ್ಳಿ ವಿಎಸ್ಎಸ್ಎನ್ ನಲ್ಲಿ 37 ಲಕ್ಷ ಹಗರಣ ನಡೆದಿದೆ. ಅದನ್ನು ತನಿಖೆ ಮಾಡಿಸಬೇಕು. ಕೆಎಂಎಫ್ ನಲ್ಲಿ 400 ಕೋಟಿ ರೂ. ಹಗರಣ ನಡೆದಿದೆ. ಅದನ್ನು ವಿಧಾನಸೌಧದಲ್ಲಿ ಮಾತನಾಡುತ್ತೇನೆ ಅಂದರೆ ಆ ಬಗ್ಗೆ ದಾಖಲಾತಿಗಳನ್ನು ನೀಡುತ್ತೇನೆ ಎಂದರು.