ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನಪರ ಹೋರಾಟಗಳ ಒಕ್ಕೂಟ ಬೆಂಬಲ ಸೂಚಿಸಿತ್ತು. ಕಾಂಗ್ರೆಸ್ ಪಕ್ಷವು 135 ಸ್ಥಾನಗಳೊಂದಿಗೆ ಬಹುಮತ ಪಡೆದಿರುವ ಸಲುವಾಗಿ ಒಕ್ಕೂಟದ ವತಿಯಿಂದ ಮಂಗಳವಾರ ತಾಲ್ಲೂಕು ಕಚೇರಿ ವೃತ್ತದ ಬಳಿ ಪದಾಧಿಕಾರಿಗಳು ಜೈಕಾರ ಕೂಗಿ ಸಂಭ್ರಮಾಚರಣೆ ಮಾಡಿದರು.
ಒಕ್ಕೂಟದ ಅಧ್ಯಕ್ಷ ನಂಜುಂಡಯ್ಯ ಮಾತನಾಡಿ, ರಾಜ್ಯದಲ್ಲಿ ಭ್ರಷ್ಟಾಚಾರ, ಬೆಲೆ ಏರಿಕೆಯಿಂದಾಗಿ ಬಡ ಜನತೆ ಸಂಪೂರ್ಣ ತತ್ತರಿಸಿದ್ದರು. ಬಿಜೆಪಿಯ ದುರಾಡಳಿತಕ್ಕೆ ರಾಜ್ಯದ ಅಭಿವೃದ್ಧಿಯೂ ಕುಂಠಿತವಾಗಿತ್ತು. ಹೀಗಾಗಿ ಕಾಂಗ್ರೆಸ್ ಪಕ್ಷದ ಸಿದ್ಧಾಂತ ನಂಬಿ ನಮ್ಮ ಸಂಘಟನೆಯಿಂದ ಬೆಂಬಲ ಸೂಚಿಸಿದ್ದೇವು.
ಮುಂದೆ ಕಾಂಗ್ರೆಸ್ ಪಕ್ಷವು ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಬೆಲೆ ಏರಿಕೆ ತಡೆಹಾಕಿ, ಭ್ರಷ್ಟಾಚಾರ ರಹಿತ ಆಡಳಿತ ನೀಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಅಧ್ಯಕ್ಷ ನಂಜುಂಡಯ್ಯ, ಕಾರ್ಯದರ್ಶಿ ಚೌಡಪ್ಪ, ಮಹಿಳಾ ಘಟಕ ಅಧ್ಯಕ್ಷೆ ಶಶಿಕಲಾ ಸೇರಿ ಇತರ ಪದಾಧಿಕಾರಿಗಳು ಇದ್ದರು.