ಕೈಗಾರಿಕೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧ- ಉದ್ಯೋಗ ಮೇಳದಲ್ಲಿ ಸ್ಥಳೀಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ- ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ

ಜಿಲ್ಲಾಮಟ್ಟದ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿರುವ ಕಂಪನಿಗಳು ಉದ್ಯೋಗಕ್ಕೆ ಅನುಗುಣವಾಗಿ ಸ್ಥಳೀಯ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಹೆಚ್ಚಿನ ಪ್ರಾಶಸ್ತ್ಯ ನೀಡಿ ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್ ಮುನಿಯಪ್ಪ ಅವರು ಕಂಪನಿಗಳ ಮುಖ್ಯಸ್ಥರಿಗೆ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕೌಶಲ್ಯ ಮಿಷನ್, ಜಿಲ್ಲಾ ಕೈಗಾರಿಕೆ ಕೇಂದ್ರ ಸಹಯೋಗದಲ್ಲಿ ನಡೆಯುವ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳಕ್ಕೆ ಸಂಬಂಧಿಸಿದಂತೆ ಕೈಗಾರಿಕೆ ಮುಖ್ಯಸ್ಥರಿಗೆ ಹಮ್ಮಿಕೊಂಡಿದ್ದ ಸಂವಾದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲೆ ಎತ್ತಿದ ನಂತರ ಕೈಗಾರಿಕಾ ಪ್ರದೇಶ ವ್ಯಾಪ್ತಿ ಹೆಚ್ಚಾಗುತ್ತಿದೆ. ಹಲವು ರೈತಾಪಿ ಕುಟುಂಬಗಳು ಕೈಗಾರಿಕೆಗಳಿಗೆ ಭೂಮಿ ನೀಡಿದ್ದಾರೆ. ಹಲವು ಕುಟುಂಬಗಳು ಕೃಷಿಯನ್ನು ಅವಲಂಬಿಸಿದ್ದವು. ಇದನ್ನು ಅರಿತು ಮನೆಗೊಂದು ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಉದ್ಯೋಗ ಮೇಳ ಅಯೋಜಿಸಲಾಗುತ್ತಿದೆ. ಉದ್ಯೋಗ ಮೇಳದಲ್ಲಿ ಸ್ಥಳೀಯ ಅರ್ಹ ಅಭ್ಯರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಕಲ್ಪಿಸಿಕೊಟ್ಟರೆ ಭೂಮಿ ಕಳೆದುಕೊಂಡ ಹಲವು ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಕೈಗಾರಿಕೆಗಳು ಸ್ಥಳಿಯ ಅರ್ಹ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಿ ನೇಮಕಾತಿ ಮಾಡಿಕೊಳ್ಳಿ ಎಂದು ಕೈಗಾರಿಕೆಗಳ ಮುಖ್ಯಸ್ಥರಿಗೆ ಸಲಹೆ ನೀಡಿದರು.

ಜಿಲ್ಲೆಯಲ್ಲಿರುವ ಕೈಗಾರಿಕೆಗಳಿಗೆ ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಹಾಗೂ ಕೈಗಾರಿಕೆಗಳ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಸದಾ ಸಿದ್ಧವಿರುತ್ತದೆ ಎಂದು ಆಶ್ವಾಸನೆ ನೀಡಿದರು.

ಮುಂದಿನ ದಿನಗಳಲ್ಲಿ ಕಂಪನಿಗಳ ಬೇಡಿಕೆಗೆ ಅನುಗುಣವಾಗಿ ಯಾವ ರೀತಿಯ ಕೌಶಲ್ಯ ಹೊಂದಿದ ಅಭ್ಯರ್ಥಿಗಳು ಬೇಕಾಗಿದ್ದಾರೆ ಎಂಬುದರ ಮಾಹಿತಿ ಪಡೆದು ಅರ್ಹ ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಕಿಯೋನಿಕ್ಸ್ ಅಧ್ಯಕ್ಷರು ಹಾಗೂ ಹೊಸಕೋಟೆ ವಿಧಾನಸಭಾ ಕ್ಷೇತ್ರ ಶಾಸಕರಾದ ಶರತ್ ಕುಮಾರ್ ಬಚ್ಚೇಗೌಡ ಅವರು ಮಾತನಾಡಿ, ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿರುವ ಕಂಪನಿಗಳು ಪ್ರಸ್ತುತ ನೋಂದಣಿ ಆಗಿರುವ ಉದ್ಯೋಗಾಂಕ್ಷಿಗಳ ಪೈಕಿ ಅಂದಾಜು 500 ಅಭ್ಯರ್ಥಿಗಳನ್ನು ಒಂದು ಕಂಪನಿ ಸಂದರ್ಶನ ಮಾಡಬೇಕಿದೆ. ಒತ್ತಡದ ಪರಿಸ್ಥಿತಿಯನ್ನು ಎದುರಿಸಲು ಕಂಪನಿಗಳು ಸಿದ್ಧರಿರಬೇಕು. ಖಾಯಂ ಉದ್ಯೋಗ ನೇಮಕಾತಿಗೆ ಮೊದಲ ಆದ್ಯತೆ ನೀಡಿ. ಕಂಪನಿಗಳು ಗೂಗಲ್ ಶೀಟ್ ನಲ್ಲಿ ಖಾಲಿ ಇರುವ ಉದ್ಯೋಗಗಳ ಬಗ್ಗೆ ಪ್ರತಿ ತಿಂಗಳು ಮಾಹಿತಿ ತುಂಬಿದರೆ ಯಾವ ಕಂಪನಿಯಲ್ಲಿ ಯಾವ ಉದ್ಯೋಗ ಅವಕಾಶವಿದೆ ಎಂಬುದರ ಬಗ್ಗೆ ಉದ್ಯೋಗಾಂಕ್ಷಿಗಳಿಗೆ ಮಾಹಿತಿ ಸಿಕ್ಕಂತಾಗುತ್ತದೆ, ಇದರಿಂದ ಉದ್ಯೋಗಾಂಕ್ಷಿಗಳ ಅರ್ಜಿ ಸಲ್ಲಿಸಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ಅವರು ಮಾತನಾಡಿ, ಸೆಪ್ಟೆಂಬರ್ 13ರಂದು ದೇವನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಬೃಹತ್ ಉದ್ಯೋಗಮೇಳಕ್ಕೆ ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದ್ದು, ಅಂದಾಜು 20000 ಉದ್ಯೋಗಾಂಕ್ಷಿಗಳು ಭಾಗವಹಿಸುವ ನಿರೀಕ್ಷೆಯಿದೆ. ಬೆಳಗ್ಗೆ 09 ರಿಂದ ಸಂಜೆ 06 ಗಂಟೆಯವರೆಗೆ ಉದ್ಯೋಗ ಮೇಳ ನಡೆಯಲಿದೆ. 20 ರಿಸೆಪ್ಷನ್ ಕೌಂಟರ್ ಗಳನ್ನು ತೆರೆದು ಉದ್ಯೋಗಾಂಕ್ಷಿಗಳಿಗೆ ವಿದ್ಯಾರ್ಹತೆಗೆ ಅನುಗುಣವಾಗಿ ಕಂಪನಿಗಳಿಗೆ ತೆರಳಲು ಮಾರ್ಗದರ್ಶನ ಮಾಡಲಾಗುವುದು. ಉದ್ಯೋಗಾಂಕ್ಷಿಗಳಿಗೆ ಕುಡಿಯುವ ನೀರು, ಊಟದ ವ್ಯವಸ್ಥೆ ಮಾಡಲಾಗಿದೆ. ಉದ್ಯೋಗ ಮೇಳ ಯಶಸ್ವಿಯಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು. ಜೊತೆಗೆ ಕಂಪನಿಗಳು ನೇರ ನೇಮಕಾತಿಗೆ ಹೆಚ್ಚಿನ ಆದ್ಯತೆ ನೀಡಿ ಸಂದರ್ಶನ ಸಮಯದಲ್ಲಿ ಉದ್ಯೋಗಕ್ಕೆ ಅನುಗುಣವಾಗಿ ಅರ್ಹ ಅಭ್ಯರ್ಥಿ ಸಿಕ್ಕರೆ ಸ್ಥಳದಲ್ಲಿ ನೇಮಕಾತಿ ಪತ್ರ ವಿತರಿಸುವಂತೆ ಕಂಪನಿ ಮುಖ್ಯಸ್ಥರಲ್ಲಿ ಕೋರಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧಿಕಾರಿ ಡಾ.ಕೆ.ಎನ್ ಅನುರಾಧ, ಉಪವಿಭಾಗಾಧಿಕಾರಿ ದುರ್ಗಶ್ರೀ ಎನ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೆ ರಮೇಶ್, ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ನರೇಂದ್ರ ಬಾಬು, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಜಗನ್ನಾಥ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಕೈಗಾರಿಕೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!