ಕೇರಳಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶಿಸಿದ್ದು, ಕೇರಳದಾದ್ಯಂತ ಭಾರೀ ಮಳೆಯಾಗುತ್ತಿದೆ. 16 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೇರಳಕ್ಕೆ ಮುಂಗಾರು ಮಳೆ ಅವಧಿಗೂ ಮುನ್ನವೇ ಆಗಮಿಸಿದೆ. 2009ರ ನಂತರ ಮೊದಲ ಬಾರಿಗೆ, ಮಾನ್ಸೂನ್ ಭಾರತದ ಮುಖ್ಯ ಭೂಭಾಗವನ್ನು ಇಷ್ಟು ಬೇಗ ತಲುಪಿದೆ.
ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿ ಜೂನ್ 1ರ ವೇಳೆಗೆ ಕೇರಳವನ್ನು ಪ್ರವೇಶಿಸುತ್ತದೆ. ಜುಲೈ 8ರ ವೇಳೆಗೆ ಇಡೀ ದೇಶವನ್ನು ಆವರಿಸುತ್ತದೆ. ಇದು ಸೆಪ್ಟೆಂಬರ್ 17ರ ಸುಮಾರಿಗೆ ವಾಯುವ್ಯ ಭಾರತದಿಂದ ಹಿಮ್ಮೆಟ್ಟಲು ಪ್ರಾರಂಭಿಸುತ್ತದೆ. ಅಕ್ಟೋಬರ್ 15 ರ ಹೊತ್ತಿಗೆ ಸಂಪೂರ್ಣವಾಗಿ ಹಿಮ್ಮೆಟ್ಟುತ್ತದೆ.
ಮಾನ್ಸೂನ್ ಕಳೆದ ವರ್ಷ ಮೇ 30 ರಂದು, 2023 ರಲ್ಲಿ ಜೂನ್ 8 ರಂದು, 2022 ರಲ್ಲಿ ಮೇ 29 ರಂದು, 2021 ರಲ್ಲಿ ಜೂನ್ 3 ರಂದು, 2020 ರಲ್ಲಿ ಜೂನ್ 1 ರಂದು, 2019 ರಲ್ಲಿ ಜೂನ್ 8 ರಂದು ಮತ್ತು 2018 ರಲ್ಲಿ ಮೇ 29 ರಂದು ದಕ್ಷಿಣ ರಾಜ್ಯಕ್ಕೆ ಆಗಮಿಸಿತು.
ಈ ವರ್ಷದ ಮಾನ್ಸೂನ್‌ನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಏಪ್ರಿಲ್‌ನಲ್ಲಿ ಐಎಂಡಿ ಮುನ್ಸೂಚನೆ ನೀಡಿತ್ತು.