ಕೇಂದ್ರ ಸರ್ಕಾರ ಸಹಕಾರಿ ತತ್ವ ಹಾಗೂ ಅಧಿಕಾರ ವಿಕೇಂದ್ರೀಕರಣಕ್ಕೆ ವಿರುದ್ಧವಾಗಿದೆ- ಸಿಎಂ ಸಿದ್ದರಾಮಯ್ಯ

ಸಹಕಾರ ಕ್ಷೇತ್ರ ರಾಜ್ಯ ವ್ಯಾಪ್ತಿಗೆ ಬರುತ್ತದೆ. ಆದರೆ ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರದಲ್ಲಿಯೂ ಹಿಡಿತವನ್ನು ಸಾಧಿಸಲು ಹೊರಟಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ. ಸಂವಿಧಾನದಲ್ಲಿ ನಾವು ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದೇವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಹಕಾರ ಸಚಿವರಾಗಿದ್ದಾರೆ. ಇಲ್ಲಿಯವರೆಗೆ ರಾಜ್ಯಗಳ ಅಧಿಕಾರವನ್ನು ಒತ್ತುವರಿ ಮಾಡಿಕೊಳ್ಳುವ ಕೆಲಸ ಯಾರಿಂದಲೂ ಆಗಿರಲಿಲ್ಲ. ಇದರ ಅರ್ಥ ಕೇಂದ್ರ ಸರ್ಕಾರ ಸಹಕಾರಿ ತತ್ವ ಹಾಗೂ ಅಧಿಕಾರ ವಿಕೇಂದ್ರೀಕರಣಕ್ಕೆ ವಿರುದ್ಧವಾಗಿದೆ ಎಂದು ಅರ್ಥಮಾಡಿಕೊಳ್ಳಬೇಕು. ಇದನ್ನು ನಾವೆಲ್ಲರೂ ಒಕ್ಕೊರಲಿನಿಂದ ವಿರೋಧಿಸುವುದು ಅಗತ್ಯ ಮತ್ತು ಅನಿವಾರ್ಯತೆಯಿದೆ ಎಂದು ಸಿಎಂ ಸಿದ್ದರಾಮಯ್ಯ‌ ಹೇಳಿದರು.

ಮಹಾರಾಷ್ಟ್ರದ ಸಂಗಮನೇರ್ ನಲ್ಲಿ ಇಂದು ಆಯೋಜಿಸಿದ್ದ ಸಹಕಾರ ಚಳವಳಿಯ ಹಿರಿಯ ಧುರೀಣ ಭಾವು ಸಾಹೇಬ್ ಥೋರಟ್ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಡಾ. ಅಣ್ಣಾ ಸಾಹೇಬ್ ಶಿಂಧೆ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆ ತಿದ್ದುಪಡಿ ಹಾಗೂ ಕೃಷಿ ಕಾಯ್ದೆ ತಿದ್ದುಪಡಿ ಮಾಡಿದೆ.  ದೇಶದ ರೈತರು ಇದನ್ನು ವಿರೋಧ ಮಾಡಿದ ಮೇಲೆ ಕೇಂದ್ರ ಸರ್ಕಾರ ಮಣಿದು ಕಾಯ್ದೆ ವಾಪಸ್ಸು ಪಡೆಯುವ ತೀರ್ಮಾನ ಮಾಡಿದರು. ಕೇಂದ್ರ ಸರ್ಕಾರದ ಅನೇಕ ತೀರ್ಮಾನಗಳು ರಾಜ್ಯ ಸರ್ಕಾರದ ಹಿತಕ್ಕೆ ವಿರುದ್ಧವಾಗಿವೆ. ಸಹಕಾರ ತತ್ವವಾದ   ‘ಒಬ್ಬರಿಗೆ ಎಲ್ಲರೂ, ಎಲ್ಲರಿಗೆ ಒಬ್ಬರು’ ಎಂಬ ಉದಾತ್ತ ಧ್ಯೇಯವನ್ನು ನಾಶ ಮಾಡಲು ಕೇಂದ್ರ ಸರ್ಕಾರ ಹೊರಟಿದೆ ಎಂದರು.

ಡಾ. ಅಣ್ಣಾಸಾಹೇಬ್ ಶಿಂಧೆ ಅವರು ದೇಶದ ಆಹಾರ ಸ್ವಾವಲಂಬನೆಗೆ ಕಾರಣರಾದವರು. ಜವಾಹರ್ ಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರೀ, ಇಂದಿರಾಗಾಂಧಿ, ಅಣ್ಣಾಸಾಹೇಬ್ ಶಿಂಧೆಯವರು ಹಸಿರು ಕ್ರಾಂತಿಗೆ ಕಾರಣೀಭೂತರು. ಕೃಷಿ ತಜ್ಞ ಡಾ.ಸ್ವಾಮಿನಾಥನ್ ತಮ್ಮ ಲೇಖನದಲ್ಲಿ ಅಣ್ಣಾ ಸಾಹೇಬ್ ಶಿಂಧೆ ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ. ದೇಶದಲ್ಲಿ 140 ಕೋಟಿ ಜನರಿಗೆ ಆಹಾರದಲ್ಲಿ ಸ್ವಾವಲಂಬನೆ ಹೊಂದಲು ಕಾಂಗ್ರೆಸ್ ಪಕ್ಷ ಕಾರಣ. ಬಾವೂಸಾಹೇಬ್ ಥೋರಟ್  ಹಾಗೂ ಡಾ. ಅಣ್ಣಾಸಾಹೇಬ್ ಶಿಂಧೆ ರವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುವ ಮೂಲಕ ಅವರಿಗೆ ಗೌರವವನ್ನು ಸಲ್ಲಿಸಬೇಕಾಗಿದೆ ಎಂದು ಹೇಳಿದರು.

ಅಣ್ಣಾ ಸಾಹೇಬ್ ಶಿಂಧೆ ಅವರು ರಾಷ್ಟ್ರ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ, ಭಾವು ಸಾಹೇಬ್ ಥೋರಟ್ ಅವರು ತಮ್ಮ ಜೀವನದುದ್ದಕ್ಕೂ ಸಮಾಜಮುಖಿ ಯಾಗಿ ಜನಪರವಾಗಿ ಕೆಲಸ ಮಾಡಿದ್ದರು. ಸಹಕಾರ ಕ್ಷೇತ್ರದಲ್ಲಿ ಬಾವು ಸಾಹೇಬ್ ಅವರು ಮಾಡಿರುವ ಕಾರ್ಯಕ್ಕೆ ಅವರು ಸಹಕಾರಿ ಮಹರ್ಷಿ ಎಂದು ಕರೆಯಲ್ಪಟ್ಟರು. ಸಂಗಮನೇರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನೇಕ ಸಹಕಾರ ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದರು. ಸಹಕಾರ ಕ್ಷೇತ್ರ ನಮ್ಮ ದೇಶದಲ್ಲಿ ನೂರು ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿದೆ ಎಂದರು.

ಭಾವು ಸಾಹೇಬ್ ಥೋರಟ್ ಮಹತ್ಮಾ ಗಾಂಧಿಯವರಿಂದ ಸ್ವಾತಂತ್ರ್ಯ ಹೋರಾಟದ ಪ್ರೇರಣೆ ಪಡೆದು ಜೈಲುವಾಸವನ್ನೂ ಅನುಭವಿಸಿದ್ದರು. ಕೃಷಿ, ಸಣ್ಣ ಕೈಗಾರಿಕೆಗಳು, ಮಾರುಕಟ್ಟೆ, ಶಿಕ್ಷಣ, ಆರೋಗ್ಯ ಮುಂತಾದ ಕ್ಷೇತ್ರದಲ್ಲಿ ಸಹಕಾರಿ ಸಂಘಗಳನ್ನು ಸ್ಥಾಪಿಸಿದ್ದರು. ಒಮ್ಮೆ ಶಾಸಕರಾಗಿದ್ದರು. ಶಾಸಕರಾಗಿದ್ದರೂ ರೈತರ ಸಮಸ್ಯೆಗಳು ಎದುರಾದಾಗ ಸರ್ಕಾರದ ವಿರುದ್ಧವೇ ಮಾತನಾಡಲು ಹಿಂಜರಿಯುತ್ತಿರಲಿಲ್ಲ. ಅಷ್ಟರಮಟ್ಟಿಗೆ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿಯಾಗಿದ್ದರು ಎಂದು ತಿಳಿಸಿದರು.

ಪ್ರಜಾತಂತ್ರ ವಿರೋಧಿ ಹಾಗೂ ಸಂವಿಧಾನವಿರೋಧಿ ಬಿಜೆಪಿ ಪಕ್ಷಕ್ಕೆ ಅಧಿಕಾರ ನೀಡಿದರೆ, ದೇಶ ಅಪಾಯಕ್ಕೆ ಸಿಲುಕಲಿದೆ. ಭಾರತವನ್ನು ಬ್ರಿಟೀಷರ ಕಪಿಮುಷ್ಟಿಯಿಂದ ಬಿಡಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಮಾತ್ರ. ಸರ್ವಾಧಿಕಾರಿ ಮನೋಭಾವವಿರುವಂತಹ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಉಳಿಸಿದರೆ, ದೇಶಕ್ಕೆ ಸಂವಿಧಾನಕ್ಕೆ ಧಕ್ಕೆ ಬರುತ್ತದೆ. ಆದ್ದರಿಂದ ಭಾರತದ ಸಂವಿಧಾನದ ಆಶಯದ ರಕ್ಷಣೆಯ ಜವಾಬ್ದಾರಿ ಕಾಂಗ್ರೆಸ್ ಪಕ್ಷದ ಮೇಲಿದೆ ಎಂದರು.

ಬಿಜೆಪಿಯ ಜನವಿರೋಧಿ ನೀತಿಯನ್ನು ಕರ್ನಾಟಕದ ಮನೆಮನೆಗೂ ಕಾಂಗ್ರೆಸ್ ತಲುಪಿಸಿದ್ದರಿಂದ, ಬಿಜೆಪಿಯನ್ನು ರಾಜ್ಯದ ಅಧಿಕಾರದಿಂದ ಕಿತ್ತೊಗೆಯಲು ಸಾಧ್ಯವಾಯಿತು. ಕರ್ನಾಟಕದಲ್ಲಿ 40% ಕಮೀಷನ್ ನ ಭ್ರಷ್ಟಾಚಾರ ನಡೆಯಲು ಬಿಜೆಪಿ ಕಾರಣ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭ್ರಷ್ಟಾಚಾರ ಹಾಗೂ ವಚನಭ್ರಷ್ಟತೆಯಿಂದ ಬೇಸತ್ತ ಕರ್ನಾಟಕದ ಜನ ಬಿಜೆಪಿಯನ್ನು ಕಿತ್ತೊಗೆದರು ಎಂದು ಹೇಳಿದರು.

ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಲಾಗಿದ್ದ ಗ್ಯಾರಂಟಿ ಭರವಸೆಗಳನ್ನು ತಪ್ಪದೇ ಈಡೇರಿಸಿದೆ. ಸಂವಿಧಾನದಲ್ಲಿ ನಂಬಿಕೆಯಿರುವವರೆಲ್ಲರೂ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವ ಪ್ರಯತ್ನವನ್ನು ಕಾಂಗ್ರೆಸ್ ಸೇರಿದಂತೆ ಉಳಿದೆಲ್ಲ ಪಕ್ಷಗಳೂ ಮಾಡಬೇಕು ಎಂದು ತಿಳಿಸಿದರು.

Leave a Reply

Your email address will not be published. Required fields are marked *