ಕೇಂದ್ರ ಸರ್ಕಾರದ ವಿರುದ್ಧ ಫೆ. 7ರಂದು ಜಂತರ್ ಮಂತರ್ ನಲ್ಲಿ ಪ್ರತಿಭಟನೆ- ಸಿಎಂ ಸಿದ್ದರಾಮಯ್ಯ

ನಮ್ಮ ರಾಜ್ಯಕ್ಕೆ ನಿರಂತರವಾಗಿ ಆಗುತ್ತಿರುವ ಅನ್ಯಾಯ, ತಾರತಮ್ಯ, ಮಲತಾಯಿ ಧೋರಣೆ ವಿರೋಧಿಸಿ ರಾಜ್ಯದ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಫೆಬ್ರವರಿ 07ರಂದು ನವದೆಹಲಿಯ ಜಂತರ್ ಮಂತರ್ ನಲ್ಲಿ ಬೆಳಿಗ್ಗೆ 11.00 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು, ಬಿಜೆಪಿ ಶಾಸಕರು, ಸಂಸದರು, ನಾಯಕರಿಗೂ ಈ ಮೂಲಕ ನಾವು ಪ್ರತಿಭಟನೆಗೆ ಕರೆ ಕೊಡುತ್ತಿದ್ದೇವೆ. ನಾವು ಬಿಜೆಪಿ ವಿರುದ್ಧ ಪ್ರತಿಭಟನೆ ಮಾಡುತ್ತಿಲ್ಲ. ರಾಜ್ಯದ ಪರವಾಗಿ ಪ್ರತಿಭಟಿಸುತ್ತಿದ್ದೇವೆ. ನೀವೂ ರಾಜ್ಯದ ಜನರ ಧ್ವನಿಯಾಗಿ, ರಾಜ್ಯದ ಜನರ ಪರವಾಗಿ ನಿಲ್ಲಿ ಎಂದು ಬಿಜೆಪಿಯವರಿಗೆ ಕರೆ ಕೊಡುತ್ತೇವೆ. ಕನ್ನಡಿಗರಿಗೆ ದ್ರೋಹ ಮಾಡಬೇಡಿ, ಬನ್ನಿ ರಾಜ್ಯದ ಪರವಾಗಿ ಧ್ವನಿ ಎತ್ತೋಣ ಎಂದು ಕರೆಯುತ್ತಿದ್ದೇವೆ. ಪ್ರತಿಭಟಿಸದೆ ಸುಮ್ಮನಿದ್ದರೆ ಕನ್ನಡಿಗರಿಗೆ ದ್ರೋಹ ಮಾಡಿದಂತಾಗುತ್ತದೆ ಎಂದರು.

ರಾಜ್ಯದ ಜನತೆ ನಮಗೆ ಕೊಟ್ಟ ಅವಕಾಶಕ್ಕೆ ನ್ಯಾಯ ಒದಗಿಸಬೇಕಾದುದ್ದು ನಮ್ಮ ಕರ್ತವ್ಯ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ನ್ಯಾಯ ಒದಗಿಸಿಕೊಡಲಿದೆ ಎಂದು ಇಲ್ಲಿಯವರೆಗೂ ತಾಳ್ಮೆಯಿಂದ ಕಾಯುತ್ತಿದ್ದೆವು. ಕಳೆದ ಸಾಲಿನ ಬಜೆಟ್ ನಲ್ಲಿ ಹೇಳಿದಂತೆ ನಡೆದುಕೊಳ್ಳುತ್ತಾರೆ ಎಂದು ಕಾದಿದ್ದೆವು. ಆದರೆ ಇದುವರೆಗೂ ಅನ್ಯಾಯ ಸರಿ ಪಡಿಸಿಲ್ಲ. ಇದರ ವಿರುದ್ಧ ಧ್ವನಿ ಎತ್ತಲೇಬೇಕಾಗಿದೆ. ಹೋರಾಟಕ್ಕೆ ಜೊತೆ ನೀಡಲು ಇಡೀ ಸರ್ಕಾರ ಪಕ್ಷ ಭೇದ ಮರೆತು ಆಹ್ವಾನ ನೀಡಿದ್ದೇವೆ. ಕನ್ನಡಿಗರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕಿದೆ. ಕೇಂದ್ರದ ಕಿವಿಯನ್ನು ತೆರೆಸಲು ಹೋರಾಡುತ್ತಿದ್ದೇವೆ ಎಂದು ಹೇಳಿದರು.

ಭದ್ರಾ ಯೋಜನೆಗೆ 5,300 ಕೋಟಿ ಕೊಡುತ್ತೇವೆ ಎಂದು ಕಳೆದ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿ ಈವರಗೆ ಒಂದು ರೂ. ಕೂಡ ಬಿಡುಗಡೆ ಮಾಡಿಲ್ಲ. ಬರ ಪರಿಹಾರದ ಹಣವೂ ಇಲ್ಲ. ನರೇಗಾ ಅಡಿ 150 ಮಾನವ ದಿನಗಳಿಗೆ ಕೂಲಿ ಕೊಡಲು ಕೂಡ ಅನುಮತಿ ನೀಡಿಲ್ಲ. ಇಂಥ ಹಲವು ಕಾರಣಗಳಿಗಾಗಿ ಅನಿವಾರ್ಯವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ದೇಶದ ಜನರ ಗಮನ ಸೆಳೆಯಬೇಕು, ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಬಗ್ಗೆ, ಹಣಕಾಸು ಹಂಚಿಕೆಯಲ್ಲಾಗಿರುವ ತಾರತಮ್ಯ, ಬರ ಪರಿಹಾರದಲ್ಲಿ ತೋರಿರುವ ಮಲತಾಯಿ ಧೋರಣೆ ಬಗ್ಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಶಾಸಕರು, ಮೇಲ್ಮನೆ ಶಾಸಕರು ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಒಕ್ಕೂಟ ವ್ಯವಸ್ಥೆಯಲ್ಲಿ ಸಂವಿಧಾನದ ಮೂಲಕ ಕೇಂದ್ರ ಮತ್ತು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸೇರಿ ಜನರ ಸೇವೆಯನ್ನು ಮಾಡಲು ಒಪ್ಪಿಕೊಂಡಿದ್ದೇವೆ. ಕೇಂದ್ರ ಸರ್ಕಾರದ ತೆರಿಗೆ ಹಣವೆಂದರೆ  ರಾಜ್ಯಗಳಿಂದ ಬರುವ ತೆರಿಗೆ ಹಣ,  ಸೆಸ್, ಪೆಟ್ರೋಲ್ ಡೀಸೆಲ್, ಸರ್ಚಾರ್ಜ್. ಇವುಗಳಿಂದ ಸಂಗ್ರಹವಾಗುವ ಹಣವನ್ನು ಕೇಂದ್ರ ಮತ್ತು ರಾಜ್ಯಗಳಿಗೆ ಹಂಚಿಕೆಯಾಗಬೇಕೆಂದು ಹಣಕಾಸು ಆಯೋಗ ರಚನೆಯಾಗಿದೆ. ಸಂವಿಧಾನದ 7ನೇ ಪರಿಚ್ಛೇಧ ಅದನ್ನು ಸ್ವತಂತ್ರ ಸಂಸ್ಥೆಯಾಗಿಸಿದೆ. ಇಲ್ಲಿಯವರೆಗೆ 15 ಹಣಕಾಸು ಆಯೋಗಗಳು ಆಗಿವೆ. ಪ್ರಸ್ತುತ 16ನೇ ಹಣಕಾಸು ಆಯೋಗ ರಚನೆಯಾಗಿದ್ದು, ಅಧ್ಯಕ್ಷರ ನೇಮಕವಾಗಿದೆ ಎಂದರು.

14ನೇ ಹಣಕಾಸು ಆಯೋಗದಲ್ಲಿ ರಾಜ್ಯದ ತೆರಿಗೆಯ ಪಾಲು ಶೇ 4.71% ಇದ್ದದ್ದು, 15ನೇ ಹಣಕಾಸು ಆಯೋಗದಲ್ಲಿ 3.64% ಗೆ ಇಳಿಕೆಯಾಯಿತು. ಅಂದರೆ ಶೇ 1.07% ಕಡಿಮೆಯಾಗಿದೆ. ಅದರಿಂದ 4 ವರ್ಷಗಳಲ್ಲಿ 45,000 ಕೋಟಿ ರೂ. ರಾಜ್ಯಕ್ಕೆ ಕಡಿತ ಆಯಿತು. ಇದು ಕೇವಲ ನಗದು ಹಂಚಿಕೆಯೊಂದರಲ್ಲೇ ಆಗಿರುವ ಅನ್ಯಾಯ. ಅಂದಾಜಿನ ಪ್ರಕಾರ ಈ ಐದು ವರ್ಷಗಳಲ್ಲಿ ನಗದು ಹಂಚಿಕೆಯಲ್ಲಿ 62,098 ಕೋಟಿ ರೂ.ಗಳು ಕರ್ನಾಟಕಕ್ಕೆ ಕಡಿಮೆಯಾಗಲಿದೆ ಎಂದು ಹೇಳಿದರು.

ಹಣಕಾಸು ಆಯೋಗ ನಗದು ಹಂಚಿಕೆ ಮಾಡುವಾಗ ಶೇ 4.71 ರಿಂದ ಶೇ 3.74 ಕ್ಕೆ ಇಳಿಕೆ ಮಾಡಿದ್ದರಿಂದ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು 5,495 ಕೋಟಿ ರೂ.ಗಳ ವಿಶೇಷ ಅನುದಾನ ನೀಡಲು ಶಿಫಾರಸ್ಸು ಮಾಡಲಾಗಿತ್ತು. ಮಧ್ಯಂತರ ಬಜೆಟ್ ನಲ್ಲಿ ಈ ಬಗ್ಗೆ ಶಿಫಾರಸ್ಸು ಮಾಡಿದರು. ಈ ಹಣವೂ ರಾಜ್ಯಕ್ಕೆ ಬರಲಿಲ್ಲ. ಈ ಮೊತ್ತವನ್ನು ಕೇಂದ್ರ ಸರ್ಕಾರವನ್ನು ಕೇಳಿ ಪಡೆಯಲು ವಿಧಾನಸಭೆಯಲ್ಲಿ  ವಿಷಯ ಮಂಡಿಸಿದ್ದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದನ್ನು ತಿರಸ್ಕರಿಸಿದರು. ಅಂತಿಮ ವರದಿಯಲ್ಲಿ 3000 ಕೋಟಿ ರೂ. ಫೆರಿಫೆರಲ್ ರಿಂಗ್ ರೋಡಿಗೆ, ಕೆರೆಗಳನ್ನು ಅಭಿವೃದ್ಧಿ ಪಡಿಸಲು ರೂ.3,000 ಕೋಟಿ ಸೇರಿ 6000 ಕೋಟಿ ರೂ. ಗಳನ್ನು ಹೆಚ್ವರಿಯಾಗಿ ಕೊಡಲು ಶಿಫಾರಸು ಮಾಡಲಾಯಿತು. ಈ ಹಣವೂ ಬರಲಿಲ್ಲ ಎಂದರು.

ಮೋದಿ ಅವರು ಪ್ರಧಾನಿ ಆದ ಬಳಿಕ 2020-21 ರಿಂದ 2025-26 ರವೆಗಿನ ಅವಧಿಗೆ ರಚನೆಯಾದ 15ನೇ ಹಣಕಾಸು ಆಯೋಗದ ತೆರಿಗೆ ಪಾಲು ಹಂಚಿಕೆಯಲ್ಲಿ 62,098 ಕೋಟಿ ರೂ.ಗಳಷ್ಟು ರಾಜ್ಯಕ್ಕೆ ನಷ್ಟವಾಗಿದೆ. ಅಂತೆಯೇ 2020-21 ಹಾಗೂ 2021-22 ನೇ ಸಾಲಿಗೆ ವಿಶೇಷ ಅನುದಾನ ಕೊಡದೆ ರಾಜ್ಯಕ್ಕೆ 11,495 ಕೋಟಿ ರೂ.ಗಳು ನಷ್ಟವಾಗಿದೆ. ಒಟ್ಟಾರೆ 15ನೇ ಹಣಕಾಸು ಆಯೋಗದಲ್ಲಿ ರಾಜ್ಯದ ಪಾಲಿನಲ್ಲಿ 73,593 ಕೋಟಿ ರೂ.ಗಳು ಕಡಿಮೆಯಾಗಿದೆ ಎಂದು ತಿಳಿಸಿದರು.

GST ಜಾರಿಗೆ ಬಂದಾಗ ಇದು ಅವೈಜ್ಞಾನಿಕ ಎಂದು ನಾವು ಸಾರಿ ಸಾರಿ ಹೇಳಿದೆವು. ಆಗ ರಾಜ್ಯದ ತೆರಿಗೆ ಬೆಳವಣಿಗೆ ದರ 15% ಇತ್ತು.  ಇದರಿಂದ ತೆರಿಗೆ, ಕೇಂದ್ರದ ಅನುದಾನವೂ ಹೆಚ್ಚಾಗತ್ತೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಅದನ್ನೂ ಪರಿಹಾರ ರೂಪದಲ್ಲಿ ರಾಜ್ಯಕ್ಕೆ ತುಂಬಿ ಕೊಡುವುದಾಗಿ ಕೇಂದ್ರ ಹೇಳಿತ್ತು.‌ ಈ ಪರಿಹಾರ ಜೂನ್ 2022 ಕ್ಕೆ ನಿಲ್ಲಿಸಿದ್ದಾರೆ. ಈಗ ಪರಿಹಾರ ಕೊಡುತ್ತಿಲ್ಲ. 5 ವರ್ಷಗಳ ಕಾಲ ಮಾತ್ರ ಪರಿಹಾರ ಕೊಟ್ಟರು. ಇದರಿಂದಾಗಿ ಈಗ ನಮ್ಮ ತೆರಿಗೆ ಬೆಳವಣಿಗೆ 15% ಗೆ ಮತ್ತೆ ತಲುಪಲು ಆಗಲೇ ಇಲ್ಲ. ಹೀಗಾಗಿ ಪರಿಹಾರ ಮುಂದುವರೆಸಿ ಎಂದು ಕೇಳಿದೆವು. ಇವತ್ತಿನವರೆಗೂ ಮುಂದುವರೆಸುವ ಬಗ್ಗೆ ತೀರ್ಮಾನವನ್ನೇ ಮಾಡಿಲ್ಲ. ಈಗಲೂ ನಮಗೆ, ನಮ್ಮ ರಾಜ್ಯಕ್ಕೆ GST ನಲ್ಲಿ ಅನ್ಯಾಯ ಆಗುತ್ತಲೇ ಇದೆ ಎಂದರು.

ರಾಜ್ಯದಿಂದ ಪ್ರತಿ ವರ್ಷ ಕೇಂದ್ರಕ್ಕೆ 4, 30,000 ಕೋಟಿ ತೆರಿಗೆ ವಸೂಲಿ ಆಗಿ ಹೋಗುತ್ತಿದೆ. ತೆರಿಗೆ ಸಂಗ್ರಹಣೆಯಲ್ಲಿ ಮಹಾರಾಷ್ಟ್ರ ಬಿಟ್ಟರೆ ನಮ್ಮ ರಾಜ್ಯ ಎರಡನೇ ಸ್ಥಾನದಲ್ಲಿದೆ. ನಮಗೆ ಈ ವರ್ಷ ತೆರಿಗೆ ಪಾಲಿನಲ್ಲಿ ರೂ.37,252 ಕೋಟಿ ಬರುವುದು. ಕೇಂದ್ರ ಪುರಸ್ಕೃತ ಯೋಜನೆಯಲ್ಲಿ 13,005 ಕೋಟಿ ರೂಪಾಯಿ, ಎರಡೂ ಸೇರಿ ಕೇವಲ 50,257 ಕೋಟಿ ರೂಪಾಯಿ ರಾಜ್ಯಕ್ಕೆ ಬಂದಿದೆ. ರಾಜ್ಯಕ್ಕೆ ಇದು ಭೀಕರ ಅನ್ಯಾಯ ಅಲ್ಲವೇ? ಎಂದು ಹೇಳಿದರು.

ಒಟ್ಟು ಲೆಕ್ಕದಲ್ಲಿ ರಾಜ್ಯದಿಂದ 100 ರೂ. ಕೇಂದ್ರಕ್ಕೆ ಹೋದರೆ ಅದರಲ್ಲಿ ನಮಗೆ 12- 13 ರೂ.ಗಳು ಮಾತ್ರ ವಾಪಾಸ್ ಬರುತ್ತಿದೆ. ಉಳಿದದ್ದು ಕೇಂದ್ರ ಸರ್ಕಾರ ಇಟ್ಟುಕೊಳ್ಳುತ್ತಿದೆ ಎಂದು ಕೇಂದ್ರ ಸರ್ಕಾರವೇ ಅಂಕಿ ಅಂಶಗಳನ್ನು ನೀಡಿದೆ ಎಂದರು.

2017-18 ರಲ್ಲಿ ಕೇಂದ್ರದ ಬಜೆಟ್ ಗಾತ್ರ 21,46,735 ಕೋಟಿ ಇತ್ತು. ಆಗ ರಾಜ್ಯಕ್ಕೆ ತೆರಿಗೆ ಪಾಲು ರೂ. 31,908 ಕೋಟಿ, ಅನುದಾನ ಹಾಗೂ ನಗದು ಹಂಚಿಕೆ ರೂ.16,072 ಕೋಟಿ, ಎರಡೂ ಸೇರಿಸಿ ರೂ.47,990 ಕೋಟಿ ಸಿಕ್ಕಿತ್ತು ಎಂದು ತಿಳಿಸಿದರು.

2023-24 ಸಾಲಿನಲ್ಲಿ 45,03,097 ಕೋಟಿ ಕೇಂದ್ರ ಬಜೆಟ್ ಆಗಿದ್ದು, ರಾಜ್ಯಕ್ಕೆ ರೂ.50,257 ಕೋಟಿ ಮಾತ್ರ ಸಿಗುವ ಅಂದಾಜಿದೆ. ತೆರಿಗೆ ಹಂಚಿಕೆ 2.2 ಇಂದ 2024-25 ಕ್ಕೆ 1.23 ಗೆ ಇಳಿದಿದೆ. ಇದರಿಂದಾಗಿ ರಾಜ್ಯಕ್ಕೆ ಆಗುವ ಅನ್ಯಾಯದ ಪ್ರಮಾಣ ಹೆಚ್ಚುತ್ತಲೇ ಇದೆ ಎಂದರು.

ಬಜೆಟ್ ಗಾತ್ರ ಡಬಲ್ ಆದಾಗ, ರಾಜ್ಯದ ತೆರಿಗೆಯ ಪಾಲು ದುಪ್ಪಟ್ಟಾಗಬೇಕಿತ್ತು. ಆದರೆ ಈಗ ಅರ್ಧಕ್ಕಿಂತ ಹೆಚ್ಚು ಕಡಿಮೆ ಆಗಿದೆ. ಸೆಸ್, ಸರ್ ಚಾರ್ಜ್ ಪ್ರತೀ ವರ್ಷ ಹೆಚ್ಚಿಸಿಕೊಂಡು ಹೋಗುತ್ತಿದ್ದಾರೆ. ಸೆಸ್, ಸರ್ ಚಾರ್ಜ್ ಮೂಲಕ ಕೇಂದ್ರ ವಸೂಲಿ ಮಾಡುವ ತೆರಿಗೆಯಲ್ಲಿ ರಾಜ್ಯಗಳಿಗೆ ನಯಾಪೈಸೆ ವಾಪಾಸ್ ಬರಲ್ಲ. ಆದರೆ ಸೆಸ್, ಸರ್ ಚಾರ್ಜ್ ಎರಡೂ ಕೊಡೋದು ರಾಜ್ಯಗಳೇ ಎಂದು ಹೇಳಿದರು.

ಆದ್ದರಿಂದ 16ನೇ ಹಣಕಾಸು ಆಯೋಗದ ಮುಂದೆ ಸೆಸ್ ಹಾಗೂ ಸರ್ ಚಾರ್ಜ್ ನಲ್ಲೂ ಪಾಲು ಕೊಡಲೇಬೇಕು ಎಂದು ಒತ್ತಾಯಿಸುತ್ತೇವೆ. ಈ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತಲಿದ್ದೇವೆ. ಇದರ ಜತೆಗೆ ಶೇ1 ರಷ್ಟು ರಕ್ಷಣಾ ಇಲಾಖೆಗೆ ಇಟ್ಟುಕೊಳ್ಳುತ್ತಾರೆ. ಹೀಗೆ ಮೋದಿ ಅವರು ಬಂದ ನಂತರ ರಚನೆಯಾದ 15ನೇ ಹಣಕಾಸು ಆಯೋಗದ ಬಳಿಕ ರಾಜ್ಯಕ್ಕೆ 1,87,867 ಕೋಟಿ ರೂ. ಅನ್ಯಾಯವಾಗಿದೆ ಎಂದರು.

ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂಪಾಯಿ ಕೊಡುತ್ತೇವೆ ಎಂದು ತಿಳಿಸಿದ್ದರು. ಬಸವರಾಜ ಬೊಮ್ಮಾಯಿ ಅವರು ರಾಜ್ಯ ಬಜೆಟ್ ಮಂಡಿಸುವಾಗ ಇದನ್ನೇ ಪುನಃ ನೀರಾವರಿ ಯೋಜನೆಯ ಅನುದಾನ ಎಂದು ಉಲ್ಲೇಖಿಸಿದ್ದರು. 2.5 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸುವ ಯೋಜನೆ ಇದು. ಆದರೆ ಇದುವರೆಗೂ ಒಂದೇ ಒಂದು ರೂ.ಬಂದಿಲ್ಲ . ಈಗಲಾದರೂ ಬಿಡುಗಡೆ ಮಾಡಿ ಎಂದು ನಾನು ಒತ್ತಾಯಿಸುತ್ತೇನೆ ಎಂದು ಹೇಳಿದರು.

ಮಹದಾಯಿ ಯೋಜನೆಯ ಪರಿಸರ ತೀರುವಳಿ ಇಂದಿನವರೆಗೆ ಆಗಿಲ್ಲ. ಯೋಜನೆ ಪ್ರಾರಂಭಿಸಲು ತೀರುವಳಿ ಕೊಡಿ ಎಂದರೆ ಕೊಟ್ಟಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿಲ್ಲ. ಇಂದಿನವರೆಗೆ ಗೆಜೆಟ್ ನೋಟಿಫಿಕೇಶನ್ ಮಾಡಿಕೊಟ್ಟಿಲ್ಲ ಎಂದು ತಿಳಿಸಿದರು.

ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಮೇಕೆದಾಟುಗೆ ಇವತ್ತಿನವರೆಗೂ ಅನುಮತಿ ಕೊಟ್ಟಿಲ್ಲ. 236 ತಾಲ್ಲೂಕುಗಳಲ್ಲಿ 223 ತಾಲ್ಲೂಕುಗಳು ಬರಗಾಲ ಪೀಡಿತವಾಗಿದೆ. 123 ತೀವ್ರ ಬರಗಾಲ ಪೀಡಿತವಾಗಿದ್ದರೂ ಕೇಂದ್ರದಿಂದ ನಯಾಪೈಸೆ ಬಂದಿಲ್ಲ ಎಂದರು.

ಸೆಪ್ಟೆಂಬರ್ 23 ರಂದು ಕೇಂದ್ರ ತಂಡ ಬಂದು ಬರಗಾಲ ಅಧ್ಯಯನ ಮಾಡಿ ಕೇಂದ್ರಕ್ಕೆ ವರದಿ ಕೊಟ್ಟಿದೆ. ಬಳಿಕ ಶಬರಿ ಕಾದಂತೆ ನಮ್ಮ ಮಂತ್ರಿಗಳು ಭೇಟಿಗೆ ಕಾದು ವಾಪಾಸ್ ಬಂದಿದ್ದಾರೆ. ಭೇಟಿ ಮಾಡಿದಾಗ ಸಭೆ ಕರೆಯುತ್ತೇನೆ ಎಂದ ಅಮಿತ್ ಶಾ ಇವತ್ತಿನವರೆಗೂ ಸಭೆಯನ್ನೇ ಕರೆದಿಲ್ಲ. ಸಭೆ ಕರೆಯದೆ ಬರ ಪರಿಹಾರ ಬರುವುದೇ ಇಲ್ಲ ಎಂದು ಹೇಳಿದರು.

ಅಮಿತ್ ಶಾ ಅವರು ಇವತ್ತಿನವರೆಗೂ ಪ್ರಾಥಮಿಕ ಸಭೆಯನ್ನೇ ಕರೆದಿಲ್ಲ. ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಬಂದಾಗಲೂ  ಮನವಿ ಮಾಡಿದ್ದೆ. 35 ಸಾವಿರ ಕೋಟಿ ಬೆಳೆ ನಷ್ಟ ಆಗಿದೆ. ಇದಕ್ಕೆ 17,901 ಕೋಟಿ ರೂಪಾಯಿ ಪರಿಹಾರವನ್ನು ಕೇಂದ್ರದಿಂದ ಕೇಳಿದ್ದೇವೆ. NDRF ನಿಂದ ನಯಾ ಪೈಸೆ ಬಿಡುಗಡೆ ಮಾಡಿಲ್ಲ. 2019 ರಲ್ಲಿ ಪ್ರವಾಹ ಬಂದಾಗ CM ಯಡಿಯೂರಪ್ಪ ಅವರು ಪ್ರಧಾನಿ ಮೋದಿ ಅವರಿಗೆ NDRF ಗಾಗಿ ಗೋಗರೆದರೂ ಪರಿಹಾರ ಕೊಡಲಿಲ್ಲ ಎಂದು ತಿಳಿಸಿದರು.

ಕೇಂದ್ರ ಸರ್ಕಾರ 2021ರಲ್ಲಿ ಪ್ರವಾಹ ಬಂದಾಗಲೂ ಅಗತ್ಯ ಹಣ ಕೊಟ್ಟಿಲ್ಲ.  ಪರಿಹಾರ ಹಂಚಿಕೆ ಮಾಡುವಾಗ 6 ಮಾನದಂಡಗಳಾದ ಜನಸಂಖ್ಯೆ, ವಿಸ್ತೀರ್ಣ, ವರಮಾನದ ಅಂತರ, ಅರಣ್ಯ ಪ್ರದೇಶ, ತೆರಿಗೆ ಹಣಕಾಸಿನ ಪರಿಸ್ಥಿತಿಗಳನ್ನು ಪರಿಗಣಿಸುತ್ತಾರೆ. ಈ ಮಾನದಂಡಗಳ ಪ್ರಕಾರವೂ ನಮಗೆ ಪರಿಹಾರದ ಹಣ ಬಂದಿಲ್ಲ. ನಮ್ಮ ರಾಜ್ಯಕ್ಕೆ ಅನ್ಯಾಯವಾಗಬಾರದು. ಪತ್ರ ಬರೆದರೆ ಉತ್ತರ ಕೊಡದೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಮಂತ್ರಿಗಳಿಗೆ ಭೇಟಿಗೆ ಅವಕಾಶವಿಲ್ಲದಿರುವುದು, ಬರಗಾಲಕ್ಕೆ ಹಣಕಾಸು ಬಿಡುಗಡೆ ಮಾಡದಿರುವುದು, ಹಂಚಿಕೆಯಲ್ಲಿ ಅನ್ಯಾಯವಾಗಿರುವುದು ನೋಡಿದರೆ ಇದು ಒಕ್ಕೂಟ ವ್ಯವಸ್ಥೆಯ ಅಪಮಾನ ಅಲ್ಲವೇ? ಎಂದು ಪ್ರಶ್ನೆ ಮಾಡಿದರು.

ಉತ್ತರದ ರಾಜ್ಯಗಳಿಗೆ ಅನುದಾನ ಕೊಡಬೇಡಿ ಎಂದು ಹೇಳುವುದಿಲ್ಲ. ಆದರೆ ದಕ್ಷಿಣ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಿ. ಚಿನ್ನದ ಮೊಟ್ಟೆ ಇಡುವ ಕೋಳಿ ಎಂದು ಕತ್ತು ಕುಯ್ಯಬಾರದು, ಹಾಲು ಕೊಡುವ ಕೆಚ್ಚಲನ್ನೇ ಕತ್ತರಿಸಬಾರದು ಎನ್ನುವುದು ನಮ್ಮ ಮನವಿ. ನಮ್ಮ ನಿರಂತರ ಬೇಡಿಕೆ, ಮನವಿಗಳಿಗೂ ಕೇಂದ್ರ ಬೆಲೆ ಕೊಟ್ಟಿಲ್ಲ ಎಂದರು.

ಯಡಿಯೂರಪ್ಪ, ಬೊಮ್ಮಾಯಿಯವರು ಪ್ರಧಾನಿಗಳ ಮುಂದೆ ಬಾಯಿ ಬಿಡುವುದಿಲ್ಲ. ವಿರೋಧಪಕ್ಷದ ನಾಯಕ ಆರ್.ಅಶೋಕ್ ಗೆ ಈ ವಿಷಯಗಳೆಲ್ಲಾ ಅರ್ಥವೇ ಆಗಲ್ಲ.  ಪ್ರಹ್ಲಾದ್ ಜೋಷಿ ಮತ್ತು ಶೋಭಾ ಕರಂದ್ಲಾಜೆ ರಾಜ್ಯದಿಂದ ಕೇಂದ್ರ ಮಂತ್ರಿಗಳಾಗಿದ್ದಾರೆ. 27 ಜನ ಸಂಸದರು ಸಂಸತ್ತಿನಲ್ಲಿ ಮಾತೇ ಆಡಿಲ್ಲ. ಜನ ಇವರನ್ನು ಆಯ್ಕೆ ಮಾಡಿ ಕಳುಹಿಸಿದರೆ ಕಣ್ಣುಮುಚ್ಚಿ ಕುಳಿತಿದ್ದಾರೆ. ಇವರು ರಾಜ್ಯದ ಪರವಾಗಿ ಪಾರ್ಲಿಮೆಂಟಲ್ಲಿ ಬಾಯಿಯನ್ನೇ ಬಿಡುತ್ತಿಲ್ಲ. 11 ಸಾವಿರ ಕೋಟಿ ಕೇಂದ್ರ ಹಣಕಾಸು ಸಚಿವರಿಂದಲೇ ತಿರಸ್ಕಾರವಾಗಿದೆ. ರಾಜ್ಯದಿಂದ ಆಯ್ಕೆ ಆದ ನಿರ್ಮಲಾ ಸೀತಾರಾಮನ್ ರಿಂದಲೇ ರಾಜ್ಯಕ್ಕೆ ಹೆಚ್ಚು ಅನ್ಯಾಯ ಆಗಿದೆ ಎಂದು ಹೇಳಿದರು.

ನರೇಂದ್ರ ಮೋದಿಯವರು ಸೂಕ್ಷ್ಮ ಇದ್ದಾರೆ, ಪ್ರತಿಭಟನೆ ಬಳಿಕವಾದರೂ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಿ ಕರ್ನಾಟಕದ ಪಾಲಿನ ಹಣವನ್ನು ವಾಪಾಸ್ ಕೊಡಬಹುದು ಎಂಬ ಆಶಾಭಾವನೆ ಇದೆ. ಮುಂಬರುವ ಅಧಿವೇಶನದಲ್ಲಿ ಶ್ವೇತಪತ್ರ ಹೊರಡಿಸಲು ರಾಜ್ಯ ಸರ್ಕಾರವು ಚಿಂತನೆ ನಡೆಸಿದೆ ಎಂದರು.

Ramesh Babu

Journalist

Recent Posts

ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಹೊಸ ವೇದಿಕೆ ಒಂದೇ ಆವರಣದಲ್ಲಿ ಬಾಕ್ಸಿಂಗ್, ಕುಸ್ತಿ, ಜೂಡೋ, ಕಬ್ಬಡಿ, ಬ್ಯಾಡ್ಮಿಂಟನ್, ಸ್ಕೇಟಿಂಗ್ ಸೌಲಭ್ಯ

ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ಕ್ರೀಡಾ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉತ್ತಮ ತರಬೇತಿ ಹಾಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ನಗರದ ನ್ಯಾಷನಲ್ ಪ್ರೈಡ್…

2 hours ago

ಶಾಲೆ ಬಿಟ್ಟ ಮಕ್ಕಳ ಪತ್ತೆಗೆ ಅಭಿಯಾನ: ವಲಸೆ ಕಾರ್ಮಿಕರ ಮಕ್ಕಳನ್ನು ಶಾಲೆಗೆ ಕರೆತರಲು ಕ್ರಮ

  ಪ್ರತಿಯೊಂದು ಮಗುವಿಗೂ ಶಿಕ್ಷಣ ದೊರೆಯಬೇಕು ಎಂಬ ಸರ್ಕಾರದ ಆಶಯದ ನಡುವೆಯೂ ನಾನಾ ಕಾರಣಗಳಿಂದ ಶಾಲೆಯಿಂದ ಹೊರಗುಳಿದಿರುವ ಹಾಗೂ ಶಾಲೆಗೆ…

6 hours ago

ಪಾಕಿಸ್ತಾನಿ ಗ್ಯಾಂಗ್‌ ಜೊತೆ ಸಂಪರ್ಕ ಆರೋಪ: ದೊಡ್ಡಬಳ್ಳಾಪುರದಲ್ಲಿ ವ್ಯಕ್ತಿ ಬಂಧನ

ದೊಡ್ಡಬಳ್ಳಾಪುರ: ಪಾಕಿಸ್ತಾನಿ ಗ್ಯಾಂಗ್‌ಸ್ಟರ್‌ಗಳೊಂದಿಗೆ ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದ ಆರೋಪದ ಮೇರೆಗೆ ದೊಡ್ಡಬಳ್ಳಾಪುರ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ ನಗರದ…

1 day ago

ದೊಡ್ಡಬಳ್ಳಾಪುರದಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

ದೊಡ್ಡಬಳ್ಳಾಪುರ: ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬವನ್ನು ದೊಡ್ಡಬಳ್ಳಾಪುರ ತಾಲ್ಲೂಕಿನಾದ್ಯಂತ ಶುಕ್ರವಾರ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.…

2 days ago

ಘಾಟಿ ಕ್ಷೇತ್ರದಲ್ಲಿ ವರಮಹಾಲಕ್ಷ್ಮಿ ಸಂಭ್ರಮ; ಮಹಿಳೆಯರಿಗೆ ಬಳೆ, ಅರಶಿನ–ಕುಂಕುಮ ವಿತರಣೆ

ದೊಡ್ಡಬಳ್ಳಾಪುರ: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ವತಿಯಿಂದ…

2 days ago

ವರಮಹಾಲಕ್ಷ್ಮಿ ಹಬ್ಬ…..

ವರಮಹಾಲಕ್ಷ್ಮಿ ಹಬ್ಬ..... ಅವರವರ ನಂಬಿಕೆ, ಆಚರಣೆಗಳು ಅವರವರ ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯ. ಅದನ್ನು ಗೌರವಿಸುತ್ತಾ, ಅವರವರ ವಿವೇಚನೆಗೆ ಬಿಡುತ್ತಾ,....…

2 days ago