2023ರ ವಿಧಾನಸಭಾ ಚುನಾವಣೆಯಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್.ಮುನಿಯಪ್ಪ ಗೆಲುವು ಸಾಧಿಸಿ ನೂತನವಾಗಿ ಶಾಸಕರಾಗಿ ಆಯ್ಕೆ ಆಗಿರುವ ಹಿನ್ನೆಲೆ ಕಾರ್ಯಕರ್ತರು, ಮುಖಂಡರ ಸಂಭ್ರಮ ಮುಗಿಲು ಮುಟ್ಟಿತ್ತು.
ಇಂದು ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುನಸ್ಕಾರ ನೆರವೇರಿಸಿ ನಂತರ ಗೋಪುರದ ಬಳಿ ಕೆ.ಎಚ್.ಮುನಿಯಪ್ಪ ಹೆಸರಲ್ಲಿ 1001 ತೆಂಗಿನಕಾಯಿ ಹೊಡೆದು ಹರಕೆ ತೀರಿಸಿದ ತೂಬಗೆರೆ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು.
ದಲಿತ ಸಿಎಂ ಅಥವಾ ಡಿಸಿಎಂ ಬೇಡಿಕೆ
ರಾಜ್ಯದಲ್ಲಿ ಸುಮಾರು ಒಂದೂವರೆ ಕೋಟಿ ದಲಿತರಿದ್ದು, ಮುಂದುವರಿದ ಹಲವಾರು ಸಮುದಾಯಗಳು ಮತ್ತು ತೀರ ಕಡಿಮೆ ಜನಸಂಖ್ಯೆ ಹೊಂದಿರುವ ಸಮುದಾಯಗಳಿಗೂ ಮುಖ್ಯಮಂತ್ರಿ ಸ್ಥಾನ ಲಭಿಸಿದ್ದು, ರಾಜ್ಯದ ಜನಸಂಖ್ಯೆಯ ಶೇ.25ರಷ್ಟು ಇರುವ ದಲಿತ ಸಮುದಾಯಕ್ಕೆ ಈ ಬಾರಿ ಕಾಂಗ್ರೆಸ್ ಪಕ್ಷ ಕೆ.ಹೆಚ್.ಮುನಿಯಪ್ಪ ಅವರಿಗೆ ಸಿಎಂ ಅಥವಾ ಡಿಸಿಎಂ ಸ್ಥಾನವನ್ನು ನೀಡುವುದರ ಮೂಲಕ ಸಾಮಾಜಿಕ ನ್ಯಾಯ ಪಾಲಿಸಬೇಕು ಎಂದು ತೂಬಗೆರೆ ಬ್ಲಾಕ್ ಕಾಂಗ್ರೆಸ್ ಮುಖಂಡರು ಒತ್ತಾಯಿಸಿದರು.
ಸ್ವಾತಂತ್ರ್ಯ ಬಂದಾಗಿನಿಂದಲೂ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಯಾವುದೇ ಜನಪ್ರತಿನಿಧಿಗಳಿಗೂ ಸರ್ಕಾರದಲ್ಲಿ ಸಚಿವ ಸ್ಥಾನ ಸಿಕ್ಕಲ್ಲ. ಈ ಬಾರಿ ಕೆ.ಹೆಚ್.ಮುನಿಯಪ್ಪ ವಿಜಯ ಸಾಧಿಸಿರುವುದರಿಂದ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡಲಿದ್ದು, ಕ್ಷೇತ್ರಕ್ಕೆ ಮೊದಲ ಬಾರಿ ಸಚಿವ ಸ್ಥಾನ ಲಭಿಸುವ ಅವಕಾಶ ನಿಚ್ಚಳವಾಗಿದ್ದು, ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳು, ಅಭಿವೃದ್ಧಿ ಕಾರ್ಯಗಳು ದೊರೆಯುವ ನಿರೀಕ್ಷೆಯಲ್ಲಿದ್ದೇವೆ ಎಂದರು.
ಈ ವೇಳೆ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ, ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ರಂಗಪ್ಪ, ಕೆಪಿಸಿಸಿ ಸದಸ್ಯ ಎಸ್.ಆರ್.ಮುನಿರಾಜು,ಘಾಟಿ ಪಂಚಾಯ್ತಿ ಅಧ್ಯಕ್ಷೆ ಭಾರತೀಬಾಯಿ ಪ್ರಸಾದ್, ಮುಖಂಡರಾದ ಗೋಪಾಲನಾಯ್ಕ್, ಆರ್.ವಿ.ಮಹೇಶ್, ರಾಮಕೃಷ್ಣಪ್ಪ, ಅರವಿಂದ್, ಕೃಷ್ಣನಾಯ್ಕ್, ಪ್ರಸಾದ್, ಶ್ರೀಧರ್, ವಸಂತಕುಮಾರ್, ಘಾಟಿ ಪಂಚಾಯ್ತಿ ಸದಸ್ಯ ಮುನಿರಾಜು ಇತರರು ಇದ್ದರು.