ಕೆ.ಸಿ.ವ್ಯಾಲಿಯಿಂದ ಜಿಲ್ಲೆಯ ರೈತರ ಬದುಕು ಹಸನು- ಕಾಂಗ್ರೆಸ್‌ ಮುಖಂಡ ಜನಪಹಳ್ಳಿ ನವೀನ್‌

ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್‌ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಯುವ ಘಟಕದ ಮಾಜಿ ಉಪಾಧ್ಯಕ್ಷ ಜನಪನಹಳ್ಳಿ ನವೀನ್‌ ಕುಮಾರ್ ವಾಗ್ದಾಳಿ ನಡೆಸಿದರು.

ತಾಲ್ಲೂಕಿನ ಜನಪನಹಳ್ಳಿಯ ಕಾಂಗ್ರೆಸ್ ಮುಖಂಡರೊಂದಿಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ದಡ್ಡರಲ್ಲ ತಾವು ಹೇಳಿದ ಮಾತನ್ನೂ ಕೇಳಿದ್ದಾರೆ. ಕೆ.ಆರ್‌.ರಮೇಶ್‌ ಕುಮಾರ್‌ ಏಕೆ ಈ ಯೋಜನೆ ಜಾರಿ ಮಾಡಿಸಿದರು ಎಂಬುದನ್ನೂ ನೋಡಿದ್ದಾರೆ. ಕೆ.ಸಿ.ವ್ಯಾಲಿ ಬರುವುದಕ್ಕೂ ಮುನ್ನ ಹಾಗೂ ಈಗ ಏನೆಲ್ಲಾ ಬದಲಾವಣೆ ಆಗಿದೆ ಎಂಬುದೂ ಗೊತ್ತಿದೆ ಎಂದರು‌.

ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಮುಖಂಡರಾದ ಶೇಷಾಪುರ ಗೋಪಾಲ್‌, ಕುಡುವನಹಳ್ಳಿ ಶ್ರೀನಿವಾಸ್‌ ಇತರೆ ಮುಖಂಡರು ವಾಸ್ತವ ಹರಿಯದೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಕೆ.ಸಿ.ವ್ಯಾಲಿ ಬಂದ ಮೇಲೆ ಕೇವಲ 200 ರಿಂದ 300 ಅಡಿಗೆ ನೀರು ಸಿಗುತ್ತಿದೆ. ಕೆರೆ ಕಟ್ಟೆಗಳು ತುಂಬುಕೊಂಡಿವೆ. ತರಕಾರಿ ಯಥೇಚ್ಚವಾಗಿ ಬೆಳೆಯುತ್ತಿದ್ದಾರೆ. ಹೈನುಗಾರಿಕೆ ಸುಧಾರಿಸಿದೆ. ತೆಂಗು ಸರಿಗಳನ್ನು ನಾಟಿ ಮಾಡಲಾಗಿದೆ. ಒಣಗುತ್ತಿದ್ದ ಮರಗಳು ಚಿಗುರಿವೆ. ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರದವರು ರಾಜ್ಯಕ್ಕೆ ಪತ್ರ ಬರೆದು ಉಳಿದೆಡೆಯೂ ಈ ಯೋಜನೆ ಜಾರಿಗೆ ತರುವುದಾಗಿ ಹೇಳಿದ್ದಾರೆ. ಕೆಜಿಎಫ್‌ಗೆ ಭೇಟಿ ನೀಡಿದ್ದ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಕೂಡ ಯೋಜನೆ ಬಗ್ಗೆ ಸಕಾರಾತ್ಮಕ ವರದಿ ನೀಡಿದೆ. ಆದರೆ, ವಿರೋಧ ಪಕ್ಷದವರು ಮಾತ್ರ ಯೋಜನೆಯನ್ನು ಅವೈಜ್ಞಾನಿಕ ಎಂದು ಹೇಳುತಾ ಜಿಲ್ಲೆಯ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಹರಿಹಾಯ್ದರು.

ಮಾಜಿ ಸಚಿವ ಕೆ.ಆರ್.ರಮೇಶ್‌ ಕುಮಾರ್‌ ಕೆ.ಸಿ.ವ್ಯಾಲಿ ಕಾಲುವೆ ವೀಕ್ಷಣೆ ಮಾಡಿ,‌ ಅಧಿಕಾರಿಗಳೊಂದಿಗೆ‌ ಮಾತನಾಡಿ ಸರ್ವೆಗೆ ಕ್ರಮವಹಿಸಿದ್ದಾರೆ. ಇಷ್ಟು ದಿನ ಸುಮ್ಮನಿದ್ದ ಜಿ.ಕೆ.ವೆಂಕಟಶಿವಾರೆಡ್ಡಿ ಈಗ ಎಚ್ಚರವಾಗಿ ಕಾಲುವೆ ವೀಕ್ಷಣೆ ಮಾಡಿ ಟೀಕಿಸಿದ್ದಾರೆ. ಅವರ ಜೊತೆಗಿದ್ದ ಕೆಲವರಂತೂ ರಮೇಶ್‌ ಕುಮಾರ್‌ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದಾರೆ. ಇದನ್ನು ಖಂಡಿಸುತ್ತೇವೆ ಎಂದರು.

ಯೋಜನೆ ಜಾರಿ ಆಗುವಾಗ ರಮೇಶ್‌ ಕುಮಾರ್‌ ಜೊತೆಗಿದ್ದ ಶೇಷಾಪುರ ಗೋಪಾಲ್‌ ಆಗ ಏಕೆ ಸುಮ್ಮನಿದ್ದರು? ಈಗ ಏಕೆ ವಿರುದ್ಧವಾಗಿ ಮಾತನಾಡುತ್ತಿದ್ದಾರೆ? ರಮೇಶ್ ಕುಮಾರ್, ಅವರ ಪುತ್ರ, ಕುಟುಂಬದ ಬಗ್ಗೆ ಮಾತನಾಡದಿದ್ದರೆ ಅವರಿಗೆ ನಿದ್ದೆ ಬರುವುದಿಲ್ಲವೇ? ಸಾಕ್ಷಿ ಇಲ್ಲದೆ ಏನೇನೋ ಹೇಳಿತ್ತಿದ್ದಾರೆ. ವಿಚಾರ ತಿಳಿದು ಮಾತನಾಡಿಬೇಕು ಎಂದು ಹೇಳಿದರು.

ಹಿಂದೆ 400 ಕಿ.ಮೀ ದೂರ ಇರುವ ತಮಿಳುನಾಡಿಗೆ ನೀರು ವ್ಯರ್ಥವಾಗಿ ಹರಿದು ಹೋಗುತ್ತಿತ್ತು. ಆಗ ಅಲ್ಲಿನ ರೈತರು ಮೋಟಾರ್ ಇಟ್ಟು ನೀರು ತೆಗೆದುಕೊಂಡು ತರಕಾರಿ ಬೆಳೆದು ಬೆಂಗಳೂರಿಗೆ ಬಂದು ಮಾರಾಟ ಮಾಡುತ್ತಿದ್ದರು. ಆಗ ಯಾವುದೇ ಸಮಸ್ಯೆ ಇರಲಿಲ್ಲವೇ ಎಂದು ಪ್ರಶ್ನಿಸಿದರು

ಶೇಷಾಪುರ ಗೋಪಾಲ ಹಾಗೂ ಕುಡುವನಹಳ್ಳಿ ಶ್ರೀನಿವಾಸ್ ತಮ್ಮ ವೀರಾವೇಶ ಬಿಟ್ಟು ಬಿಡಬೇಕು . ರೈತರ ಬಗ್ಗೆ ಕಾಳಜಿ ಇದ್ದರೆ ಅವರ ಬಗ್ಗೆ ಗಮನ ಹರಿಸಲಿ ಎಂದರು.

ಕುಡುವನಹಳ್ಳಿ ಶ್ರೀನಿವಾಸ್ ಈ ಹಿಂದೆ ರಮೇಶ್ ‌ಕುಮಾರ್ ಜೊತೆ‌ ಇದ್ದಾಗ ಯಾವ ಟೆಂಡರ್ ಪಡೆದಿದ್ದರು ಎಂಬುದು ಗೊತ್ತಿದೆ. ರಮೇಶ್ ಕುಮಾರ್ ಹೆಸರು ಹಿಡಿದು ಮಾತನಾಡುವ ನೈತಿಕತೆ ಅವರಿಗೆ ಇದೆಯೇ? ಮಾತು ಹಿಡಿತದಲ್ಲಿ ಇರಲಿ ‌ಎಂದು ಎಚ್ಚರಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಸದಸ್ಯ ಎಂ.ವಿ ಶ್ರೀನಿವಾಸ್, ನಾಯಕರಹಳ್ಳಿ ಗ್ರಾ.ಪಂ ಸದಸ್ಯ ಪ್ರಭಾಕರ್, ಹೋಳೂರು ಗ್ರಾಪಂ ಸದಸ್ಯರಾದ ಎಚ್.ಬಿ ನಾರಾಯಣಸ್ವಾಮಿ, ವಾಣಿ.ಶ್ರೀನಿವಾಸ್, ವಾನರಾಶಿ ಸದಸ್ಯ ಶಿಲ್ಪ ವೆಂಕಟೇಶ್, ಮಾಜಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ್ ಮುಖಂಡರಾದ ಚಲಪತಿ, ಸುರೇಶ್, ಗೋಪಾಲಕೃಷ್ಣ, ಕೃಷ್ಣೇಗೌಡ, ಶ್ರೀರಾಮ್, ಗೋಪಾಲ್ ನಾರಾಯಣಸ್ವಾಮಿ, ವೆಂಕಟೇಶ್ ಇದ್ದರು.

Leave a Reply

Your email address will not be published. Required fields are marked *

error: Content is protected !!