ಕೋಲಾರ: ಅವಳಿ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕೆ.ಸಿ ವ್ಯಾಲಿ ಯೋಜನೆಯಡಿ ಹರಿಸುತ್ತಿರುವ ನೀರನ್ನು ಮೂರನೇ ಹಂತದಲ್ಲಿ ಶುದ್ಧೀಕರಿಸಬೇಕು ನೀರು ಹರಿಯುವ ಕಾಲುವೆಗಳನ್ನು ಕೂಡಲೇ ದುರಸ್ತಿಗೊಳಿಸುವಂತೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿದ ಅವರು ಈ ಭಾಗದಲ್ಲಿ ಯಾವುದೇ ನದಿ ನಾಲೆಗಳು ಇಲ್ಲದೆ, ಶಾಶ್ವತವಾದ ನೀರಾವರಿ ಯೋಜನೆಗಳಿಲ್ಲದೇ ವಂಚಿತವಾದ ಕಾರಣ ಈ ಭಾಗದ ರೈತರು ಕುಡಿಯುವ ನೀರು ಮತ್ತು ಕೃಷಿ ಬಳಕೆಗಾಗಿ ಸುಮಾರು 1500 ರಿಂದ 2000 ಅಡಿ ಆಳದ ಕೊಳವೆಬಾವಿ ಕೊರೆಸುವ ಅನಿವಾರ್ಯತೆಗೆ ಸಿಲುಕಿದ್ದರು ಇದರಿಂದಲೇ ಅಂತರ್ಜಲ ಮಟ್ಟವು ಪಾತಾಳಕ್ಕೆ ಕುಸಿದಿತ್ತು ಕೆಸಿ ವ್ಯಾಲಿ ಯೋಜನೆಯಿಂದ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಯೋಜನೆಯನ್ನು ರೂಪಿಸಲಾಗಿತ್ತು ಈ ಯೋಜನೆ ಕುಡಿಯಲು ಹಾಗೂ ಕೃಷಿ ಬೆಳೆಗಳನ್ನು ವಿಷಪೂರಿತಗೊಳಿಸುವುದರ ಜತೆಗೆ ಜನರು ಮತ್ತು ಜಾನುವಾರುಗಳನ್ನು ಮಾರಣಾಂತಿಕ ಕಾಯಿಲೆಗಳಿಗೆ ದೂಡುತ್ತಿದೆ ಕೂಡಲೇ ಮೂರನೇ ಹಂತದ ಶುದ್ದೀಕರಣ ಮಾಡಬೇಕು ಎಂದು ಒತ್ತಾಯಿಸಿದರು.
ಬರಪೀಡಿತ ಜಿಲ್ಲೆಗಳಿಗೆ ಶಾಶ್ವತವಾದ ಶುದ್ಧ ಕುಡಿಯುವ ನೀರು ಒದಗಿಸುವ ಅವೈಜ್ಞಾನಿಕ ಎತ್ತಿನಹೊಳೆ ಯೋಜನೆ ಇಲ್ಲಿಯವರೆಗೂ ನೀಡುವಲ್ಲಿ ವಿಫಲವಾಗಿದೆ.ಕೆಸಿ ವ್ಯಾಲಿ ಬೆಂಗಳೂರು ನಗರದಲ್ಲಿ ಎರಡು ಹಂತದಲ್ಲಿ ಮಾತ್ರ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೆರೆಗಳಿಗೆ ಹರಿಸಿ ಅಂತರ್ಜಲವನ್ನು ಪುನರುಜ್ಜೀವನಗೊಳಿಸುವ ಯೋಜನೆಯಾದರು ಇದು ರೈತರಿಗೆ ಜಾನುವಾರುಗಳಿಗೆ ಸಂಕಟ ಉಂಟುಮಾಡಿದೆ. ಕೆಲವು ಕಡೆಯಲ್ಲಿ ಕುಡಿಯುವ ನೀರನ್ನು ಒದಗಿಸಲು ಕೊರೆಸಿರುವ ಕೊಳವೆಬಾವಿಗಳು ಹೊಂದಿರುವ ಕೆರೆಗಳನ್ನು ಎರಡು ಹಂತದಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ತುಂಬಿಸಿ ಅಂತರ್ಜಲವನ್ನು ಕಲುಷಿತಗೊಳಿಸುವುದಲ್ಲದೆ, ಮೀನುಗಳು ಮತ್ತು ಇತರ ಜಲಚರಗಳ ಸಾವಿಗೆ ಕಾರಣವಾಗಿದೆ. ಕೆರೆಗಳ ಜೀವವೈವಿಧ್ಯ ನಾಶಕ್ಕೆ ಕಾರಣವಾಗಿವೆ ಕೂಡಲೇ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಕೆಸಿ ವ್ಯಾಲಿ ಹರಿಯುವ ಕಾಲುವೆಗಳಲ್ಲಿ ಅನವಶ್ಯಕ ಗಿಡಗಂಟಿಗಳಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ ಇದರ ಜೊತೆಗೆ ಹಸಿರು ಸೊಳ್ಳೆಗಳ ಉತ್ಪತ್ತಿಯಿಂದ ತೋಟಗಾರಿಕಾ ಬೆಳೆಗಳಿಗೆ ತೊಂದರೆಯಾಗಿದ್ದು ಕೂಡಲೇ ಕಾಲುವೆಗಳನ್ನು ದುರಸ್ತಿ ಮಾಡಬೇಕು ಬೆಳೆಗಳಿಗೆ ರೋಗದ ಬಗ್ಗೆ ತಜ್ಞರ ಸಮಿತಿಯಿಂದ ತನಿಖೆ ಮಾಡಿ ಗುಣಮಟ್ಟದ ಔಷಧಗಳನ್ನು ಸರಕಾರ ಮತ್ತು ಜಿಲ್ಲಾಡಳಿತ ಮೂಲಕ ವಿತರಿಸುವ ಕೆಲಸವನ್ನು ಮಾಡಿ ರೈತರ ಬೆಳೆಗಳನ್ನು ಮತ್ತು ಬಡ ರೈತರನ್ನು ರಕ್ಷಣೆ ಮಾಡಬೇಕು ಎಂದು ನಾರಾಯಣಗೌಡರು ಹೇಳಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮುಖಂಡರಾದ ಫಾರೂಕ್ ಪಾಷ, ರತ್ನಮ್ಮ, ಸುನಿತಮ್ಮ, ಗೌರಮ್ಮ, ಶಿವಾರೆಡ್ಡಿ, ಮಂಗಸಂದ್ರ ತಿಮ್ಮಣ್ಣ ಮುಂತಾದವರು ಇದ್ದರು.