ಕೆಳಗಿನನಾಯಕರಾಂಡಹಳ್ಳಿಗೆ ದೌಡಾಯಿಸಿದ ಚುನಾವಣಾಧಿಕಾರಿ ತೇಜಸ್ ಕುಮಾರ್: ಮತದಾನ ಬಹಿಷ್ಕಾರ ಹಿಂಪಡೆಯುವಂತೆ ಮನವಿ

ದೊಡ್ಡಬಳ್ಳಾಪುರ: ಅರಣ್ಯ ಇಲಾಖೆ ಕಿರುಕುಳ ವಿರೋಧಿಸಿ 2023ರ ವಿಧಾನಸಭಾ ಚುನಾವಣೆ ಬಹಿಷ್ಕರಿಸಿದ್ದ ತಾಲೂಕಿನ ತೂಬಗೆರೆ ಹೋಬಳಿ ಕೆಳಗಿನನಾಯಕರಾಂಡಹಳ್ಳಿ ಗ್ರಾಮಸ್ಥರು, ಅಧಿಕಾರಿಗಳ‌ ಸಂಧಾನದ ಬಳಿಕ ಮತದಾನ ಬಹಿಷ್ಕಾರ ಹಿಂಪಡೆದಿದ್ದಾರೆ.

ಭಾನುವಾರ ರಾತ್ರಿ ಗ್ರಾಮಕ್ಕೆ ದಿಢೀರ್ ಭೇಟಿ ನೀಡಿದ ಉಪವಿಭಾಗಾಧಿಕಾರಿಯೂ ಆಗಿರುವ ಚುನಾವಣಾಧಿಕಾರಿ ಎನ್.ತೇಜಸ್ ಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಗ್ರಾಮಸ್ಥರ ಅಹವಾಲು ಆಲಿಸಿತು.

ಗ್ರಾಮದ ಸರ್ವೇ ನಂ.8 ರಲ್ಲಿ‌ ಅರಣ್ಯ ಇಲಾಖೆ ಹೊರತುಪಡಿಸಿ ಜಾಗದಲ್ಲಿ 50ಕ್ಕೂ ಹೆಚ್ಚು ಮಂದಿ ಉಳುಮೆ‌ ಮಾಡಿಕೊಂಡಿದ್ದಾರೆ. ಕಂದಾಯ ಇಲಾಖೆ ನೀಡಿರುವ ಸಾಗುವಳಿ ಚೀಟಿಯೂ ಇದೆ.‌ ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ಭೂಮಿ ನೀಡಲು ಸಾಧ್ಯವಾಗದಿದ್ದರೆ ಗ್ರಾಮದ ಎಲ್ಲರಿಗೂ ದಯಾಮರಣಕ್ಕೆ ಅವಕಾಶ ನೀಡಿ ಎಂದು ಮುಖಂಡರಾದ ಕೃಷ್ಣನಾಯಕ, ಎನ್.ಪ್ರಸಾದ್, ರಾಜಾರಾಮನಾಯಕ, ಎಸ್.ಎಸ್.ಘಾಟಿ‌‌ ಗ್ರಾ.ಪಂ. ಅಧ್ಯಕ್ಷ ಭಾರತಿಬಾಯಿ ಅಲವತ್ತುಕೊಂಡರು.

ಆಗ ಉಪವಿಭಾಗಾಧಿಕಾರಿ ತೇಜಸ್ ಕುಮಾರ್ ಅವರು ರೈತರ‌ ದೂರಿಗೆ ಸಂಬಂಧಿಸಿ ಅರಣ್ಯ ಇಲಾಖೆ ಅಧಿಕಾರಿಗಳ ಪ್ರತಿಕ್ರಿಯೆ ಪಡೆದರು.

ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿರುವ ಪ್ರಕರಣ ಜೂನ್ ತಿಂಗಳಲ್ಲಿ ವಿಚಾರಣೆಗೆ ಬರಲಿದೆ. ಚುನಾವಣೆ ಮುಗಿದ ಬಳಿಕ ಕಂದಾಯ ಹಾಗೂ ಅರಣ್ಯ ಇಲಾಖೆ ನೇತೃತ್ವದಲ್ಲಿ ಜಂಟಿ‌ಸರ್ವೇ ನಡೆಸಬೇಕು. ಅಲ್ಲಿಯವರೆಗೆ ಯಾವ ಅಧಿಕಾರಿಗಳು ಕೂಡ ರೈತರಿಗೆ ತೊಂದರೆ ನೀಡಬಾರದು. ವಿವಾದವನ್ನು ಕಾನೂನು ಚೌಕಟ್ಟಿನಲ್ಲಿ ಪರಿಶೀಲಿಸಿ ಇತ್ಯರ್ಥ ಮಾಡಲಾಗುವುದು ಎಂದು ಭರವಸೆ ನೀಡಿದರು.

ಉಪವಿಭಾಗಾಧಿಕಾರಿಗಳ ಭರವಸೆಗೆ ಒಪ್ಪಿ ಗ್ರಾಮಸ್ಥರು ಚುನಾವಣಾ ಬಹಿಷ್ಕಾರ ಹಿಂಪಡೆದರು.

ಗ್ರಾಮದ ಮುಖಂಡ ಎನ್.ಪ್ರಸಾದ್ ಮಾತನಾಡಿ, ಉಪವಿಭಾಗಾಧಿಕಾರಿಗಳು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಅವರ ಮಾತಿಗೆ ಒಪ್ಪಿ ಬಹಿಷ್ಕಾರ ಹಿಂಪಡೆದಿದ್ದೇವೆ. ಒಂದು ವೇಳೆ ಭರವಸೆ ಈಡೇರಿಸದಿದ್ದರೆ ಉಗ್ರ ಹೋರಾಟ‌ ನಡೆಸಲಾಗುವುದು. ಜೊತೆಗೆ ಮುಂದಿನ ಲೋಕಸಭೆ‌ ವೇಳೆ ಮತ್ತೆ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು‌ ಹೇಳಿದರು.

ಸಭೆಯಲ್ಲಿ ದೊಡ್ಡಬಳ್ಳಾಪುರ ತಹಶೀಲ್ದಾರ್ ಮೋಹನಕುಮಾರಿ, ದೇವನಹಳ್ಳಿ ತಹಶೀಲ್ದಾರ್ ಶಿವರಾಜ್, ವಲಯ ಅರಣ್ಯಾಧಿಕಾರಿ ಮುನಿರಾಜು, ಎಎಸ್ಐ ಕೃಷ್ಣಪ್ಪ, ಕಂದಾಯ ನಿರೀಕ್ಷಕಿ‌ ಲಕ್ಷ್ಮಮ್ಮ, ಗ್ರಾಮ ಲೆಕ್ಕಾಧಿಕಾರಿ ರಾಜಶೇಖರ್ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *