ಕೆರೆಯಲ್ಲಿ ತಾವರೆ ಹೂ ಕೀಳಲು ಹೋಗಿ ತಂದೆ-ಮಗ ಸಾವು: ಹುಲಿಕುಡಿ ಬೆಟ್ಟದ ತಪ್ಪಲಿನ ಕೆರೆಯಲ್ಲಿ ಘಟನೆ

ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆ ಹಬ್ಬಕ್ಕೆ ಈಗಲೇ ಕೆರೆಯಲ್ಲಿ ತಾವರೆ ಹೂವು ಕೀಳಲು ಹೋಗಿ ತಂದೆ- ಮಗ ಧಾರುಣ ಸಾವನ್ನಪ್ಪಿರುವ ಘಟನೆ ಇಂದು ಸಂಜೆ ತಾಲೂಕಿನ ಹುಲಿಕುಡಿ ಬೆಟ್ಟದ ತಪ್ಪಲಿನ ಕೆರೆಯಲ್ಲಿ ನಡೆದಿದೆ.

ದೊಡ್ಡಬಳ್ಳಾಪುರದ ಶಾಂತಿನಗರದಲ್ಲಿರುವ ಮುತ್ಯಾಲಮ್ಮ ದೇವಾಲಯ ಸಮೀಪ ವಾಸವಿದ್ದ ಪುಟ್ಟರಾಜು(45), ಕೇಶವ( 16) ಮೃತಪಟ್ಟ ದುರ್ದೈವಿಗಳು.

ನಗರದ ಜ್ಞಾನಗಂಗಾ ಶಾಲೆಯಲ್ಲಿ ಎಸ್ಎಸ್ಎಲ್ ಸಿ ಓದುತ್ತಿದ್ದ ಬಾಲಕ‌ ಕೇಶವ ಬುಧವಾರ ತಂದೆಯೊಂದಿಗೆ ಹುಲುಕುಡಿ ಬೆಟ್ಟದ ತಪ್ಪಲಿನ ಕೆರೆಯಲ್ಲಿ ತಾವರೆ ಹೂವು ಕೀಳಲು ಹೋಗಿದ್ದರು.

ಬಾಲಕ ಕೇಶವ ತಾವರೆ ಹೂವು ಕೀಳಲು ನೀರಿಗಿಳಿದಾಗ ಕಾಲು ಜಾರಿ ಹಾಳಕ್ಕೆ ಹೋಗಿ ಮುಳುಗುತ್ತಿದ್ದ. ಈ ವೇಳೆ‌ ಮಗನ ರಕ್ಷಣೆಗೆ ಧಾವಿಸಿದ ತಂದೆ ಪುಟ್ಟರಾಜು ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮೃತ ಪುಟ್ಟರಾಜು ಅವರು ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ‌ ಮಾಡುತ್ತಿದ್ದರು. ಮೂಲತಃ ಸಕ್ಕರೆ ಗೊಲ್ಲಹಳ್ಳಿ ಸಮೀಪ ತಂಬೇನಹಳ್ಳಿ ಗ್ರಾಮದ ನಿವಾಸಿಯಾದ ಪುಟ್ಟರಾಜು ಅವರು ದೊಡ್ಡಬಳ್ಳಾಪುರದಲ್ಲೇ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪುಟ್ಟರಾಜು ಅವರಿಗೆ ಇಬ್ಬರು ಮಕ್ಕಳಿದ್ದರು. ಪತ್ನಿ ಜಗದಾಂಬ ಅವರು ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದರು.

ತಂದೆ-ಮಗನ‌ ಸಾವಿನ‌ ಸುದ್ದಿ ತಿಳಿಯುತ್ತಿದ್ದಂತೆ ಸಂಬಂಧಿಕರ ಆಕ್ರಂಧನ‌ ಮುಗಿಲು‌ಮುಟ್ಟಿದೆ. ಸ್ಥಳಕ್ಕೆ ದೊಡ್ಡಬೆಳವಂಗಲ ಇನ್ಸ್ ಪೆಕ್ಟರ್ ಹರೀಶ್ ದೌಡಾಯಿಸಿ ಪರಿಶೀಲನೆ ನಡೆಸಿದರು.

ಕತ್ತಲಾದ ಆದ ಕಾರಣ ಮೃತದೇಹಗಳನ್ನು ನಾಳೆ ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ಹೊರತೆಗೆಯಲಿದ್ದಾರೆ.

Leave a Reply

Your email address will not be published. Required fields are marked *