ರಾಮೇಶ್ವರಂ ಕೆಫೆ ಬಳಿ ಬಾಂಬ್ ಸ್ಫೋಟವನ್ನ ಖಂಡಿಸುತ್ತೇನೆ. ಬಾಂಬ್ ಸ್ಫೋಟದಂತಹ ಪ್ರಕರಣಗಳು ಸಣ್ಣ ಘಟನೆಗಳಾಗುವುದಿಲ್ಲ. ಜನರ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರ ಇದನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಹೇಳಿದರು.
ಈ ಬಾಂಬ್ ಸ್ಫೋಟ ಪ್ರಕರಣವನ್ನ ಮುಂದಿಟ್ಟುಕೊಂಡು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದವರು ರಾಜಕೀಯ ಕೆಸರೆರಚಾಟದಲ್ಲಿ ಮಗ್ನರಾಗಿರುವುದು ಸೂಕ್ತವಲ್ಲ. ಈ ರೀತಿಯ ಪ್ರಕರಣಗಳಲ್ಲಿ ಯಾರೂ ಸಹ ರಾಜಕೀಯ ಮಾಡದೇ ರಾಜ್ಯದ ಜನರ ಭದ್ರತೆಯ ಹಿತದೃಷ್ಟಿಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಲೇಬೇಕು ಎಂದು ತಿಳಿಸಿದರು.
ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೇ ಮಾಡಬೇಕು. ಅಗತ್ಯ ಬಿದ್ದರೆ ಎನ್.ಐ.ಗೆ ವಹಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಬೇಕು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಬೆಂಗಳೂರು ನಗರ ದೇಶದಲ್ಲಿ ಸುರಕ್ಷಿತವಾದ ತಾಣ ಇಂತಹ ತಾಣದಲ್ಲಿ ಈ ರೀತಿಯ ಘಟನೆಗಳು ಮತ್ತೆ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಪಾಕ್ ಪರ ಘೋಷಣೆ ಕೂಗಿರುವುದನ್ನ ನಾನು ತೀವ್ರವಾಗಿ ಖಂಡಿಸುತ್ತೇನೆ, ಅದು ದೇಶ ವಿರೋಧಿ ಚಟುವಟಿಕೆ, ದೇಶದ ಅನ್ನ, ನೀರು, ಆಶ್ರಯ ಪಡೆದು ಈ ರೀತಿ ದ್ರೋಹ ಬಗೆಯುವವರನ್ನ ಕ್ಷಮಿಸಬಾರದು, ಘೋಷಣೆ ಕೂಗಿರುವವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.