ಕೆಎಸ್ಆರ್ ಟಿಸಿ ಹೊಸ ಬಸ್ ನಿಲ್ದಾಣದಲ್ಲಿ ಖಾಸಗಿ ಪೆಟ್ರೋಲ್ ಮತ್ತು ಡೀಸೆಲ್ ಬಂಕ್ ತೆರೆಯುವುದಕ್ಕೆ ವಿರೋಧ

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಮೀಪದ ಕೆಎಸ್ಆರ್ ಟಿಸಿ ಹೊಸ ಬಸ್ ನಿಲ್ದಾಣದಲ್ಲಿ ಖಾಸಗಿ ಪೆಟ್ರೋಲ್ ಮತ್ತು ಡೀಸೆಲ್ ಬಂಕ್ ತೆರೆಯಲು ಅವಕಾಶ ನೀಡಬಾರದು. ಈ ಬಸ್ ನಿಲ್ದಾಣದಿಂದ ನಗರ ಸಾರಿಗೆ ಸೇರಿದಂತೆ ಗ್ರಾಮೀಣ ಪ್ರದೇಶಗಳ ಕಡೆಗೆ ಸಂಚರಿಸುವ ಬಸ್ ಗಳ ಸೇವೆಯನ್ನು ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣದ ವತಿಯಿಂದ ಗುರುವಾರ ಕೆಎಸ್ ಆರ್ ಟಿಸಿ ಬಸ್ ಡಿಪೋ ವ್ಯವಸ್ಥಾಪಕ ಎಸ್.ಆರ್ ಸಂತೋಷ್ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಬಗ್ಗೆ ಮಾಹಿತಿ ನೀಡಿದ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್, ವೇಗವಾಗಿ ಬೆಳೆಯುತ್ತಿರುವ ನಗರಕ್ಕೆ ನಗರ ಸಾರಿಗೆ ಬಸ್ ಸೇವೆಯ ಅಗತ್ಯ ಇದೆ. ನಗರದ ಮಧ್ಯಭಾಗದಲ್ಲಿ ಈಗ ಇರುವ ಕೆಎಸ್ಆರ್ ಟಿಸಿ ಬಸ್ ನಿಲ್ದಾಣಕ್ಕೆ ಸಾರ್ವಜನಿಕರು ಹೋಗಿ ಬರಲು ಸಂಚಾರ ದಟ್ಟಣೆ ಮಿತಿ ಮೀರಿ ಹೋಗಿದೆ. ಅತ್ಯಂತ ಕಿರಿದಾದ ರಸ್ತೆಗಳು ಇರುವ ಕಾರಣದಿಂದಾಗಿ ಬಸ್ ಗಳು ಸಹ ಸಂಚರಿಸಲು ಕಷ್ಟವಾಗಿದೆ. ಈ ಎಲ್ಲಾ ಕಾರಣದಿಂದ ನಗರದ ಹೊರಭಾಗದಲ್ಲಿ ಹಿರಿಯ ರಾಜಕಾರಣಿ ಆರ್.ಎಲ್.ಜಾಲಪ್ಪ ಅವರು ಹೊಸ ಬಸ್ ನಿಲ್ದಾಣವನ್ನು ಸ್ಥಾಪನೆ ಮಾಡಿದ್ದರು. ಇದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ಸಾರ್ವಜನಿಕರ ಸೇವೆಗೆ ಅನುಕೂಲ ಮಾಡಿಕೊಡಬೇಕಿದೆ. ಬಸ್ ನಿಲ್ದಾಣ ಖಾಸಗಿ ವ್ಯಕ್ತಿಗಳ ಸ್ವತ್ತಾಗಲು ಅವಕಾಶ ನೀಡಬಾರದು ಎಂದರು.

 

ಈ ಬಸ್ ನಿಲ್ದಾಣದಿಂದ ಗ್ರಾಮಾಂತರ ಪ್ರದೇಶದ ರೈತರು, ವಿದ್ಯಾರ್ಥಿಗಳು ಈ ಭಾಗದಲ್ಲಿ ಕಾಲೇಜು, ಸರ್ಕಾರಿ ಕಚೇರಿಗಳು, ಪೊಲೀಸ್ ಠಾಣೆ, ಎಪಿಎಂಸಿ, ಕ್ರೀಡಾಂಗಣ, ಅಂಚೆ ಕಚೇರಿ, ನಗರಸಭೆ ಕೋರ್ಟ್ ಸೇರಿದಂತೆ ದೈನಂದಿನ ಕೆಲಸಕ್ಕೆ ಬಂದು ಹೋಗುವ ಎಲ್ಲಾ ಸಾರ್ವಜನಿಕರಿಗೆ  ಅನುಕೂಲವಾಗಲಿದೆ ಎಂದರು.

ಅದೇರೀತಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸದೆ ಬಸ್ ನಿಲ್ದಾಣವನ್ನಾಗಿಯೇ ಮುಂದುವರಿಸಬೇಕು. ಬೇರೆ ಉದ್ದೇಶಕ್ಕೆ ಅನುವು ಮಾಡಿಕೊಟ್ಟಿದ್ದೆ ಆದಲ್ಲಿ ದೊಡ್ಡಬಳ್ಳಾಪುರದ ನಾಗರೀಕರ ಪರವಾಗಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ಚಿಂತಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಇದಕ್ಕೆ ಆಸ್ಪದ ನೀಡದೆ ಬಸ್‌ ನಿಲ್ದಾಣವನ್ನು ಹೈಟೆಕ್ ಬಸ್ ನಿಲ್ದಾಣವಾಗಿ ಮಾಡಿ ಉಳಿಸಿಕೊಂಡು, ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಘಟಕದ ವ್ಯವಸ್ಥಾಪಕ ಸಂತೋಷ್, ಇಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬಂಕ್ ಸ್ಥಾಪನೆಗೆ ಇರುವ ವಿರೋಧವನ್ನು ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯ ಕಾರ್ಯರ್ದರ್ಶಿ ರಮೇಶ್ ಇದ್ದರು.

Leave a Reply

Your email address will not be published. Required fields are marked *