ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿಕ್ಕಬಳ್ಳಾಪುರ ವಿಭಾಗದ ಚಾಲಕರು ನಿಗಮದ ವಾಹನಗಳ ಚಾಲನಾ ಅವಧಿಯಲ್ಲಿ ಇಂಧನ ಉಳಿಕೆಯಲ್ಲಿ, ಸಮಯ ಪರಿಪಾಲನೆ ಹಾಗೂ ಅಪಘಾತಗಳನ್ನು ತಡೆಗಟ್ಟುವಲ್ಲಿ ರಾಜ್ಯದ ಗಮನ ಸೆಳೆಯುವಂತಹ ಕೆಲಸವನ್ನು ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಚಾಲಕರನ್ನು ಶ್ಲಾಘಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿಕ್ಕಬಳ್ಳಾಪುರ ವಿಭಾಗ ಕಚೇರಿ ಹಾಗೂ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ “ಅಪಘಾತ ರಹಿತ ಚಾಲನೆ ಮಾಡಿದ 63 ಚಾಲಕರಿಗೆ ಬೆಳ್ಳಿ ಪದಕಗಳನ್ನು ವಿತರಿಸಿ, ಸನ್ಮಾನಿಸಿ ಅವರು ಮಾತನಾಡಿದರು.
ರಾಷ್ಟ್ರದಲ್ಲಿಯೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸೇವೆಗಳು ಹೆಚ್ಚು ವಿಶ್ವಾಸಾರ್ಹತೆ ಗಳಿಸಿವೆ. ಅದರಲ್ಲೂ ಚಿಕ್ಕಬಳ್ಳಾಪುರ ವಿಭಾಗದ ರಸ್ತೆ ಸಾರಿಗೆ ಸೇವೆಗಳು ಮಾದರಿಯಾಗಿವೆ. ವಿಭಾಗದ 63 ಚಾಲಕರು ಬೆಳ್ಳಿ ಪದಕ ಪಡೆದು ವಿಭಾಗಕ್ಕೆ, ರಾಜ್ಯಕ್ಕೆ ಒಳ್ಳೆಯ ಕೊಡುಗೆ ನೀಡಿದ್ದಿರಿ. ನೀವು ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದಲ್ಲಿ ಚಿನ್ನದ ಪದಕವನ್ನು ಗಳಿಸುವಂತಾಗಲಿ ಎಂದು ಶುಭ ಹಾರೈಸಿದರು.
ಚಾಲಕರು ಯಾವುದೇ ರೀತಿಯ ಅಪಘಾತ, ಅಪರಾಧ, ಸಾರ್ವಜನಿಕ ದೂರುಗಳ ಇತ್ಯಾಧಿಗಳಿಗೆ ಆಸ್ಪದ ನೀಡದೆ, ಉತ್ತಮ ಚಾಲಕರಾಗಿ ಸತತವಾಗಿ 05 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಹಾಗೂ ಸರಾಸರಿ ವಾರ್ಷಿಕ 240 ಕ್ಕಿಂತ ಹೆಚ್ಚಿನ ದಿನಗಳ ಹಾಜರಾತಿಯನ್ನು ಹೊಂದಿರುವ ಚಾಲಕರಿಗೆ ಬೆಳ್ಳಿ ಪದಕ ಪ್ರದಾನ ಮಾಡಲಾಗುತ್ತದೆ.
ಬೆಳ್ಳಿ ಪದಕ ವಿಜೇತರಿಗೆ ಪದಕದೊಂದಿಗೆ ರೂ.2000/-ಗಳ ನಗದು ಪುರಸ್ಕಾರ, ಪ್ರಶಸ್ತಿ ಪತ್ರ ವಿತರಿಸುವ ಜೊತೆಗೆ ಮುಂದಿನ ದಿನಗಳಲ್ಲಿ ಮಾಸಿಕವಾರು ಪ್ರೋತ್ಸಾಹ ಭತ್ಯೆ ರೂ.250/-ಗಳನ್ನು ನೀಡಲಾಗುತ್ತದೆ. ಇಂತಹ ಪ್ರಯೋಜನವನ್ನು ಇನ್ನೂ ಹೆಚ್ಚಿನ ಚಾಲಕರು ಗಳಿಸುವಂತಾಗಲಿ.
ನಮ್ಮ ಚಿಕ್ಕಬಳ್ಳಾಪುರ ವಿಭಾಗವು 6 ಘಟಕಗಳು, 8 ವಾಹನ ನಿಲ್ದಾಣಗಳು ಹಾಗೂ 9 ನಿಯಂತ್ರಣ ಬಿಂದುಗಳನ್ನು ಹೊಂದಿದ್ದು ಜನರಿಗೆ ಉತ್ತಮ ಸೇವೆ ಒದಗಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿಕ್ಕಬಳ್ಳಾಪುರ ವಿಭಾಗದ ನಿಯಂತ್ರಣಾಧಿಕಾರಿ ಹಿಮವರ್ಧನ ನಾಯ್ದು ಅವರು ಮಾತನಾಡಿ, ಜಿಲ್ಲೆಯಲ್ಲಿ ಚಿಂತಾಮಣಿ, ಬಾಗೇಪಲ್ಲಿ, ಗೌರಿಬಿದನೂರು, ದೊಡ್ಡಬಳ್ಳಾಪುರ, ಶಿಡ್ಲಘಟ್ಟ, ಘಟಕಗಳು ಒಳಗೊಂಡಂತೆ, ಗುಡಿಬಂಡೆ ಹಾಗೂ ಮಂಡಿಕಲ್‌ಗಳಲ್ಲಿ ಸುಸಜ್ಜಿತವಾದ ವಾಹನ ನಿಲ್ದಾಣಗಳನ್ನು ಹೊಂದಿರುತ್ತದೆ. ವಿಭಾಗದಲ್ಲಿ ಪ್ರಸ್ತುತ 523 ಅನುಸೂಚಿಗಳನ್ನು 566 ವಾಹನ ಬಲದೊಂದಿಗೆ, ಪ್ರತಿನಿತ್ಯ ಸರಾಸರಿ 1.96 ಲಕ್ಷ ಕಿ.ಮೀಗಳನ್ನು ಕಾರ್ಯಾಚರಣೆ ಮಾಡುತ್ತಿದ್ದು, ಸರಾಸರಿ ರೂ.89.70 ಲಕ್ಷ ಆದಾಯವನ್ನು ಗಳಿಸುತ್ತಿದೆ ಹಾಗೂ ಸರಾಸರಿ ಒಟ್ಟು 2.03 ಲಕ್ಷ ಪ್ರಯಾಣಿಕರು ಮತ್ತು ಸರಾಸರಿ 20 ಸಾವಿರ ವಿದ್ಯಾರ್ಥಿಗಳು ಪ್ರಯಾಣಿಸುತ್ತಿರುತ್ತಾರೆ.
ಶಕ್ತಿ ಯೋಜನೆಯಿಂದ ಪ್ರಸ್ತುತ ಪ್ರತಿನಿತ್ಯ ಸರಾಸರಿ ರೂ.34.69 ಲಕ್ಷ ಸಾರಿಗೆ ಆದಾಯವನ್ನು ಗಳಿಸಲಾಗುತ್ತಿದೆ ಹಾಗೂ ಪ್ರತಿನಿತ್ಯ ಸರಾಸರಿ ಒಟ್ಟು 1.00 ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣಿಸುತ್ತಿರುತ್ತಾರೆ. ರಾಷ್ಟ್ರೀಕೃತ ವಲಯದಲ್ಲಿರುವ ಎಲ್ಲಾ 797 ಗ್ರಾಮಗಳಿಗೆ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ರಾಷ್ಟ್ರೀಕೃತವಲ್ಲದ ವಲಯದಲ್ಲಿರುವ 1,242 ಗ್ರಾಮಗಳ ಪೈಕಿ 1,096 ಗ್ರಾಮಗಳಿಗೆ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದರು.
ವಿಭಾಗವು ಕಳೆದ ಮೂರು ವರ್ಷಗಳಲ್ಲಿ ಅಂದರೆ 2020-21 ರಲ್ಲಿ ಕೋವಿಡ್-19 ಮತ್ತು ಲಾಕ್ ಡೌನ್ ಕಾರಣಗಳಿಂದಾಗಿ ರೂ 13.77 ಕೋಟಿ ನಷ್ಟ ಹಾಗೂ 2021-22 ರಲ್ಲಿ ರೂ 3.02 ಕೋಟಿ ನಷ್ಟವಾಗಿದ್ದು ಹಾಗೂ 2022-23 ರಲ್ಲಿ 25.99 ಕೋಟಿ ಲಾಭವನ್ನು ಗಳಿಸಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿಕ್ಕಬಳ್ಳಾಪುರ ವಿಭಾಗದ ವತಿಯಿಂದ 2019ನೇ ಸಾಲಿನ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕರು ಸತತವಾಗಿ 05 ವರ್ಷಗಳ ಕಾಲ ಅಪಘಾತ ರಹಿತ ಚಾಲನೆ ಮಾಡಿದ ಒಟ್ಟು 63 ಅರ್ಹ ಚಾಲಕರಿಗೆ ಬೆಳ್ಳಿ ಪದಕಗಳ ಪ್ರದಾನ ಮಾಡಿ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿಕ್ಕಬಳ್ಳಾಪುರ ವಿಭಾಗದ ಡಿ.ಎಂ.ಓ ಮಂಜುನಾಥ ಕಲಗೇರಿ, ಉಗ್ರಾಣ ಅಧಿಕಾರಿ ವೆಂಕಟರಮಣ, ಸಹಾಯಕ ನಿಯಂತ್ರಣಾಧಿಕಾರಿ ಮಂಜುನಾಥ್, ಬೆಳ್ಳಿ ಪದಕ ಪುರಸ್ಕ್ರತ ಚಾಲಕರು ಮತ್ತು ಅವರ ಕುಟುಂಬ ವರ್ಗದವರು ಪಾಲ್ಗೊಂಡಿದ್ದರು.