ನಗರದ ಹೈಟೆಕ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿನ ಶೌಚಾಲಯದ ನೀರು ನೇರವಾಗಿ ಕುಡಿಯುವ ನೀರಿಗೆ ಬಳಸುವ ಬೋರ್‌ವೇಲ್‌ಗೆ ಸೇರುತ್ತಿದೆ. ಈ ಬೋರ್‌ವೇಲ್ ನೀರನ್ನು ಪ್ರಯಾಣಿಕರು ಮತ್ತು ಸಂಸ್ಥೆಯ ಸಿಬ್ಬಂದಿಗಳು ಬಳಸುತ್ತಿದ್ದಾರೆ. ಮುಖ್ಯವಾಗಿ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿರುವ ಉಚಿತ ಕುಡಿಯುವ ನೀರಿನ ಟ್ಯಾಂಕ್‌ರಗೂ ಇದೇ ನೀರನ್ನೇ ಬಳಸಲಾಗುತ್ತಿದೆ. ಈ ಬಗ್ಗೆ ಮನವಿ ಮಾಡಿದ್ದರೂ ಕೆಎಸ್‌ಆರ್‌ಟಿಸಿ ಸಂಸ್ಥೆ ಕ್ರಮಕ್ಕೆ ಮುಂದಾಗಿಲ್ಲ.
ಕುಡಿಯುವ ಟ್ಯಾಂಕರ್‌ಗೆ ಮಲ-ಮೂತ್ರ ಮಿಶ್ರಿತ ನೀರು:
ನಗರದ ಹೃದಯ ಭಾಗದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಇದ್ದು, ಪ್ರತಿದಿನ 300ಕ್ಕೂ ಹೆಚ್ಚು ಬಸ್‌ಗಳ ಸಂಚಾರವಿದೆ. ಹೈಟೆಕ್ ಬಸ್ ನಿಲ್ದಾಣದಲ್ಲಿ ಪುರಷ ಮತ್ತು ಮಹಿಳೆಯರ ಬಳಕೆಗಾಗಿ 10 ಶೌಚಾಲಯಗಳಿವೆ. ಈ ಶೌಚಾಲಯಗಳಿಂದ ಬರುವ ಮಲ ಮತ್ತು ಮೂತ್ರದ ನೀರು ಸರಾಗವಾಗಿ ಹೋಗುತ್ತಿಲ್ಲ. ಬದಲಾಗಿ ಕೆಎಸ್‌ಆರ್‌ಟಿಸಿಯವರ ಏಕೈಕ ಬೋರ್‌ವೆಲ್ ಪಾಯಿಂಟ್ ಬಳಿ ಸಂಗ್ರಹವಾಗುತ್ತಿದೆ. ಈ ಮಲ-ಮೂತ್ರ ಮಿಶ್ರಿತ ನೀರು ಮತ್ತೆ ಬೋರ್‌ವೆಲ್ ಸೇರುತ್ತಿದೆ. ಇದೇ ಬೋರ್‌ವೆಲ್ ನೀರನ್ನು ಬಸ್ ನಿಲ್ದಾಣದಲ್ಲಿರುವ ಹೊಟೇಲ್ ಮತ್ತು ಕಾಂಡಿಮಂಟ್ಸ್ ಗಳಿಗೆ ಸರಬರಾಜು ಮಾಡಲಾಗುತ್ತಿದೆ, ಚಾಲಕ ಮತ್ತು ನಿರ್ವಾಹಕರು ಇದೇ ನೀರನ್ನು ಬಳಸುತ್ತಿದ್ದಾರೆ. ಮುಖ್ಯವಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿರುವ ಕುಡಿಯುವ ನೀರಿನ ಟ್ಯಾಂಕರ್‌ಗೂ ಸಹ ಇದೇ ನೀರನ್ನು ಬಿಡಲಾಗುತ್ತಿದೆ.
ಗಬ್ಬು ನಾರುತ್ತಿರುವ ಪಾರ್ಕಿಂಗ್ ಸ್ಥಳ:
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿನ ಶೌಚಾಲಯಗಳ ಪೈಪ್‌ಗಳು ಹೊಡೆದು ಹೋಗಿದ್ದು, ಈ ಪೈಪ್‌ಗಳಿಂದ ಸೋರಿಕೆಯಾಗುತ್ತಿರುವ ನೀರು ನೇರವಾಗಿ ದ್ವಿಚಕ್ರ ಮತ್ತು ಕಾರುಗಳ ಪಾರ್ಕಿಂಗ್ ಪ್ರದೇಶ ಸೇರುತ್ತಿದೆ. ಇದರಿಂದ ಇಲ್ಲಿಗೆ ಪಾರ್ಕಿಂಗ್ ಮಾಡಲು ಬರುವ ಬೈಕ್ ಸವಾರರ ಸಂಖ್ಯೆಯೂ ಕಡಿಮೆಯಾಗಿದೆ. ಗಬ್ಬು ನಾರುತ್ತಿರುವುದರಿಂದ ಸೊಳ್ಳೆಕಾಟವೂ ಹೆಚ್ಚಾಗಿದೆ.
ದೂರು ನೀಡಿದರೂ ಕ್ರಮವಿಲ್ಲ:
ಅಂಬರೀಶ್ ಎಂಬುವರು ಬಸ್ ನಿಲ್ದಾಣದ ಪಾರ್ಕಿಂಗ್ ಟೆಂಡರ್ ತೆಗೆದು ಕೊಂಡಿದ್ದಾರೆ. ಪ್ರತಿ ತಿಂಗಳು ೬೦ ಸಾವಿರ ಹಣವನ್ನು ಕೆಎಸ್‌ಆರ್‌ಟಿಸಿ ಸಂಸ್ಥೆಗೆ ಬಾಡಿಗೆ ಕಟ್ಟುತ್ತಿದ್ದಾರೆ. ಪಾರ್ಕಿಂಗ್ ಪ್ರದೇಶ ಸ್ವಚ್ಛ ಮಾಡುವಂತೆ ಮತ್ತು ಬೋರ್‌ವೆಲ್ ಸೇರುತ್ತಿರುವ ಶೌಚಾಲಯದ ನೀರಿನ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅಧಿಕಾರಿಗಳು ಜವಾಬ್ದಾರಿಯಿಂದ ನುಣಿಚಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.
ಪ್ರಯಾಣಿಕರ ಆಕ್ರೋಶ :
ಪ್ರಯಾಣಿಕರಿಗೆ ಮತ್ತು ಸಂಸ್ಥೆಯ ಸಿಬ್ಬಂದಿಗಳಿಗೆ ಶುದ್ಧವಾದ ಮತ್ತು ಸ್ವಚ್ಚವಾದ ನೀರು ಕೊಡುವುದು ಕೆಎಸ್‌ಆರ್‌ಟಿಸಿಯ ಜವಾಬ್ದಾರಿಯಾಗಿದೆ ಆದರೆ ಸಂಬAಧಪಟ್ಟ ಅಧಿಕಾರಿಗಳು ಜವಾಬ್ದಾರಿಯಿಂದ ನುಣಿಚಿಕೊಳ್ಳುವ ಮೂಲಕ ಪ್ರಯಾಣಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.