ಕೃಷ್ಣಾ ನ್ಯಾಯಾಧೀಕರಣ-2 ಗೆಜೆಟ್ ಅಧಿಸೂಚನೆ ಕುರಿತ ಉನ್ನತ ಮಟ್ಟದ ಸಭೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕಾವೇರಿಯಲ್ಲಿ ನಡೆದ ಕೃಷ್ಣಾ ನ್ಯಾಯಾಧೀಕರಣ-2 ಗೆಜೆಟ್ ಅಧಿಸೂಚನೆ ಕುರಿತ ಉನ್ನತ ಮಟ್ಟದ ಸಭೆಯ ಮುಖ್ಯಾಂಶಗಳು:

• ರಾಜ್ಯದ ರೈತರ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿದ್ದು, ರಾಜ್ಯದ ಪಾಲಿನ ನೀರನ್ನು ಪಡೆದುಕೊಳ್ಳಲು ಕಾನೂನು ಕ್ರಮಗಳು ಸೇರಿದಂತೆ ಎಲ್ಲಾ ಪ್ರಯತ್ನ ನಡೆಸಬೇಕಿದೆ.

• ಕೃಷ್ಣಾ ಜಲವಿವಾದ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಅನುಷ್ಠಾನ ಮಾಡಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸದ್ಯದಲ್ಲಿಯೇ ಸರ್ವಪಕ್ಷ ಸಭೆ ಕರೆಯಲಾಗುವುದು.

• ಕೃಷ್ಣಾ ಜಲವಿವಾದ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಗಜೆಟ್ ಅಧಿಸೂಚನೆ ಪ್ರಕಟಿಸಲು ಮತ್ತು ಈ ಕುರಿತಾಗಿ ದಿನಾಂಕ 16-09-2011ರ ಸುಪ್ರೀಂಕೋರ್ಟ್ ಆದೇಶವನ್ನು ಮಾರ್ಪಡಿಸಲು ಕೋರಿ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲು ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲಾಗುವುದು.

• ನ್ಯಾಯಾಧೀಕರಣದ ಅಂತಿಮ ತೀರ್ಪು ಕೇಂದ್ರ ಸರ್ಕಾರದ ಗಜೆಟ್ ಅಧಿಸೂಚನೆಗೆ ಒಳಪಟ್ಟಿದ್ದು, ಈ ಕುರಿತಾಗಿ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಇನ್ನೂ ಅಧಿಸೂಚನೆ ಆಗಿರುವುದಿಲ್ಲ. ನ್ಯಾಯಾಧೀಕರಣದ ಅಂತಿಮ ತೀರ್ಪು ನೀಡಿದ ದಿನಾಂಕದಿಂದ ಇದುವರೆಗೂ 15 ವರ್ಷಗಳೇ ಕಳೆದಿವೆ. ಉತ್ತರ ಕರ್ನಾಟಕದ ಯುಕೆಪಿ-3 ಯೋಜನೆಯ ಪ್ರದೇಶದಲ್ಲಿನ ರೈತರು ತಮ್ಮ ಹಕ್ಕಿನ ಪಾಲನ್ನು ಬಳಸಲು ಬಹಳ ವರ್ಷಗಳಿಂದ ಕಾಯುತ್ತಿದ್ದಾರೆ.

• ಕಾವೇರಿ ಜಲವಿವಾದ ನ್ಯಾಯಮಂಡಳಿ ತೀರ್ಪಿಗೆ ಸಂಬಂಧಿಸಿದಂತೆ ಸಿವಿಲ್ ಮೇಲ್ಮನವಿಗಳು ಬಾಕಿ ಇರುವಾಗಲೂ ಕಾವೇರಿ ನ್ಯಾಯಾಧೀಕರಣದ ತೀರ್ಪು ಪ್ರಕಟಿಸಲು ಸುಪ್ರೀಂಕೋರ್ಟ್ ನಿರ್ದೇಶಿಸಿರುತ್ತದೆ. ಇದೇ ರೀತಿ ಮಹದಾಯಿ ಜಲವಿವಾದ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಪ್ರಕಟಣೆಗೆ ಸುಪ್ರೀಂಕೋರ್ಟ್ ದಿನಾಂಕ 20-02-2020ರ ತನ್ನ ಆದೇಶದಲ್ಲಿ ನಿರ್ದೇಶಿಸಿದೆ. ಅದರಂತೆ ಈ ಎರಡೂ ನ್ಯಾಯಾಧೀಕರಣಗಳ ತೀರ್ಪನ್ನು ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿರುತ್ತದೆ. ಇದೇ ರೀತಿಯಲ್ಲಿ ಕೃಷ್ಣಾ ನ್ಯಾಯಾಧೀಕರಣದ ತೀರ್ಪಿನ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು.

• ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ-II ದಿನಾಂಕ 30-12-2010 ರಂದು ಕೃಷ್ಣಾ ನ್ಯಾಯಾಧೀಕರಣ-2 ರ ತೀರ್ಪು ನೀಡಿದ್ದು, ದಿನಾಂಕ 29-11-2013ರಂದು further report ನೀಡಿರುತ್ತದೆ. ನ್ಯಾಯಾಧೀಕರಣದ ಅಂತಿಮ ತೀರ್ಪಿನಡಿ ಕರ್ನಾಟಕ ರಾಜ್ಯಕ್ಕೆ 173 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿರುತ್ತದೆ. ಈ ಪೈಕಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಯೋಜನೆಗೆ 130 ಟಿಎಂಸಿ ಹಂಚಿಕೆ ನಿಗದಿಪಡಿಸಿರುತ್ತದೆ.

• ಆದರೆ ನ್ಯಾಯಮಂಡಳಿಯ ವರದಿ ಮತ್ತು ನ್ಯಾಯಾಧೀಕರಣದ ಅಂತಿಮ ಆದೇಶ ಪ್ರಶ್ನಿಸಿ ಆಂಧ್ರಪ್ರದೇಶ ಸುಪ್ರೀಂ ಕೋರ್ಟ್‌ನಲ್ಲಿ ಎಸ್ಎಲ್‌ಪಿ ದಾಖಲಿಸಿದೆ. ಈ ಕುರಿತು ಸುಪ್ರೀಂಕೋರ್ಟ್ ತನ್ನ ದಿನಾಂಕ 16-09-2011 ರ ಆದೇಶದಲ್ಲಿ ʻʻತನ್ನ ಮುಂದಿನ ಆದೇಶದವರೆಗೆ ನ್ಯಾಯಾಧೀಕರಣ ತೆಗೆದುಕೊಳ್ಳಬಹುದಾದ ಯಾವುದೇ ನಿರ್ಧಾರಗಳ ಅಧಿಸೂಚನೆ ಪ್ರಕಟಿಸದಂತೆ ಆದೇಶ ನೀಡಿದೆʼʼ ಎನ್ನುವುದನ್ನು ಗಮನಿಸಬೇಕಿದೆ.

Leave a Reply

Your email address will not be published. Required fields are marked *