ವ್ಯಕ್ತಿಯೊಬ್ಬ ಕಾಲುಜಾರಿ ಕೃಷಿಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ತೂಬಗೆರೆ ಹೋಬಳಿಯ ನಾರಸಿಂಹನಹಳ್ಳಿ ಗ್ರಾಮದ ತೋಟವೊಂದರಲ್ಲಿ ನಡೆದಿದೆ.
ಉಜ್ಜನಿ ಹೊಸಹಳ್ಳಿ ಗ್ರಾಮದ ಸುನೀಲ್ (30) ಸಾವನ್ನಪ್ಪಿರುವ ವ್ಯಕ್ತಿ.
ನಿನ್ನೆ ಹೋಳಿ ಹಬ್ಬ ಆಚರಿಸಿ ಸಂಜೆ 6 ಗಂಟೆ ಸುಮಾರಿನಲ್ಲಿ ಕೃಷಿ ಹೊಂಡದಲ್ಲಿ ಮುಖ ತೊಳೆಯಲು ಹೋಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕಳೆದ ಎರಡು ತಿಂಗಳ ಹಿಂದಷ್ಟೇ ನಾರಸಿಂಹನಹಳ್ಳಿ ಬಳಿಯ ತೋಟವೊಂದಲ್ಲಿ ಮೇಲ್ವಿಚಾರಕನ ಕೆಲಸಕ್ಕೆ ಸೇರಿದ್ದರು. ತೋಟದಲ್ಲೇ ವಾಸವಿದ್ದ ಬಿಹಾರದ ಕಾರ್ಮಿಕರೊಂದಿಗೆ ಹೋಳಿ ಆಚರಿಸಿ ಸಂಜೆ 6ಗಂಟೆ ಸುಮಾರಿನಲ್ಲಿ ಫಾಲಿಹೌಸ್ ನಲ್ಲಿದ್ದ ಕೃಷಿ ಹೊಂಡದ ಬಳಿ ಹೋಗಿದ್ದರು ಎಂದು ತಿಳಿದುಬಂದಿದೆ. ಇಂದು ಬೆಳಿಗ್ಗೆ ಬಿಹಾರಿ ಕಾರ್ಮಿಕರು ಕೃಷಿ ಹೊಂಡದ ಬಳಿ ಬಂದಾಗ ಸುನೀಲ್ ಮೃತದೇಹ ಕಂಡು ಬಂದಿದೆ. ಕೂಡಲೇ ವಿಷಯವನ್ನು ತೋಟದ ಮಾಲೀಕನಿಗೆ ತಿಳಿಸಿದರು.
ಸ್ಥಳಕ್ಕೆ ಗ್ರಾಮಾಂತರ ಠಾಣಾ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಾಗಿದೆ.