ಜಲವಿದ್ದರೆ ಎಲ್ಲವೂ ಇದೆ, ಜಲ ಇಲ್ಲದಿದ್ದರೆ ಏನೇನೂ ಇಲ್ಲ ಎಂಬ ಹಾಗೆ ನೀರು ಎಲ್ಲಾ ಜೀವಿಗಳ ಮೂಲಾಧಾರ. ನೀರಿಲ್ಲದ ಬದುಕನ್ನು ಊಹಿಸಲು ಅಸಾಧ್ಯ. ಭಾರತದಲ್ಲಿ ದೊರೆಯುವ ಉತ್ತಮ ನೀರಿನಲ್ಲಿ ಬಹುಪಾಲು ಕೃಷಿಗೆ ಶೇ.82ರಷ್ಟು ಬಳಸಲಾಗುತ್ತಿದ್ದು, ಹೆಚ್ಚುತ್ತಿರುವ ಕೈಗಾರಿಕೆಗಳು ಮತ್ತು ನಗರೀಕರಣದಿಂದ ವ್ಯವಸಾಯಕ್ಕೆ ದೊರೆಯುವ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಆದ್ದರಿಂದ ಬೆಳೆಯುತ್ತಿರುವ ಜನಸಂಖ್ಯೆಯ ಆಹಾರ ಬೇಡಿಕೆ ಪೂರೈಸಲು ನೀರಿನ ಉತ್ಪಾದಕತೆ ಹೆಚ್ಚಿಸಿ ಲಭ್ಯವಿರುವ ನೀರನ್ನು ಸದ್ಭಳಕೆ ಮಾಡಬೇಕಿದೆ.
ಕೃಷಿಯಲ್ಲಿ ಬೆಳೆಗೆ ಅವಶ್ಯಕವಾದ ನೀರಿನ ಪ್ರಮಾಣ, ಸುಧಾರಿತ ಪದ್ಧತಿ, ವಿನ್ಯಾಸ ಹಾಗೂ ಸೂಕ್ತ ಸಮಯದಲ್ಲಿ ನೀರೊದಗಿಸುವುದು ಹಾಗೂ ಮಳೆ ನೀರು ಮತ್ತು ಸಂಸ್ಕರಿಸಿದ ನೀರಿನ ಸಂಯೋಜಿತ ಬಳಕೆಗೆ ಉತ್ತೇಜನ ನೀಡಬೇಕಾಗಿದೆ.
ನೀರಿನ ಮೂಲ, ಲಭ್ಯತೆ, ಬೆಳೆ ಹಾಗೂ ಉತ್ಪಾದನಾ ಪದ್ಧತಿ, ಮಣ್ಣಿನ ಗುಣಲಕ್ಷಣ ಅಂಶಗಳನ್ನು ಪರಿಗಣಿಸಿ ಸೂಕ್ತ ಪದ್ಧತಿ ಅನುಸರಿಸುವುದರಿಂದ ನೀರಿನ ಬಳಕೆ ಸಾಮರ್ಥ್ಯ ಹೆಚ್ಚಿಸಬಹುದು.
ಬೆಳೆಗೆ ಪೂರೈಸುವ ನೀರಾವರಿ ಪದ್ಧತಿಗಳನ್ನು ಮೇಲ್ಮೈ, ಒಳಮೇಲ್ಮೈ, ಸೂಕ್ಷ್ಮ ನೀರಾವರಿ ಪದ್ಧತಿ ಎಂದು ವಿಂಗಡಿಸಲಾಗಿದೆ. ಒತ್ತಡದಿಂದ ನೀರು ಹರಿಸಲು ಸಾಧ್ಯವಿಲ್ಲದಿದ್ದಾಗ ಮೇಲ್ಮೈ ನೀರಾವರಿ, ಒತ್ತಡದಿಂದ ಪಂಪ್ ಬಳಸಿ ನೀರು ಹರಿಸುವ ಸೌಲಭ್ಯವಿದ್ದಾಗ ಸೂಕ್ಷ್ಮ ನೀರಾವರಿ ಅಳವಡಿಸುವುದು ಸೂಕ್ತ.
ನೀರು ನಿರ್ವಹಣಾ ಪದ್ಧತಿಗಳು
1.ಮೇಲ್ಮೈ ನೀರಾವರಿ ಪದ್ಧತಿ
ಮೇಲ್ಮೈ ನೀರಾವರಿ ಪದ್ಧತಿಯಲ್ಲಿ ಇಳಿಜಾರಿಗನುಗುಣವಾಗಿ ನೀರಿನ ಕಾಲುವೆಗಳಲ್ಲಿ ಗುರುತ್ವಾಕರ್ಷಣೆ ಸಹಾಯದಿಂದ ಬೆಳೆಗಳಿಗೆ ನೀರನ್ನು ಪೂರೈಸಲಾಗುವುದು. ಭೂಮಿಯ ಮೇಲ್ಮೈನ ಇಳಿಜಾರಿನ ಪ್ರಮಾಣ, ಬೆಳೆ ಸಾಲಿನ ಅಂತರ ಹಾಗೂ ನೀರಿನ ಲಭ್ಯತೆ ಆಧರಿಸಿ ಕೆಳಕಂಡ ಮೇಲ್ಮೈ ಪದ್ಧತಿಗಳನ್ನು ಅನುಸರಿಸಬಹುದು.
*ಬದು ಪಟ್ಟಿ ಪದ್ಧತಿ
*ಮಡಿಪದ್ಧತಿ
*ಸಾಲು ಬೋದು ನೀರಾವರಿ ಪದ್ಧತಿ
*ನೆರಿಗೆ ನೀರಾವರಿ ಪದ್ಧತಿ
*ಅಗಲ-ಸಾಲುಮಟ್ಟ ಪದ್ಧತಿ
2. ಸೂಕ್ಷ್ಮ ನೀರಾವರಿ ಪದ್ಧತಿ
ಸೂಕ್ಷ್ಮ ನೀರಾವರಿ ಪದ್ಧತಿಯಲ್ಲಿ ತುಂತುರು ಅಥವಾ ಹನಿ ಸಾಧನಗಳಿಂದ ಅಗತ್ಯ ಪ್ರಮಾಣದಲ್ಲಿ ಪೈಪುಗಳ ಮೂಲಕ ಒತ್ತಡದಲ್ಲಿ ಬೆಳೆಗೆ ಅವಶ್ಯವಿರುವಷ್ಟು ನೀರು ಪೂರೈಸುವ ವಿಧಾನ.
ಸೂಕ್ಷ್ಮ ನೀರಾವರಿ ಪದ್ಧತಿ ವಿಧಗಳು
• ತುಂತುರು ಅಥವಾ ಸಿಂಚನ ನೀರಾವರಿ ಪದ್ಧತಿ
• ರೈನ್ ಗನ್ ಪದ್ಧತಿ
• ಹನಿ ನೀರಾವರಿ ಪದ್ಧತಿ
• ರಸಾವರಿ(ರಸ ನೀರಾವರಿ) ಪದ್ಧತಿ
• ಸ್ವಯಂ ಚಾಲಿತ ನೀರಾವರಿ ಪದ್ಧತಿ
• ರೈನ್ ಹೋಸ್ ಪದ್ಧತಿ
• ಬುಗ್ಗೆ ನೀರಾವರಿ ಪದ್ಧತಿ
ನೀರನ್ನು ಬೇಸಾಯದಲ್ಲಿ ದಕ್ಷವಾಗಿ ಬಳಕೆ ಮಾಡೋದು ಹೇಗೆ?
* ನೀರನ್ನು ಕೊಳವೆ, ಪೈಪ್ ಮೂಲಕ ಸಾಗಾಣಿಕೆಗೆ ಒತ್ತು ನೀಡಬೇಕು. ತೆರೆದ ಕಾಲುವೆಗಳಲ್ಲಿ ನೀರು ಸಾಗಿಸುವಾಗ ಕಾಲುವೆಗಳನ್ನು ಸಿಮೆಂಟ್, ಕಲ್ಲು, ಇಟ್ಟಿಗೆಗಳಿಂದ ಗಿಲಾವು ಮಾಡಿರಬೇಕು, ಕಾಲುವೆಗಳಲ್ಲಿ ಕಳೆ ಇಲ್ಲದಂತೆ ನೋಡಿಕೊಳ್ಳಬೇಕು.
* ತೆರೆದ, ಕೊಳವೆ ಬಾವಿ ನೀರಾವರಿ ಪ್ರದೇಶದಲ್ಲಿ ಕಡ್ಡಾಯವಾಗಿ ತುಂತುರು, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು.
* ನೀರಿನ ಬಳಕೆ ಮಾಪನ, ಅಳತೆ ಮಾಡಿ ಸೂಕ್ತ ಪ್ರದೇಶಗಳಲ್ಲಿ ನೀರೊದಗಿಸಬೇಕು.
* ನೀರಿನ ಲಭ್ಯತೆ ಕಡಿಮೆ ಇದ್ದಾಗ, ಸಾಲು ಬೋದು ಪದ್ಧತಿಯಲ್ಲಿ ಸಾಲು ಬಿಟ್ಟು ಸಾಲು ನೀರು ಹಾಯಿಸುವುದು, ನೀರಾವರಿ ಅಂತರ ಕ್ರಮೇಣವಾಗಿ ಹೆಚ್ಚಿಸಿಕೊಳ್ಳಬೇಕು.
* ಮಳೆ ನೀರು ಸದುಪಯೋಗಪಡಿಸಿಕೊಳ್ಳಲು ಮಳೆ ನೀರು ಕೊಯ್ಲು, ಸಂರಕ್ಷಣಾ ಕ್ರಮಗಳನ್ನು ಅನುಸರಿಸಬೇಕು.
* ಕೆರೆ ನೀರು ಮತ್ತು ಮಳೆ ನೀರಿನ ಲಭ್ಯತೆ ಗಮನಿಸಿ ಅವಶ್ಯಕತೆಗೆ ತಕ್ಕಂತೆ ಬೆಳೆಗಳನ್ನು ಬೆಳೆದು ಹೆಚ್ಚು ಆದಾಯ ಪಡೆಯಬಹುದು.
* ಪ್ರತಿ ವರ್ಷ ಸಾಕಷ್ಟು ಪ್ರಮಾಣದ ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ ಅಥವಾ ಯಾವುದಾದರು ಸಾವಯವ ಗೊಬ್ಬರ ಬಳಸುವುದರಿಂದ ಭೂಮಿ ಹಾಳಾಗದಂತೆ ತಡೆದು, ನೀರಿನ ಅವಶ್ಯಕತೆ ಕಡಿಮೆಯಾಗುವುದಲ್ಲದೆ ಬೆಳೆಯ ಇಳುವರಿ ಹೆಚ್ಚಿಸಬಹುದು.
* ಎಲ್ಲಾ ನೀರಾವರಿ ಬೆಳೆಗಳಲ್ಲಿ ಮೇಲ್ಮೈ ಪ್ರದೇಶವನ್ನು ತೆಂಗಿನ ಗರಿ, ಎಲೆ, ಒಣಗಿದ ಹುಲ್ಲು, ಸೋಗೆ ಅಥವಾ ಬೆಳೆ ತ್ಯಾಜ್ಯ ವಸ್ತುಗಳು ಅಥವಾ ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಿ ನೀರು ಆವಿಯಾಗುವುದನ್ನ ಶೇ.50 ರಷ್ಟು ಕಡಿಮೆ ಮಾಡುವುದರಿಂದ ನೀರು ಕೊಡುವ ಅಂತರವನ್ನು ಹೆಚ್ಚಿಸಬಹುದು.
* ಎಲ್ಲಾ ಮೇಲ್ಮೈ ನೀರಾವರಿ ಪದ್ಧತಿಗಳಲ್ಲಿ ಬಸಿಗಾಲುವೆಗಳನ್ನ ನಿರ್ಮಿಸಿ ಹೆಚ್ಚಿನ ನೀರನ್ನು ಬಸಿಯುವ ವ್ಯವಸ್ಥೆಯನ್ನು ಮಾಡಬೇಕು. ಇಲ್ಲವಾದಲ್ಲಿ ಬೆಳೆಯ ಬೆಳವಣಿಗೆ ಕುಂಠಿತವಾಗುತ್ತದೆ.
ಇನ್ನೂ ಹೆಚ್ಚಿನ ಮಾಹಿತಿಗಾಗಿ ಸಮೀಪದ ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನಿಗಳನ್ನು ಸಂಪರ್ಕಿಸುವ ಮೂಲಕ ಕೃಷಿ ಪದ್ಧತಿಯನ್ನು ಉತ್ತಮಪಡಿಸಿಕೊಂಡು ಹೆಚ್ಚು ಲಾಭ ಪಡೆಯಿರಿ…