ಕುಸುಮ್‌ ಸಿಯಿಂದ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು 7 ತಾಸು ವಿದ್ಯುತ್- ಸಿಎಂ ಸಿದ್ದರಾಮಯ್ಯ

*ಗೌರಿಬಿದನೂರು, ಜೂ. 11, 2025*: ಕುಸುಮ್- ಸಿ ಯೋಜನೆಯಿಂದಾಗಿ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಇನ್ನು ಮುಂದೆ ಹಗಲಿನ ವೇಳೆಯೇ 7 ಗಂಟೆಗಳ ಕಾಲ ಸಮರ್ಪಕ ವಿದ್ಯುತ್ ಪೂರೈಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಇಂಧನ ಇಲಾಖೆ ಮತ್ತು ಬೆಸ್ಕಾಂ ವತಿಯಿಂದ ತೊಂಡೇಬಾವಿ ಹೋಬಳಿ ಹನುಮೇನಹಳ್ಳಿಯಲ್ಲಿ ಸ್ಥಾಪಿಸಿರುವ ಸೋಲಾರ್ ಘಟಕವನ್ನು ಬುಧವಾರ ಲೋಕಾರ್ಪಣೆಗೊಳಿಸಿದ ಬಳಿಕ ಪಟ್ಟಣದ ನೇತಾಜಿ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, “ರೈತರಿಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ಪೂರೈಸುವುದೇ ಕುಸುಮ್- ಸಿ ಯೋಜನೆಯ ಉದ್ದೇಶವಾಗಿದೆ,” ಎಂದರು.

“ಕುಸುಮ್- ಸಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. 2021ರಲ್ಲಿ ರಾಜ್ಯದಲ್ಲೂ ಇದನ್ನು ಜಾರಿಗೊಳಿಸುವ ಸಂಬಂಧ ಆಗಿನ ಬಿಜೆಪಿ ಸರ್ಕಾರ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡಿತ್ತು. ಆದರೆ, ನಂತರ 2 ವರ್ಷ ಅಧಿಕಾರದಲ್ಲಿದ್ದರೂ ಯೋಜನೆ ಜಾರಿಗೊಳಿಸುವ ಪ್ರಯತ್ನ ಮಾಡಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಕೆ.ಜೆ.ಜಾರ್ಜ್ ಅವರು ಸಚಿವರಾದ ಮೇಲೆ ರಾಜ್ಯದಲ್ಲಿ ಕುಸುಮ್- ಸಿ ಯೋಜನೆ ಅನುಷ್ಠಾನ ಆರಂಭಿಸಲಾಯಿತು,” ಎಂದರು.

“ಕುಸುಮ್-ಸಿ ಯೋಜನೆಯಡಿ ನಮ್ಮ ರಾಜ್ಯದಲ್ಲಿ 389 ವಿದ್ಯುತ್ ಸರಬರಾಜು ಉಪ ಕೇಂದ್ರಗಳನ್ನು ಸೌರೀಕರಣಗೊಳಿಸಲಾಗುತ್ತಿದೆ. 2396 ಮೆಗಾವ್ಯಾಟ್ ಸಾಮರ್ಥ್ಯದ ಸೌರಘಟಕಗಳು 1,555 ಕೃಷಿ ಫೀಡರ್‌ಗಳಿಗೆ ಸೌರವಿದ್ಯುತ್ ಬಲ ನೀಡಲಿದೆ. ಇದರಿಂದ 6,32,794 ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್ ವಿದ್ಯುತ್ ಸಿಗಲಿದೆ. ಇದರಿಂದ ರೈತರಿಗೆ ಹಗಲು ವೇಳೆಯೇ ಗುಣಮಟ್ಟದ ವಿದ್ಯುತ್ ಲಭ್ಯವಾಗುವುದರ ಜತೆಗೆ ವಿದ್ಯುತ್ ಅಪವ್ಯಯವೂ ನಿಲ್ಲುತ್ತದೆ. ಹೀಗಾಗಿ ಕುಸುಮ್ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತಂದ ಇಂಧನ ಸಚಿವ ಕೆ.ಜೆ.ಜಾರ್ಜ್‌ಗೆ ಅಭಿನಂದನೆ ಸಲ್ಲಿಸುತ್ತೇನೆ,” ಎಂದು ಹೇಳಿದರು.

*ಕೇಂದ್ರದ ಯೋಜನೆಗೆ ರಾಜ್ಯದ ಸಬ್ಸಿಡಿ ಹೆಚ್ಚು*:

“ರೈತರಿಗೆ ಸೋಲಾರ್ ಪಂಪ್ ಸೆಟ್ ನೀಡುವ ಕುಸುಮ್- ಬಿ ಯೋಜನೆಯನ್ನು ರಾಜ್ಯ ಸರ್ಕಾರ ಈಗಾಗಲೇ ಜಾರಿಗೆ ತಂದಿದೆ. ಇದು ಕೇಂದ್ರ ಸರ್ಕಾರದ ಯೋಜನೆಯಾದರೂ ಅವರು ನೀಡುವ ಸಹಾಯಧನ ಶೇ. 30ರಷ್ಟು ಮಾತ್ರ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯ ಸರ್ಕಾರದ ಸಹಾಯಧನವನ್ನು ಶೇ. 50ಕ್ಕೆ ಹೆಚ್ಚಿಸಲಾಗಿದೆ. ಶೇ. 20ರಷ್ಟನ್ನು ಮಾತ್ರ ಫಲಾನುಭವಿ ಭರಿಸಿದರೆ ಸಾಕು. ಕೇಂದ್ರ ಸರ್ಕಾರದ ಯೋಜನೆಗಳಿಗೂ ನಮ್ಮ ಸರ್ಕಾರ ಅವರಿಗಿಂತ ಹೆಚ್ಚು ಸಹಾಯಧನ ನೀಡುತ್ತಿರವುದೇ ರೈತರ ಬಗ್ಗೆ ನಮಗಿರುವ ಕಾಳಜಿಗೆ ಸಾಕ್ಷಿ,” ಎಂದರು.

“ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಒಂದೇ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿರಲಿಲ್ಲ. ಆದರೆ, ನಾವು ಅಧಿಕಾರಕ್ಕೆ ಬಂದ ಮೇಲೆ 4,000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿದ್ದೇವೆ. ಪ್ರಸ್ತುತ 35 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯವಿದ್ದು, 2030ರ ವೇಳೆಗೆ ಇದನ್ನು 60 ಸಾವಿರ ಮೆಗಾವ್ಯಾಟ್ ಗೆ ಹೆಚ್ಚಿಸಲು ಯೋಜನೆ ರೂಪಿಸಲಾಗುತ್ತಿದೆ,” ಎಂದು ತಿಳಿಸಿದರು.

“ರೈತರ ಕೃಷಿ ಪಂಪ್ ಸೆಟ್ ಗಳಿಗೆ ಸರ್ಕಾರ ವಾರ್ಷಿಕ 19,000 ಕೋಟಿ ರೂ. ಸಹಾಯಧನ ನೀಡುತ್ತಿದೆ. ಆದರೂ ನಮ್ಮ ಸರ್ಕಾರದ ಬಗ್ಗೆ ಪ್ರತಿಪಕ್ಷಗಳು ಸುಳ್ಳು ಆರೋಪಗಳನ್ನು ಮಾಡುತ್ತಿವೆ. ಯಾವುದೇ ಕಾರಣಕ್ಕೂ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಯೋಜನೆ ನಿಲ್ಲಿಸುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.

*ಸರ್ಕಾರಿ ಕಚೇರಿಗಳಲ್ಲಿ ಪ್ರಿ ಪೇಯ್ಡ್ ಮೀಟರ್ ಕುರಿತು ಚಿಂತನೆ: ಜಾರ್ಜ್‌*

ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, “ಪರಿಷ್ಕೃತ ವಿತರಣಾ ವಲಯ ಯೋಜನೆ (ಆರ್ ಡಿಎಸ್ಎಸ್) ಯೋಜನೆಯಡಿ ಇಂಧನ ಮೂಲ ಸೌಕರ್ಯಕ್ಕೆ ಕೇಂದ್ರ ಸರ್ಕಾರದಿಂದ ಶೇ. 60 ಸಹಾಯಧನ ಸಿಗುವುದರ ಜತೆಗೆ ಸ್ಮಾರ್ಟ್ ಮೀಟರ್ ಅಳವಡಿಸಲು ಪ್ರತಿ ಮೀಟರ್ ಗೆ 900 ರೂ. ಸಬ್ಸಿಡಿ ಸಿಗುತ್ತದೆ. ಆದರೆ, ಕೆಲವೊಂದು ಷರತ್ತುಗಳ ಕಾರಣಕ್ಕೆ ಹಿಂದಿನ ರಾಜ್ಯ ಸರ್ಕಾರ ಅದನ್ನು ಒಪ್ಪಿಕೊಂಡಿರಲಿಲ್ಲ. ಇದೀಗ ಆರ್ ಡಿಎಸ್ ಯೋಜನೆ ಅಳವಡಿಸಿಕೊಳ್ಳಲು ಅವಕಾಶ ನೀಡುವಂತೆ ಕೇಂದ್ರ ಇಂಧನ ಸಚಿವರನ್ನು ಕೋರಲಾಗಿದ್ದು, ಷರತ್ತುಗಳಿಗೆ ವಿನಾಯಿತಿ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ. ಇದಕ್ಕೆ ಒಪ್ಪಿರುವ ಸಚಿವರು, ಇತರೆ ಇಲಾಖೆಗಳಿಂದ ಬರಬೇಕಾದಬಾಕಿ ವಸೂಲಿಗೆ ಶೇ. 2ರಷ್ಟು ಸೆಸ್ ವಿಧಿಸಬೇಕು ಮತ್ತು ಸರ್ಕಾರಿ ಕಚೇರಿಗಳಿಗೆ ಪ್ರಿ ಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಸಬೇಕು ಎಂದು ಹೇಳಿದ್ದಾರೆ. ಇದನ್ನು ಕಾರ್ಯರೂಪಕ್ಕೆ ತರಲು ಸಚಿವ ಸಂಪುಟದ ಸದಸ್ಯರು ಸಹಕಾರ ನೀಡಬೇಕು,” ಎಂದು ಮನವಿ ಮಾಡಿದರು.

“ಪಿಎಂ ಕುಸುಮ್-ಸಿ ಯೋಜನೆ ರೈತರಿಗೆ ಅದರಲ್ಲೂ ಮುಖ್ಯವಾಗಿ ಬಯಲು ಸೀಮೆ ಭಾಗದ ರೈತರಿಗೆ ವರದಾನವಾಗಿದೆ. ಯೋಜನೆ ಜಾರಿಗೊಳಿಸಲು ಸರ್ಕಾರ ಎಲ್ಲಾ ರೀತಿಯ ಬೆಂಬಲ ನೀಡುತ್ತಿದೆ. ಆದರೆ, ಭೂಮಿ ಕೊರತೆ ಇದೆ. ಹೀಗಾಗಿ ಶಾಸಕರು ಆಸಕ್ತಿ ವಹಿಸಿ ಯೋಜನೆ ಅನುಷ್ಠಾನಗೊಳಿಸಲು ಸಹಕರಿಸಿದರೆ ರೈತರಿಗೆ ಹೆಚ್ಚು ಅನುಕೂಲವಾಗಲಿದೆ,” ಎಂದು ಹೇಳಿದರು.

ಸ್ಥಳೀಯ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಮಾಜಿ ಸ್ಪೀಕರ್ ಮತ್ತು ಎಚ್.ನರಸಿಂಹಯ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ, ಕ್ರೆಡಲ್ ಅಧ್ಯಕ್ಷ ಹಾಗೂ ಶಾಸಕ ಟಿ.ಡಿ.ರಾಜೇಗೌಡ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯೂ ಆಗಿರುವ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್, ಶಾಸಕರಾದ ಎಸ್.ಎನ್.ಸುಬ್ಬಾರೆಡ್ಡಿ, ಪ್ರದೀಪ್ ಈಶ್ವರ್, ವಿಧಾನ ಪರಿಷತ್ ಸದಸ್ಯರಾದ ಅನಿಲ್ ಕುಮಾರ್, ಆೀನಿವಾಸ್, ಗ್ಯಾರಂಟಿ ಸಮಿತಿಯಗಳ ಜಿಲ್ಲಾಧ್ಯಕ್ಷ ಯಲುವಹಳ್ಳಿ ಎನ್.ರಮೇಶ್, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಶಿವಶಂಕರ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ. ಟಿ. ನಿಟ್ಟಳ್ಳಿ ಮತ್ತಿತರರು ಪಾಲ್ಗೊಂಡಿದ್ದರು.

*ಸಿಎಂ, ಸರ್ಕಾರಕ್ಕೆ ರೈತರ ಧನ್ಯವಾದ*

ಕುಸುಮ್- ಸಿ ಯೋಜನೆ ಉದ್ಘಾಟಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ವಿವಿಧ ಜಿಲ್ಲೆಗಳ ರೈತರ ಜತೆ ಸಂವಾದ ನಡೆಸಿದರು. ಈ ಯೋಜನೆ ಜಾರಿಗೆ ಬಂದ ಬಳಿಕ ತಮಗೆ ಆಗಿರುವ ಅನುಕೂಲವನ್ನು ಹಂಚಿಕೊಂಡ ರೈತರು, ಅದಕ್ಕಾಗಿ ಮುಖ್ಯಮಂತ್ರಿ, ಇಂಧನ ಸಚಿವರು ಮತ್ತು ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದರು. ಕುಸುಮ್- ಬಿ ಮತ್ತು ಕುಸುಮ್- ಸಿ ಯೋಜನೆಗಳು ಕೇಂದ್ರ ಸರ್ಕಾರದ್ದಾದರೂ ರಾಜ್ಯ ಸರ್ಕಾರ ಹೆಚ್ಚು ಸಬ್ಸಿಡಿ ನೀಡುತ್ತಿರುವುದು ಮಾತ್ರವಲ್ಲದೆ, ಮುತುವರ್ಜಿಯಿಂದ ಜಾರಿಗೊಳಿಸುವ ಮೂಲಕ ರಾಜ್ಯದ ರೈತರ ನೆರವಿಗೆ ನಿಂತಿದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದರು.

Ramesh Babu

Journalist

Recent Posts

ಏ.12ರಂದು ದೊಡ್ಡಬಳ್ಳಾಪುರ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ ನಗರದಲ್ಲಿ ಏ.12 ರಂದು 220/66/11ಕೆವಿ ಕೆಐಎಡಿಬಿ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ F02-Birla Super ಫೀಡರ್‌ನಲ್ಲಿ ವಿದ್ಯುತ್ ಕಾಮಗಾರಿಗಳು…

5 hours ago

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರ ಸಾವು

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರವಾಗಿ ಸಾವನ್ನಪ್ಪಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮನೋರಾಯನಪಾಳ್ಯದಲ್ಲಿ ನಡೆದಿದೆ.. 17 ವರ್ಷದ…

10 hours ago

ಲೋಕಾಯುಕ್ತ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ರಾಯಚೂರು ಸಿರವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸುರೇಶ್ ಶೆಟ್ಟಿ ಲೋಕಾಯುಕ್ತರ ಬಲೆಗೆ ಬಿದ್ದ ಮುಖ್ಯಾಧಿಕಾರಿ. ರಾಘವೇಂದ್ರ…

10 hours ago

ಹುಚ್ಚನೊಬ್ಬನ ಕನಸು….

ದೇಶದ ಎಲ್ಲಾ ದಲಿತ ಕೇರಿಗಳನ್ನು ನಾಶ ಮಾಡಬೇಕು. ಅಲ್ಲಿನ ಎಲ್ಲರಿಗೂ ಊರ ಒಳಗಿನ ಸ್ಥಳದಲ್ಲಿ ವಾಸಕ್ಕೆ ಅವಕಾಶ ಕಲ್ಪಿಸಬೇಕು. ಬ್ರಾಹ್ಮಣರ…

15 hours ago

PUC Result: ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ….ಈ ಕಥೆ ಕೇಳಿದರೆ ಎಂಥವರ ಕಣ್ಣಲ್ಲೂ ನೀರು ಬರುವುದು ಗ್ಯಾರಂಟಿ

600ಕ್ಕೆ 600 ಅಂಕ ತೆಗೆದು ರಾಜ್ಯಕ್ಕೆ ಟಾಪರ್ ಆದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ. ಮೂರು…

1 day ago

ತೂಬಗೆರೆ ಸರ್ಕಾರಿ ಪಿಯು ಕಾಲೇಜಿಗೆ ಮತ್ತೊಮ್ಮೆ ಮೆರುಗು: ಶೇ.95.45 ಫಲಿತಾಂಶ

ದೊಡ್ಡಬಳ್ಳಾಪುರ (ತೂಬಗೆರೆ): ಗ್ರಾಮಾಂತರ ಭಾಗದಲ್ಲಿದ್ದರೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು…

1 day ago