ಕೋಲಾರ:ನಗರದಲ್ಲಿ ನಿರ್ಮಿಸುತ್ತಿರುವ ಕುರುಬ ಸಮುದಾಯದ ಹಾಸ್ಟೆಲ್ ಕಟ್ಟಡಕ್ಕೆ 2 ಕೋಟಿ ಘೋಷಿಸಲಾಗಿ, ಈಗಾಗಲೇ 50 ಲಕ್ಷ ಖಾತೆಗೆ ಬಂದಿದೆ. ಸಮುದಾಯಕ್ಕೆ ಎಷ್ಟು ಬೇಕಾದರೂ ಹಣ ಕೊಡಲು ಸಿದ್ಧ. ಎಲ್ಲಾ ಶಾಸಕರು, ಸಂಸದರೂ ಹಣ ನೀಡಿ ಕೈಜೋಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದರು.
ನಗರದ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಯೆದುರು ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕುರುಬರ ಸಂಘ ಹಾಗೂ ಸಮುದಾಯದ ವಿವಿಧ ಸಂಘಗಳ ವತಿಯಿಂದ ನಡೆದ 537ನೇ ಕನಕದಾಸ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಕಿಕೊಟ್ಟ ಮಾರ್ಗದಲ್ಲಿ ಕನಕ ಜಯಂತಿ ಆಚರಿಸಿಕೊಂಡು ಬರುತ್ತಿದ್ದೇವೆ. ರಾಜ್ಯದಲ್ಲಿ ಉತ್ತಮ ಸರಕಾರ ನಡೆಸುತ್ತಿದ್ದಾರೆ. ಚುನಾವಣೆಗೆ ಮುನ್ನ ನೀಡಿದ ಐದು ಗ್ಯಾರಂಟಿ ಕಾರ್ಯಕ್ರಮ ಜಾರಿಗೆ ಅವರೇ ಕಾರಣ. ಪ್ರತಿ ವರ್ಷ 59 ಸಾವಿರ ಕೋಟಿ ನೀಡಲಾಗುತ್ತಿದೆ. ಬೇರೆ ಯಾರೇ ಮುಖ್ಯಮಂತ್ರಿ ಆಗಿದ್ದರೂ ಈ ಯೋಜನೆಗಳನ್ನು ಕೊಡಲು ಆಗುತ್ತಿರಲಿಲ್ಲ ಎಂದರು.
ಕುರಿ ಲೆಕ್ಕಮಾಡಲು ಬಾರದ ಸಿದ್ದರಾಮಯ್ಯ ಎಲ್ಲಿ ಬಜೆಟ್ ಮಂಡಿಸುತ್ತಾರೆ ಎಂಬುದಾಗಿ ಕೆಲವರು ನುಡಿದಿದ್ದರು. ಆ ಕುರುಬ ಮುಖ್ಯಮಂತ್ರಿ ಮುಂದೆಯೇ ಈಗ ಹಲವರು ಕೈಕಟ್ಟಿ ನಿಲ್ಲುವ ಪರಿಸ್ಥಿತಿ ಇದೆ. ಸಿದ್ದರಾಮಯ್ಯ ಒಂದು ಕೋಮು, ಒಂದು ಜಾತಿಗೆ ಸೀಮಿತ ಎಂದು ವಿರೋಧ ಪಕ್ಷದವರು ಟೀಕೆ ಮಾಡುತ್ತಾರೆ ಎಂದು ಹೇಳಿದರು.
ರಾಜ್ಯಕ್ಕೆ ಸಿದ್ದರಾಮಯ್ಯ ಕೊಡುಗೆ ಅಪಾರ. ಕೋಲಾರ ಕ್ಷೇತ್ರಕ್ಕೆ 170 ಕೋಟೆ ಅನುದಾನ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಕ್ಕೆ ಜಾತಿ, ಪಕ್ಷ ಬೇಧ ಬೇಡ. ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯೋಣ. ಕನಕದಾಸರ ಹಾದಿಯಲ್ಲಿ ನಡೆಯೋಣ ದಾರ್ಶನಿಕ ಕವಿ ಕನಕದಾಸ. ದೇಶದ ಏಕೈಕ ಮಹಾಚೇತನ. ಅವರು ನಾಡಿಗೆ ನೀಡಿದ ಹಲವಾರು ವಿಚಾರಗಳ ಮೂಲಕ ಎಲ್ಲರ ಮನಸ್ಸುಗಳಲ್ಲಿ ನೆಲೆಸಿದ್ದಾರೆ. ಸಮಾಜಕ್ಕೆ ಅವರ ಕೊಡುಗೆ ಅಪಾರ. ಅವರ ಕೀರ್ತನೆಗಳು ಎಲ್ಲರಿಗೂ ಸ್ಫೂರ್ತಿ ಆಗಬೇಕು ಎಂದ ಅವರು, ಕುರುಬ ಸಮುದಾಯ ಎಂದರೆ ಹಾಲು ಮತಸ್ಥರು. ಹಾಲಿನಷ್ಟು ಪರಿಶುದ್ಧ. ಮೋಸ ಗೊತ್ತಿಲ್ಲ. ನಾವು ಎಲ್ಲರೊಂದಿಗೂ ಬೆರೆಯೋಣ ಎಂದು ಕರೆ ನೀಡಿದರು.
ಶಾಸಕ ಕೊತ್ತೂರು ಜಿ.ಮಂಜುನಾಥ್ ಮಾತನಾಡಿ, ವರ್ತೂರು ಪ್ರಕಾಶ್ ಅವರನ್ನು ಹುಲಿ ಎನ್ನುತ್ತೀರಿ. ಮನೆಯಲ್ಲಿ ಏಕೆ ಕಟ್ಟುತ್ತೀರಿ? ಬಿಟ್ಟು ಬಿಡಿ. ನಾನು ಅವರು ಸ್ನೇಹಿತರು. ರಾಜಕೀಯ ಬೇರೆ. ನಾನು ಶಾಸಕನಾಗಲು ಸಿದ್ದರಾಮಯ್ಯ ಕಾರಣ. ಅವರು ಹಾಗೂ ಕ್ಷೇತ್ರದ ಜನ ನೀಡಿದ ಭಿಕ್ಷೆ ಎಂದರು.
ಕೋಲಾರಕ್ಕೆ ವೈದ್ಯಕೀಯ ಕಾಲೇಜು ಸಿಕ್ಕಿದೆ. ಇಲ್ಲಿ 21 ಎಕರೆಯಲ್ಲಿ ಕಾಲೇಜು ಬರುತ್ತದೆ. ಹೀಗಾಗಿ, ಇಲ್ಲಿ ಕನಕ ಮೂರ್ತಿ ಸ್ಥಾಪನೆ ಮಾಡಿಲ್ಲ. ಅತಿಥಿ ಗೃಹ ಬೇರೆಡೆಗೆ ಹೋಗುತ್ತದೆ. ಬೇಗನೇ ವೈದ್ಯಕೀಯ ಕಾಲೇಜು ಮಾಡಬೇಕು ಎಂದ ಅವರು, ಕನಸದಾಸರು ಕೈಯಲ್ಲಿ ಇಟ್ಟುಕೊಂಡಿರುವ ತಂಬೂರಿ ನಮ್ಮ ಸಮುದಾಯದ ಪ್ರಮುಖ ಅಸ್ತ್ರವೆಂದು ಸ್ಮರಿಸಿದರು.
ಮಾಜಿ ಸಚಿವ, ಬಿಜೆಪಿ ಮುಖಂಡ ವರ್ತೂರು ಪ್ರಕಾಶ್ ಮಾತನಾಡಿ, ನಾನು ಯಾರಿಗೂ ಕೇರ್ ಮಾಡಲ್ಲ. ನನಗೆ ಬೇಕಿರುವುದು ಜಾತಿ ಮಾತ್ರ. ಈಚೆಗಿನ ರಾಜಕೀಯ ಬೇಸರ ತರಿಸಿದೆ. ಸಿದ್ದರಾಮಯ್ಯ ಅವರ ಪತ್ನಿ ಮೇಲೆ ಆರೋಪವು ಬೇಸರ ತರಿಸಿದೆ. ಧರ್ಮದ ಯುದ್ಧದಲ್ಲಿ ಸಿದ್ದರಾಮಯ್ಯ ಗೆಲ್ಲುತ್ತಾರೆ. ಹಾಗಂತ ನಾನೇನೂ ಕಾಂಗ್ರೆಸ್‌ಗೆ ಹೋಗಲ್ಲ. ಆದರೆ, ನಾನು ಜಾತಿ ಪ್ರೇಮಿ. ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ. ಅವರಿಗೆ ಕ್ಲೀನ್ ಚಿಟ್ ಸಿಗಲಿದೆ ಬಿಜೆಪಿಯಲ್ಲಿರುವ ಕಾರಣ ನಾನು ಪ್ರತಿಭಟನೆಗೆ ಹೋಗಿಲ್ಲ ಎಂದರು.
ಸಿದ್ದರಾಮಯ್ಯ ಅವರನ್ನು ಮಾಜಿ ಸಂಸದ ಎಸ್.ಮುನಿಸ್ವಾಮಿ ಬೈಯ್ಯುತ್ತಾರೆ. ಈಗಿನ ಸಂಸದರು ಬಾಯಿ ಬಿಡಲ್ಲ ಇವರು ಪರವಾಗಿಲ್ಲ. ಸಿದ್ದರಾಮಯ್ಯ ಅವರಿಗೆ ಸ್ವಂತ ಮನೆ ಇಲ್ಲ. ಇನ್ನು ಸೈಟ್ ತಿಂತಾರಾ? ಅವರ ಅಣ್ಣತಮ್ಮಂದಿರು ಚಡ್ಡಿಯಲ್ಲಿ ಇರುತ್ತಾರೆ. ಸಿದ್ದರಾಮಯ್ಯರಿಂದಲೇ ಕಾಂಗ್ರೆಸ್, ಅವರು ಬಿಟ್ಟರೆ ಕಾಂಗ್ರೆಸ್ ಇಲ್ಲ ಎಂದ ಅವರು, ಲೋಕಸಭಾ ಕ್ಷೇತ್ರದಲ್ಲಿ ಕುರುಬ ಸಮುದಾಯದ ಮತಗಳಿವೆ ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು.
ಕಾರ್ಯಕ್ರಮದ ನಂತರ ಕನಕದಾಸರ ಭಾವಚಿತ್ರಗಳಿದ್ದ ಪಲ್ಲಕ್ಕಿಗಳು, ಸ್ತಬ್ಧಚಿತ್ರಗಳ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಚಾಲನೆ ನೀಡಿದರು. ನಗರದ ಕನಕ ಮಂದಿರ ಮುಂಭಾಗದಿಂದ ಸ್ತಬ್ಧ ಚಿತ್ರಗಳ ಮೆರವಣಿಗೆಯು ಡೂಂಲೈಟ್ ವೃತ್ತ, ಎಂಜಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಮಾಜಿ ಸಂಸದ ಎಸ್.ಮುನಿಸ್ವಾಮಿ ತಮಟೆ ಸದ್ದಿಗೆ ನೃತ್ಯ ಮಾಡಿದರೆ, ಶಾಸಕ ಕೊತ್ತೂರು ಮಂಜುನಾಥ್ ಪಲ್ಲಕ್ಕಿಯಿದ್ದ ಟ್ರಾಕ್ಟರ್ ಚಾಲನೆ ಮಾಡಿ ಗಮನಸೆಳೆದರು. ಮೆರವಣಿಗೆಯಲ್ಲಿ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಸಂಸದ ಎಂ.ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್.ಅನಿಲ್ ಕುಮಾರ್, ಇಂಚರ ಗೋವಿಂದರಾಜು, ಕುರುಬರ ಸಂಘದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ, ನಗರಸಭೆ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಮಾಜಿ ಸಂಸದ ಎಸ್.ಮುನಿಸ್ವಾಮಿ, ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್, ಮುಖಂಡರಾದ ಚಂಜಿಮಲೆ ರಮೇಶ್, ಸೀಸಂದ್ರ ಗೋಪಾಲಗೌಡ, ಪ್ರಸಾದ ಬಾಬು, ಮಾರ್ಜೇನಹಳ್ಳಿ ಬಾಬು, ಮೈಲಾಂಡಹಳ್ಳಿ ಮುರಳಿ, ವಕ್ಕಲೇರಿ ರಾಜಪ್ಪ, ವೈ.ಶಿವಕುಮಾರ್, ಜಿಲ್ಲಾಧಿಕಾರಿ ಅಕ್ರಂ ಪಾಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್, ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಮಂಗಳಾ, ಉಪವಿಭಾಗಾಧಿಕಾರಿ ಮೈತ್ರಿ, ತಹಶೀಲ್ದಾರ್ ನಯನಾ ಇದ್ದರು.