ಕುರಿ ಕಳ್ಳತನ ಮಾಡುವಾಗ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದ ಕಳ್ಳ: ಕಂಬಕ್ಕೆ ಕಟ್ಟಿಹಾಕಿ ಬೆವರಿಳಿಸಿದ ಗ್ರಾಮಸ್ಥರು

ಮನೆ ಬಳಿ ಕಟ್ಟಿಹಾಕಲಾಗಿರುವ ಕುರಿಗಳನ್ನು ಕಳ್ಳತನ ಮಾಡುತ್ತಿದ್ದ ಎಂದು ಆರೋಪಿಸಿ ವ್ಯಕ್ತಿಯೋರ್ವನನ್ನ ಕಂಬಕ್ಕೆ ಹಗ್ಗದಿಂದ ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ತಡರಾತ್ರಿ ಸುಮಾರು 1:30ರ ಸಮಯದಲ್ಲಿ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಮಟ್ಟಬಾರ್ಲು ಗ್ರಾಮದಲ್ಲಿ ನಡೆದಿದೆ.

ಇಬ್ಬರು ಕಳ್ಳರು ಬೈಕ್ ನಲ್ಲಿ ಬಂದು ಹೊಂಚುಹಾಕಿ ಕುರಿಗಳನ್ನ ಕಳ್ಳತನಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಸ್ಥಳೀಯರು ನೋಡಿ ಕೂಡಲೇ ಕಳ್ಳರನ್ನ ಹಿಡಿಯಲು ಮುಂದಾಗಿದ್ದಾರೆ. ಇಬ್ಬರು ಕಳ್ಳರಲ್ಲಿ ಒಬ್ಬ ಮಾತ್ರ ಸಿಕ್ಕಿಬಿದ್ದಿದ್ದು, ಇನ್ನೊಬ್ಬ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಒದಗಿಬಂದಿದೆ.

ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕುರಿ, ಮೇಕೆ ಸೇರಿದಂತೆ ಜಾನುವಾರುಗಳ ಕಳ್ಳತನ ಎಗ್ಗಿಲ್ಲದೆ ನಡೆಯುತ್ತಿದೆ. ಇದರಿಂದ ರೈತರು ತೀವ್ರವಾಗಿ ಸಂಕಷ್ಟಕ್ಕೆ ಒಳಗಾಗಿ ಆತಂಕದಲ್ಲಿ ತಮ್ಮ ಜೀವನ ನಡೆಸುತ್ತಿದ್ದಾರೆ.

ಕುರಿ, ಮೇಕೆ, ಜಾನುವಾರುಗಳನ್ನ ಕಳ್ಳತನ ಮಾಡುವವರನ್ನ ಪತ್ತೆಹಚ್ಚಿ, ಕಳ್ಳರ ಉಪಟಳವನ್ನ ಮಟ್ಟಹಾಕಬೇಕು. ರೈತರು ನೆಮ್ಮದಿ ಬದುಕು ನಡೆಸಲು ಅನುವುಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *