ತೆಲಂಗಾಣದ ಹನುಮಕೊಂಡದ ರೆಡ್ಡಿಪುರಂ ಕೋವೆಲಕುಂಟಾ ನಿವಾಸಿಗಳು ಸ್ಥಳೀಯ ಕೆರೆಯಲ್ಲಿ ತೇಲುತ್ತಿರುವ ಶವ ಎಂದು ಆರಂಭದಲ್ಲಿ ನಂಬಿದ್ದನ್ನು ಕಂಡು ದಿಗ್ಭ್ರಮೆಗೊಂಡಿದ್ದಾರೆ.
ಕುಡಿದ ನಶೆಯಲ್ಲಿ ಬರೋಬ್ಬರಿ 5 ಗಂಟೆಗಳ ಕಾಲ ಕೊಳದಲ್ಲಿ ಅಲುಗಾಡದೇ ಸತ್ತ ಹೆಣದ ರೀತಿಯಲ್ಲಿ ಮಲಗಿದ್ದ ವ್ಯಕ್ತಿ ನೆಲ್ಲೂರು ಜಿಲ್ಲೆಯ ಕವಲಿಯ ಕ್ವಾರಿ ಕೆಲಸಗಾರ ಎಂದು ಗುರುತಿಸಲಾಗಿದೆ. ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ರವರೆಗೆ ನೀರಿನಲ್ಲಿ ಚಲನರಹಿತವಾಗಿ ಬಿದ್ದಿರುವುದು ಕಂಡುಬಂದಿತ್ತು.
ಈ ದೃಶ್ಯದಿಂದ ಆತಂಕಗೊಂಡ ಸ್ಥಳೀಯರು ತಕ್ಷಣವೇ ಕಾಕತೀಯ ವಿಶ್ವವಿದ್ಯಾಲಯ (ಕೆಯು) ಪೊಲೀಸ್ ಮತ್ತು ತುರ್ತು ವೈದ್ಯಕೀಯ ಸೇವೆಗಳಿಗೆ (108 ಸಿಬ್ಬಂದಿ) ಮಾಹಿತಿ ನೀಡಿದರು.
ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದಾಗ ಆರಂಭದಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಭಾವಿಸಿದರು. ಆದರೆ, ಎಲ್ಲರಿಗೂ ಆಶ್ಚರ್ಯವಾಗುವಂತೆ, ಆ ವ್ಯಕ್ತಿ ಇದ್ದಕ್ಕಿದ್ದಂತೆ ನೀರಿನಿಂದ ಎದ್ದು ಬಂದನು.
ಆ ವ್ಯಕ್ತಿ ಸತ್ತಿಲ್ಲ, ಆದರೆ, ಕಂಠಪೂರ್ತಿ ಕುಡಿದು ನೀರಲ್ಲಿ ಮಲಗಿದ್ದಾನೆ ತಿಳಿದುಬಂದಿದೆ. ನೀರಿನಿಂದ ಎದ್ದು ಬಂದು ಕಳೆದ ಹತ್ತು ದಿನಗಳಿಂದ ಗ್ರಾನೈಟ್ ಕ್ವಾರಿಯಲ್ಲಿ 12 ಗಂಟೆ ಪಾಳಿ ಸಹಿಸಿಕೊಂಡು ಕೆಲಸ ಮಾಡುತ್ತಿದ್ದ ಎಂದು ಪೊಲೀಸರ ಬಳಿ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.
ತನ್ನ ಕೆಲಸದ ಒತ್ತಡದಿಂದ ಸ್ವಲ್ಪ ಸುಧಾರಿಸಿಕೊಳ್ಳಲು ಕೊಳದಲ್ಲಿ ಸ್ನಾನ ಮಾಡಲು ನಿರ್ಧರಿಸಿ, ಅಲ್ಲೇ ಕೆಲ ಕಾಲ ನಿದ್ದೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.