ಕುಡಿದ ಮತ್ತಿನಲ್ಲಿ ಕುಡುಕರ ಗುಂಪೊಂದು ಮಚ್ಚು-ಲಾಂಗ್ ಝುಳಪಿಸಿ ಗ್ರಾಮಸ್ಥರ ಮೇಲೆ ದಾಂಧಲೆ ನಡೆಸಿರುವ ಘಟನೆ ಭಾನುವಾರ ರಾತ್ರಿ ಸುಮಾರು 8 ಗಂಟೆಯಲ್ಲಿ ತಾಲೂಕಿನ ಪಾಲ್ ಪಾಲ್ ದಿನ್ನೆ ಗ್ರಾಮದಲ್ಲಿ ನಡೆದಿದೆ.
ಬೆಂಗಳೂರಿನ ಯುವಕರ ಗುಂಪೊಂದು ಪಾಲ್ ಪಾಲ್ ದಿನ್ನೆ ಗ್ರಾಮದ ತೋಟವೊಂದರಲ್ಲಿ ಎಣ್ಣೆ ಪಾರ್ಟಿ ಮಾಡಲು ಬಂದಿತ್ತು. ಬೆಳಗ್ಗೆಯಿಂದ ಸಂಜೆವರೆಗೂ ಕುಡಿದು ಇನ್ನೇನು ಮನೆಗಳಿಗೆ ತೆರಳುವಾಗ ಪಾಲ್ ಪಾಲ್ ದಿನ್ನೆ ಬಸ್‌ಸ್ಟಾಂಡ್ ಬಳಿ ಬಂದು ನಡು ರಸ್ತೆಯಲ್ಲಿ ಖಾಲಿ ಎಣ್ಣೆ ಬಾಟಲಿಗಳನ್ನು ಹೊಡೆದು ವಾಹನ ಸವಾರರಿಗೆ ಕಿರಿಕಿರಿ ಮಾಡುತ್ತಿದ್ದರು. ಇದನ್ನು ಗಮನಿಸಿದ ಗ್ರಾಮಸ್ಥನೊಬ್ಬ ಪ್ರಶ್ನೆ ಮಾಡೋದಕ್ಕೆ ಹೋದಾಗ ಗಲಾಟೆ ಶುರುವಾಗಿದೆ ಎಂದು ಊರಿನ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಮತ್ತಿನಲ್ಲಿದ್ದ ದಾಂಡಿಗರು ಸಿಕ್ಕಸಿಕ್ಕವರ ಮೇಲೆ ಹಲ್ಲೆ ನಡೆಸುವುದಕ್ಕೆ ಮುಂದಾಗಿ ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿ ಮಾಡಿದ್ದರು.
ಊರಿನ ಗ್ರಾಮಸ್ಥರೆಲ್ಲಾ ಒಂದಾಗಿ ಕುಡುಕರ ಹುಚ್ಚಾಟವನ್ನು ನಿಯಂತ್ರಿಸಲು ಬಂದಾಗ ದಿಕ್ಕಾಪಾಲಾಗಿ ಓಡಿಹೋದ ಕೆಲ ಕಿರಿಕ್ ಪಾರ್ಟಿಗಳು, ಕೆಲವರು ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೂಡಲೇ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ ಗ್ರಾಮಸ್ಥರು. ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದ ದಾಂಡಿಗರನ್ನು ಠಾಣೆಗೆ ಕರೆದೊಯ್ದು ವಿಚಾರ ಮುಂದುವರಿಸಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.